ಮಂಗಳೂರು: ಕರಾವಳಿಯ ಈ ಪ್ರದೇಶ ಭರತನಾಟ್ಯ ಸಹಿತ ಲಲಿತಕಲೆಗಳಿಗೆ ವಿಶೇಷ ಪ್ರೋತ್ಸಾಹದ ಪರಂಪರೆ ಹೊಂದಿದೆ ಎಂದು ಅಂತಾರಾಷ್ಟ್ರೀಯ ಖ್ಯಾತಿಯ ಭರತನಾಟ್ಯ ಕಲಾವಿದೆ ಗುರು ಡಾ| ಪದ್ಮಾ ಸುಬ್ರಹ್ಮಣ್ಯಂ ಶ್ಲಾಘಿಸಿದರು.
ಜಿಟಿ ಪ್ರತಿಷ್ಠಾನದ ವತಿಯಿಂದ ಮ್ಯಾನೇಜಿಂಗ್ ಟ್ರಸ್ಟಿ ಡಾ| ವಿ. ರವಿಚಂದ್ರನ್ ನೇತೃತ್ವದಲ್ಲಿ ಪುರ
ಭವನದಲ್ಲಿ ಫೆ. 8ರಂದು ಜರಗಿದ “ತೇಜೋದಿಯಾ’ ಸಮಾರಂಭದಲ್ಲಿ ಡಾ| ಪದ್ಮಾ ಮತ್ತು ಅಕ್ಷರ ಸಂತ ಹರೇಕಳ ಹಾಜಬ್ಬ ಅವರನ್ನು ಸಮ್ಮಾನಿಸಲಾಯಿತು. ಜಿಟಿ ಸಂಸ್ಥೆ ಪ್ರತೀ ವರ್ಷ ಈ ರೀತಿಯ ಕಲಾ ರಾಧನೆ ಏರ್ಪಡಿಸುತ್ತಿರುವುದು ಆದರ್ಶಯುತವಾಗಿದೆ ಎಂದು ಪದ್ಮಾ ಹೇಳಿದರು. ಅಕ್ಷರ ಕ್ರಾಂತಿಯಿಂದಲೇ ಯಶಸ್ಸು ಎಂದು ಹಾಜಬ್ಬ ಅಭಿ ಪ್ರಾಯಪಟ್ಟರು.
ಚೆನ್ನೈಯ ಟಿಎಜಿ-ವಿಎಚ್‌ಎಸ್‌ನ ಅಧ್ಯಕ್ಷ ಡಾ| ಸಿ.ವಿ. ಕೃಷ್ಣ ಸ್ವಾಮಿ, ಮಂಗಳೂರು ನಗರ ಪಾಲಿಕೆಯ ಆಯುಕ್ತ ಮೊಹಮ್ಮದ್ ನಜೀರ್ ಮುಖ್ಯ ಅತಿಥಿಗಳಾಗಿದ್ದರು. ಡಾ| ಬಿ.ಎಂ. ಹೆಗ್ಡೆ ಮತ್ತು ಇಸ್ಮತ್ ಪಜೀರು ಸಮ್ಮಾನಿತರ ಪರಿಚಯ ಮಾಡಿದರು.
ಡಾ| ವಿ. ರವಿಚಂದ್ರನ್ ಸ್ವಾಗತಿಸಿದರು. ಜಿಟಿ ಪ್ರತಿಷ್ಠಾನ ತನ್ನ ಸಾಮಾಜಿಕ ಬದ್ಧತೆ ನೆಲೆಯಲ್ಲಿ ಪ್ರತೀ ವರ್ಷ ಕಲಾರಾಧನೆ, ಸಮಾಜದ ವಿವಿಧ ಅಗತ್ಯಗಳಿಗೆ ಸ್ಪಂದಿಸುತ್ತಿದೆ ಎಂದರು.
ಟ್ರಸ್ಟಿಗಳಾದ ಇಂದಿರಾ ರವಿಚಂದ್ರನ್ ಉಪಸ್ಥಿತರಿದ್ದರು. ಹಿರಿಯ ಪ್ರಬಂಧಕ ಶ್ರೀನಿವಾಸ ಭಟ್ ವಂದಿಸಿದರು.
ಜಿಟಿ ವತಿಯಿಂದ ಮಂಗಳೂರು ರೋಟರಿ ಕ್ಲಬ್‌ನ ಸಾಮಾಜಿಕ ಯೋಜನೆಗಳಿಗೆ ನೀರು ಶುದ್ಧತಾ ಘಟಕಗಳನ್ನು ನೀಡಲಾಯಿತು. ಅಕ್ಷಯ ಪಾತ್ರಾ ಪ್ರತಿಷ್ಠಾನದ ಸಹಯೋಗದಲ್ಲಿ ಮಕ್ಕಳಿಗೆ ಮಧ್ಯಾಹ್ನದ ಊಟದ ಯೋಜನೆ ಅನುಷ್ಠಾನಿಸಲಾಯಿತು.