Advertisement

ರಾಷ್ಟ್ರೀಯ ಶಿಕ್ಷಣ ನೀತಿಗೆ ಚಾಲನೆ ನೀಡಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್

02:12 PM Aug 23, 2021 | Team Udayavani |

ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿಯು ಹೊಸ ಜ್ಞಾನಾಧಾರಿತ ವ್ಯವಸ್ಥೆಯನ್ನು ರಚನೆ ಮಾಡಲಿದೆ. ಜತೆಗೆ ಅನುಷ್ಠಾನದಲ್ಲಿರುವ ಹಲವು ಸವಾಲುಗಳಿಗೆ ಸೂಕ್ಷ್ಮ ರೀತಿಯಲ್ಲಿ ಪರಿಹಾರ ಕಂಡುಕೊಳ್ಳಬೇಕು ಎಂದು ಕೇಂದ್ರ ಶಿಕ್ಷಣ ಸಚಿವ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದರು.

Advertisement

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ, 2021-22ನೇ ಸಾಲಿನ ಪ್ರವೇಶ ಪ್ರಕ್ರಿಯೆಗೆ ವರ್ಚುವಲ್ ವ್ಯವಸ್ಥೆ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದಲ್ಲಿ ಕರ್ನಾಟಕ ಸಾಕಷ್ಟು ಮುಂದಿದೆ. ನೀತಿ ಅನುಷ್ಠಾನದಲ್ಲಿ ಎದುರಾಗಬಹುದಾದ ಸವಾಲುಗಳನ್ನು ಸಮರ್ಪಕವಾಗಿ ಎದುರಿಸಬೇಕು ಎಂದು‌ ಸಲಹೆ ನೀಡಿದರು.

ಜಡ್ಡುಕಟ್ಟಿದ ವ್ಯವಸ್ಥೆಗೆ ಮುಕ್ತಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಸದ್ಯ ಶಿಕ್ಷಣದಲ್ಲಿರುವ ಜಡ್ಡುಕಟ್ಟಿದ ವ್ಯವಸ್ಥೆ ಮತ್ತು ನೀತಿಗೆ ಎನ್ಇಪಿಯಿಂದ ಮುಕ್ತಿ ಸಿಗಲಿದೆ. ಶಿಕ್ಷಣಕ್ಕೆ ಇಂದು ನಿಜವಾದ ಸ್ವಾತಂತ್ರ್ಯ ಸಿಕ್ಕಿದ್ದು, ಇಂದು ಮಾತ್ರವಲ್ಲ ಮುಂದಿನ ಜನಾಂಗಕ್ಕೂ ಇದು ಸ್ವಾತಂತ್ರ್ಯವೇ ಆಗಲಿದೆ. ಎನ್ಇಪಿ ಯಶಸ್ವಿಯಾದಲ್ಲಿ ಪ್ರತಿವರ್ಷ ಆಗಸ್ಟ್ 23 ಶಿಕ್ಷಣ ದಿನಾಚರಣೆಯಾಗಿ ಅಚರಿಸುವ ದಿನ ಬರಲಿದೆ ಎಂದರು.

ಪ್ರಧಾನಿ ಮೋದಿಯವರು ದೂರದೃಷ್ಟಿಯ ನಾಯಕರಾಗಿದ್ದು, ಶಿಕ್ಷಣ ವ್ಯವಸ್ಥೆಯ ಮೂಲಭೂತ ಬದಲಾವಣೆಗೆ ಎನ್ಇಪಿ ಸಾಕ್ಷ್ಯಿಯಾಗಲಿದೆ. ಅನುಷ್ಠಾನವೇ ದೊಡ್ಡ ಸವಾಲಾಗಿದೆ. ಅದನ್ನು ಬುದ್ದಿವಂತಿಕೆಯಿಂದ ಅನುಷ್ಠಾನ ಮಾಡಬೇಕು. ಇಲಾಖೆ ಆಧಾರಿತ ಶಿಕ್ಷದ ಬದಲಿಗೆ ವಿದ್ಯಾರ್ಥಿ ಆಧಾರಿತ ಶಿಕ್ಷಣ ವ್ಯವಸ್ಥೆ ಜಾರಿಯಾಗಬೇಕು. ಈ ನಿಟ್ಟಿನಲ್ಲಿ ಎನ್ಇಪಿ ಸಾಕಷ್ಟು ಬದಲಾವಣೆ ತರಲಿದೆ. ವಿದ್ಯಾರ್ಥಿಗಳ ಕ್ರಿಯಾತ್ಮಕತೆ, ಜ್ಞಾನವನ್ನು ಪೂರ್ಣಪ್ರಮಾಣದ ಅಭಿವ್ಯಕ್ತಿಗೆ ಸಹಕಾರಿಯಾಗಲಿದೆ. ವಿದ್ಯಾರ್ಥಿಯ ಕ್ರಿಯಾಶೀಲತೆಗೆ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ:ಪೌರತ್ವ ತಿದ್ದುಪಡಿ ಕಾಯ್ದೆ ಅಗತ್ಯ ಏಕೆ ಎನ್ನುವುದು ಈಗ ತಿಳಿಯುತ್ತಿದೆ: ಹರ್ದೀಪ್ ಸಿಂಗ್ ಪುರಿ

Advertisement

ಹಿಂದೆ ಮೌಲ್ಯಾಧಾರಿತ ಜ್ಞಾನ ಇತ್ತು. ಆ ಜ್ಞಾನಕ್ಕೆ ವಿಜ್ಞಾನ ಸೇರಿತು. ಇದರಿಂದ ಸಂಶೋಧನೆ, ಅನ್ವೇಷಣೆ ಆರಂಭವಾಯಿತು. ವಿಜ್ಞಾನದ ನಂತರ ತಂತ್ರಜ್ಞಾನ ಬಂತು, ತಂತ್ರಜ್ಞಾನವನ್ಬು ಮೀರಿಸುವ ತಂತ್ರಾಂಶ ವಿಜ್ಞಾನ ಬಂದಿದೆ. ಇದನ್ನು ಯಾರು ಪರಿಣಾಮಕಾರಿಯಾಗಿ ಬಳಸಿಕೊಂಡಾಗ ಪರಿವರ್ತನೆ ಸಾಧ್ಯ. ಮಕ್ಕಳಿಗೆ ತಂತ್ರಾಂಶ ಜ್ಞಾನವನ್ಹು ನೀಡಬೇಕು ಎಂದರು.

ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾತನಾಡಿ, ಐದು ವರ್ಷದ ಸುದೀರ್ಘ ಸಮಾಲೋಚನೆ, ಎಲ್ಲರಿಂದ ಮಾಹಿತಿ ಪಡೆದು ನೀತಿ ರಚಿಸಲಾಗಿದೆ. ಸಾಮಾಜಿಕ ಆರ್ಥಿಕ ಸೇರಿದಂತೆ ಎಲ್ಲ ರೀತಿಯ ಸಮಸ್ಯೆಗೆ ಶಿಕ್ಷಣ ಹಾಗೂ ಕೌಶಲತೆಯೇ ಪರಿಹಾರವಾಗಿದೆ. ಗುಣಮಟ್ಟದ ಶಿಕ್ಷಣ ನೀಡಲು ಅಡ್ಡಿಯಾಗುತ್ತಿರುವ ಲೋಪದೋಷಗಳು ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಪರಿಹಾರ ಸಿಗಲಿದೆ.  ಕರ್ನಾಟಕ ಉನ್ನತ ಮಟ್ಟದ ಸ್ಥಾನ ಪಡೆಯಲು ಶಿಕ್ಷಣದಿಂದಲೇ ಸಾಧ್ಯ. ಎಲ್ಲರ ವೈಯಕ್ತಿಕ, ಸಮಾಜ ಹಾಗೂ ಸರ್ಕಾರದ ಸಂಪನ್ಮೂಲ ಒಟ್ಟಾಗಿ ಶಿಕ್ಷಣ ಕ್ಷೇತ್ರವನ್ನು ಸದೃಢಗೊಳಿಸಬೇಕು. ತಾಂತ್ರಿಕ ಶಿಕ್ಷಣದಲ್ಲೂ ಅಮೂಲಾಗ್ರ ಬದಲಾವಣೆ ಆಗಲಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆಯ ಜತೆಗೆ ಬೋಧನ ವಿಧಾನದಲ್ಲೂ ಬದಲಾಗಬೇಕು. ಉಪನ್ಯಾಸಕರು ಬದಲಾವಣೆಗೆ ಒಗ್ಗಿಕೊಳ್ಳಬೇಕು. ಸರ್ಕಾರವೂ ಇದಕ್ಕೆ ಬೇಕಾದ ಎಲ್ಲ ಸೌಲಭ್ಯವನ್ನು ಒದಗಿಸಲಿದೆ ಎಂದರು.

ಪ್ರಾಥಮಿಕ ಹಾಗೂ ಪ್ರೌಡಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾತನಾಡಿ, ಈವರೆಗೆ ಮಾತೃಭಾಷೆಯಲ್ಲಿ‌ ಶಿಕ್ಷಣಕ್ಕೆ ಒತ್ತು ನೀಡಿಲ್ಲ.‌ ಎನ್ಇಪಿಯಲ್ಲಿ ಮಕ್ಕಳ ಭಾವನೆ ಅರ್ಥೈಸಿಕೊಂಡು, ಮಾತೃಭಾಷಾ ಶಿಕ್ಷಣಕ್ಕೆ ಆಧ್ಯತೆ ನೀಡಿ, ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲಿದ್ದೇವೆ ಎಂದರು.

ಡಾ.ಕೆ.ಕಸ್ತೂರಿ ರಂಗನ್ ಮಾತನಾಡಿ, ಜ್ಞಾನಾಧಾರಿತ ಸದೃಢ ಸಮಾಜ ನಿರ್ಮಾಣಕ್ಕೆ ಎನ್ಇಪಿ ಸಹಕಾರಿಯಾಗಲಿದೆ. ವಿಶ್ವವಿದ್ಯಾಲಯ ವ್ಯವಸ್ಥೆಯಲ್ಲೂ ಒಂದಷ್ಟು ಬದಲಾವಣೆ ಬರಲಿದೆ. ನೀತಿಯು ಭವಿಷ್ಯದ ಶೈಕ್ಷಣಿಕ ಆದ್ಯತೆಗಳನ್ನು ಆಧರಿಸಿ ರೂಪಿಸಲಾಗಿದೆ ಎಂದು ಹೇಳಿದರು.

ಉನ್ನತ ಶಿಕ್ಷಣ ಇಲಾಖೆಯ ಪ್ರಭಾರ ಪ್ರಧಾನ ಕಾರ್ಯದರ್ಶಿ ಕುಮಾರ್ ನಾಯಕ್, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್, ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ ಪಿ.ಪ್ರದೀಪ್ ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next