Advertisement

ಕೇಂದ್ರ ಗೃಹ ಮಂತ್ರಿ ವಜಾಕ್ಕೆ ಆಗ್ರಹ

02:29 PM Oct 04, 2018 | Team Udayavani |

ಕೋಲಾರ: ದೆಹಲಿಯಲ್ಲಿ ಕಿಸಾನ್‌ ಕ್ರಾಂತಿ ರೈತ ಹೋರಾಟಗಾರರ ಮೇಲೆ ಲಾಠಿ ಚಾರ್ಜ್‌ ಮಾಡಿಸಿರುವ ಕೇಂದ್ರ ಸರ್ಕಾರದ ಗೃಹ ಮಂತ್ರಿಯನ್ನು ಕೂಡಲೇ ಸಚಿವ ಸ್ಥಾನದಿಂದ ವಜಾ ಮಾಡಬೇಕೆಂದು ಆಗ್ರಹಿಸಿ ನಗರದ ಬಸ್‌ ನಿಲ್ದಾಣದ ವೃತ್ತದಲ್ಲಿ ರೈತಸಂಘದ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

Advertisement

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ಲಕ್ಷಾಂತರ ರೈತರ ಮೇಲೆ ಲಾಠಿ ಚಾರ್ಜ್‌ ಮಾಡಿರುವ ಪೊಲೀಸ್‌ ಅಧಿಕಾರಿಗಳನ್ನು ಕೆಲಸದಿಂದ ವಜಾ ಮಾಡಬೇಕೆಂದು ಒತ್ತಾಯಿಸಿದ ಪ್ರತಿಭಟನಾಕಾರರು, ಕೇಂದ್ರ ಸರ್ಕಾರದ ಭೂತ ದಹನ ಮಾಡಿ ರಾಷ್ಟ್ರಪತಿಗೆ ತಹಶೀಲ್ದಾರ್‌ ಮುಖಾಂತರ ಮನವಿ ಸಲ್ಲಿಸಿದರು.

ಅನ್ನದಾತರ ಹೋರಾಟ ಹತ್ತಿಕ್ಕದ ಕೇಂದ್ರ: ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಅನ್ನದಾತ ರೈತ ಬೆಳೆಯುವ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡುವಲ್ಲಿ ಸರ್ಕಾರಗಳು ಸಂಪೂರ್ಣವಾಗಿ ವಿಫಲವಾಗಿವೆ. ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಕಿಸಾನ್‌ ಕ್ರಾಂತಿ ಸಂಘಟನೆಯ ಲಕ್ಷಾಂತರ ಮಂದಿ ರೈತರು ದೆಹಲಿಗೆ ಮುತ್ತಿಗೆ ಹಾಕಲು ತೆರಳುತ್ತಿದ್ದಾಗ ಪೊಲೀಸ್‌ ಅಸ್ತ್ರ ಬಳಸಿ, ಲಾಠಿ
ಚಾರ್ಜ್‌, ಟಿಯರ್‌ ಗ್ಯಾಸ್‌ ಮತ್ತು ಜಲ ಫಿರಂಗಿಗಳನ್ನು ಬಳಸಿ ಅನ್ನದಾತರ ಹೋರಾಟವನ್ನು ಹತ್ತಿಕ್ಕಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗೃಹ ಸಚಿವರನ್ನು ವಜಾಗೊಳಿಸಿ: ಗಾಂಧಿ ಜಯಂತಿಯಂದೇ ಹಿಂಸಾ ಮಾರ್ಗವನ್ನು ತುಳಿದಿರುವ ಕೇಂದ್ರ ಸರಕಾರದ ರೈತ ವಿರೋಧಿ ಧೋರಣೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಅನ್ನದಾತನ ಬೇಡಿಕೆಗಳನ್ನು ಕೈಲಾದರೆ ಈಡೇರಿಸಬೇಕು. ಇಲ್ಲವಾದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು. ಅದನ್ನು ಬಿಟ್ಟು ಈ ರೀತಿ ಪೊಲೀಸ್‌ ಅಸ್ತ್ರ ಉಪಯೋಗಿಸುವ ಕೈಲಾಗದ ಗೃಹ ಸಚಿವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ಕೋಲಾರ
ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ, ಶ್ರೀಕಾಂತ್‌, ಭೂಪತಿ, ಮಾಲೂರು ತಾಲೂಕು ಅಧ್ಯಕ್ಷ ವೆಂಕಟೇಶ್‌, ಪುರುಷೋತ್ತಮ್‌, ಪುತ್ತೇರಿ ರಾಜು, ಚಂದ್ರಪ್ಪ, ಯಲುವಳ್ಳಿ ಪ್ರಭಾಕರ್‌, ಆನಂದರೆಡ್ಡಿ, ಚಂಬೆ ರಾಜೇಶ್‌, ಶೇಷಾದ್ರಿ, ಗಣೇಶ್‌, ಮುನಿಕೃಷ್ಣ, ಬೇತಮಂಗಲ ಮಂಜು, ನಾಗೇಶ್‌, ಮಂಜುನಾಥ್‌, ಸ್ವಾಮಿ ಮುಂತಾದವರು ಭಾಗವಹಿಸಿದ್ದರು.

Advertisement

ದೇಶದ ಅನ್ನದಾತರ ಮೇಲೆ ಕೈ ಮಾಡಿರುವ ಪೊಲೀಸ್‌ ಅಧಿಕಾರಿಗಳನ್ನು ಕೆಲಸದಿಂದ ವಜಾ ಮಾಡಬೇಕು ಹಾಗೂ ಕೇಂದ್ರ ಗೃಹ ಸಚಿವರನ್ನು ಪ್ರಧಾನಿ ನರೇಂದ್ರ ಮೋದಿ ಕೂಡಲೇ ಸಂಪುಟದಿಂದ ಕೈಬಿಡಬೇಕು. ಇಲ್ಲವಾದರೆ, ದೇಶಾದ್ಯಂತ ಇರುವ ರೈತಾಪಿ ವರ್ಗ ಕೋಟ್ಯಂತರ ಸಂಖ್ಯೆಯಲ್ಲಿ ಸೇರಿ ಸಂಸತ್‌ಗೆ ಮುತ್ತಿಗೆ ಹಾಕಬೇಕಾಗುತ್ತದೆ.
   ಮರಗಲ್‌ ಶ್ರೀನಿವಾಸ್‌, ಜಿಲ್ಲಾಧ್ಯಕ್ಷರು, ರೈತಸಂಘ 

Advertisement

Udayavani is now on Telegram. Click here to join our channel and stay updated with the latest news.

Next