ಥಾಣೆ : ಅಘಾತಕಾರಿ ಪ್ರಕರಣವೊಂದರಲ್ಲಿ ಕೇಂದ್ರ ಸಚಿವ, ದಲಿತ ನಾಯಕ ಮತ್ತು ಆರ್‌ಪಿಐ ಪಕ್ಷದ ಮುಖಂಡ ರಾಮ್‌ದಾಸ್ ಅಠವಳೆ ಅವರ ಮೇಲೆ ಯುವಕನೊಬ್ಬ ಹಲ್ಲೆ ನಡೆಸಿದ ಘಟನೆ ಶನಿವಾರ ತಡರಾತ್ರಿ ಅಂಬರ್‌ನಾಥ್‌ನಲ್ಲಿ ನಡೆದಿದೆ.
ಘಟನೆ ಬಳಿಕ ಆರ್‌ಪಿಐ ಕಾರ್ಯಕರ್ತರು ಉದ್ರಿಕ್ತರಾಗಿದ್ದು, ಮಹಾರಾಷ್ಟ್ರ ಬಂದ್ ನಡೆಸಲು ಕರೆ ನೀಡಿದ್ದು ಪ್ರತಿಭಟನೆಗಿಳಿದಿದ್ದಾರೆ.
ಅಠವಳೆ ಅವರು ವೇದಿಕೆಯಿಂದ ಇಳಿದು ಜನರೊಂದಿಗೆ ಬೆರೆಯಲು ಮುಂದಾದಾಗ ಏಕಾಏಕಿ ಬಂದ ಪ್ರವೀಣ್ ಗೋಸಾವಿ ಎಂಬ ಯುವಕ ಕೃತ್ಯ ಎಸಗಿದ್ದಾನೆ. ಸಚಿವರನ್ನು ತಳ್ಳಿ ಮುಖಕ್ಕೆ ಹಲ್ಲೆ ನಡೆಸಿಯೇ ಬಿಟ್ಟಿದ್ದಾನೆ.
Related Articles
ತಕ್ಷಣ ಭದ್ರತಾ ಸಿಬಂದಿಗಳು ಆಗಮಿಸಿ ದಾಳಿ ನಡೆಸಿದ ಪ್ರವೀಣ್‌ನನ್ನು ನೆಲಕ್ಕೆ ಕೆಡವಿದ್ದಾರೆ. ಸ್ಥಳದಲ್ಲಿದ್ದವರು ಆಕ್ರೋಶಗೊಂಡು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡಿರುವ ಆರೋಪಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಆತ ಆರ್‌ಪಿಐ ಯುವ ಘಟಕದ ಕಾರ್ಯಕರ್ತ ಎನ್ನಲಾಗಿದೆ.
ಸಚಿವರ ಮೇಲೆ ಹಲ್ಲೆ ನಡೆಸಿದ ಸುದ್ದಿ ಕಾಡ್ಗಿಚ್ಚಿನಂತೆ ಹರಡಿ ನೂರಾರು ಬೆಂಬಲಿಗರು ಸಚಿವರ ಮನೆಯ ಮುಂದೆ ಜಮಾಯಿಸಿದರು.
ಘಟನೆಯ ಬಳಿಕ ಅಠವಳೆ ಅವರು ಮುಂಬಯಿಗೆ ಮರಳಿದ್ದಾರೆ. ಭಾನುವಾರ ಅಠವಳೆ ಅಭಿಮಾನಿಗಳು ಮಹಾರಾಷ್ಟ್ರ ಬಂದ್‌ಗೆ ಕರೆ ನೀಡಿದ್ದು, ಇದು ಪೂರ್ವ ನಿಯೋಜಿತ ಕೃತ್ಯ. ದಾಳಿಯ ಹಿಂದೆ ಇರುವ ಮಾಸ್ಟರ್ ಮೈಂಡ್‌ನನ್ನು ತಕ್ಷಣ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಾಗಿದ್ದು ತನಿಖೆಯನ್ನು ಮುಂದುವರಿಸಲಾಗಿದೆ.
ಸಿಎಂ ಭೇಟಿಯಾಗುತ್ತೇನೆ
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾಗಿ ಸೂಕ್ತ ತನಿಖೆ ನಡೆಸಬೇಕು ಎಂದು ಮನವಿ ಮಾಡುತ್ತೇನೆ ಎಂದು ಭಾನುವಾರ ಅಠವಳೆ ಅವರು ಹೇಳಿದ್ದಾರೆ.