ಧಾರವಾಡ: ಲೋಕಸಭೆ ಬಿಜೆಪಿ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಧಾರವಾಡದ ಮುರಘಾ ಮಠಕ್ಕೆ ಭೇಟಿ ನೀಡಿ, ಶ್ರೀಗಳ ದರ್ಶನ ಪಡೆದು ಆರ್ಶೀವಾದ ಪಡೆದರು.
ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, 20 ಸ್ಥಾನಗಳಿಗೆ ಅಭ್ಯರ್ಥಿ ಆಯ್ಕೆ ಮಾಡಲಾಗಿದೆ. ಸಬಕಾ ಸಾಥ್ ಸಬಕಾ ಸಾಥ್ ವಿಕಾಸದ ಯೋಜನೆಯಡಿ ಎಲ್ಲರಿಗೂ ಟಿಕೆಟ್ ಹಂಚಿಕೆ ಮಾಡಲಾಗಿದೆ. ನರೇಂದ್ರ ಮೋದಿ ಅವರ ಕಾಲದಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳು ಆಗಿವೆ ಎಂದರು.
ಈ ಬಾರಿ ನಾನು 3 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುತ್ತೇನೆ. ಅಭಿವೃದ್ಧಿ ಕೆಲಸಗಳಿಂದ ಜನರು ನನಗೆ ಬಹುದೊಡ್ಡ ಜವಾಬ್ದಾರಿ ಕೊಟ್ಟಿದ್ದಾರೆ ಎಂದು ಆತ್ಮ ವಿಶ್ವಾಸ ವ್ಯಕ್ತ ಪಡಿಸಿದರು.
ಕೊಪ್ಪಳದ ಸಂಗಣ ಕರಡಿಯವರನ್ನು ಕರೆದು ಮಾತನಾಡುವೆ. ಕೆಲವೊಂದು ಕಡೆಗಳಲ್ಲಿ ಟಿಕೆಟ್ ಮಿಸ್ ಆಗಿವೆ. ಅಲ್ಲಿನ ಪರಿಸ್ಥಿತಿಯನ್ನು ನೋಡಿಕೊಂಡು ನಿರ್ಧಾರ ಮಾಡಿದ್ದಾರೆ. ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಯಾರೂ ಕೂಡ ಬಿಜೆಪಿ ಬಿಟ್ಟು ಹೋಗುವುದಿಲ್ಲ. ನಾನು ನಾಲ್ಕು ಬಾರಿ ಸಂಸದನಾಗಿ ಕೆಲಸ ಮಾಡಿದ್ದೇನೆ. ವಿಕಸಿತ ಭಾರತ ಧಾರವಾಡ ಲೋಕಸಭಾ ಕ್ಷೇತ್ರವೂ ಆಗಿದೆ. ಹೀಗಾಗಿ ಐದನೇ ಬಾರಿಗೆ ನನಗೆ ಜನರು ಆರ್ಶೀವಾದ ಮಾಡುತ್ತಾರೆ ಎಂದು ಜೋಶಿ ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಸೀಮಾ ಮಸೂತಿ, ಅಮೃತ ದೇಸಾಯಿ, ಮಾಜಿ ಮೇಯರ್ ಈರೇಶ ಅಂಚಟಗೇರಿ ಸೇರಿದಂತೆ ಬಿಜೆಪಿಯ ಪ್ರಮುಖರು ಉಪಸ್ಥಿತರಿದ್ದರು.