ಬೆಂಗಳೂರು: ಬಿಜೆಪಿ ವತಿಯಿಂದ ನಡೆಯುತ್ತಿರುವ ಬೆಂಗಳೂರು ರಕ್ಷಿಸಿ ಪಾದಯಾತ್ರೆ ಜತೆ ಜತೆಗೆ ನಗರದ ಯುವ ಮತದಾರರನ್ನು ಆಕರ್ಷಿಸಲು ಪ್ರಧಾನಿ ಮೋದಿ ನೇತೃತ್ವದ ಸರ್ಕಾರದಲ್ಲಿರುವ ಯುವ ಸಚಿವರು ರಾಜಧಾನಿಯತ್ತ ಬರಲಿದ್ದಾರೆ.
ಕೇಂದ್ರ ಸಚಿವರಾದ ರಾಜ್ಯವರ್ದನ್ ಸಿಂಗ್ ರಾಥೋಡ್, ರಾಜೀವ್ ಪ್ರತಾಪ್ ರೂಢಿ, ಜಿತೇಂದ್ರ ಸಿಂಗ್, ಬಾಬುಲ್ ಸುಪ್ರಿಯೋ, ಕಿರಣ್ ರಿಜುಜು, ಸ್ಮತಿ ಇರಾನಿ, ಅನುಪ್ರಿಯಾ ಪಟೇಲ್ ಮುಂದಿನ ಒಂದು ವಾರದಲ್ಲಿ ಬೆಂಗಳೂರಿಗೆ
ಬರಲಿದ್ದು, ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವುದರ ಜತೆಗೆ ಮತದಾರರನ್ನು ಭೇಟಿ ಮಾಡಿ ಬಿಜೆಪಿ ಸರ್ಕಾರದ ಸಾಧನೆಗಳನ್ನು ಜನರ ಮುಂದಿಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಉದ್ಯಾನಗಳು, ಮಾಲ್‌ಗಳು ಸೇರಿ ಜನನಿಬಿಡ ಪ್ರದೇಶಗಳಿಗೆ ಭೇಟಿ ನೀಡಲಿರುವ ಸಚಿವರು ಚಾಯ್‌ಪೇ ಚರ್ಚಾ, ಸಂವಾದ ನಡೆಸಿ ರಾಜ್ಯಕ್ಕೆ ಬಿಜೆಪಿ ಸರ್ಕಾರದ ಅಗತ್ಯತೆಗಳನ್ನು ತಿಳಿಸಲಿದ್ದಾರೆ.
ಮಾರ್ಚ್ ಅಂತ್ಯದ ವೇಳೆ 50ಕ್ಕೂ ಹೆಚ್ಚು ಪ್ರಮುಖರು ಬೆಂಗಳೂರು ನಾಗರಿಕರೊಂದಿಗೆ ಸಂವಾದ ನಡೆಸಬೇಕೆಂಬ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ ಎಂದು ಪಕ್ಷದ ಮೂಲಗಳು ಹೇಳಿವೆ.