ಮುಂಬಯಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹಿರಿಯ ಸಹೋದರಿ ರಾಜೇಶ್ವರಿಬೆನ್ ಮುಂಬೈನ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು.
ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ ಕೆಲವು ತಿಂಗಳ ಹಿಂದೆ ಶ್ವಾಸಕೋಶ ಕಸಿ ಮಾಡಲಾಗಿತ್ತು. ಅಲ್ಲದೆ ಅಹಮದಾಬಾದ್‌ನಿಂದ ಮುಂಬೈಗೆ ಸ್ಥಳಾಂತರಿಸಲಾಗಿತ್ತು ಆದರೆ ಇಂದು ನಿಧನಹೊಂದಿದ್ದಾರೆ.
ಸಹೋದರಿಯ ನಿಧನದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುಜರಾತ್ ನಲ್ಲಿ ನಡೆಯಬೇಕಿದ್ದ ಎರಡು ಸಾರ್ವಜನಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ.
ಶಾ ಅವರ ಸಹೋದರಿಯ ನಿಧನದ ಮಾಹಿತಿ ಪಡೆದ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಸಂತಾಪ ಸೂಚಿಸಿದ್ದಾರೆ. ರಾಜೇಶ್ವರಿಬೆನ್ ಅವರ ಅಗಲಿಕೆ ಇಡೀ ಶಾ ಕುಟುಂಬಕ್ಕೆ ಆಘಾತ ತಂದಿದೆ. ನಾನು ವೈಯಕ್ತಿಕವಾಗಿ ಈ ದುಃಖವನ್ನು ಹಂಚಿಕೊಳ್ಳುತ್ತೇನೆ ಮತ್ತು ಅಮಿತ್ ಭಾಯ್ ಮತ್ತು ಇಡೀ ಶಾ ಕುಟುಂಬಕ್ಕೆ ಈ ಆಘಾತವನ್ನು ನಿವಾರಿಸುವ ಶಕ್ತಿಯನ್ನು ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.
ರಾಜೇಶ್ವರಿಬೆನ್ ಅವರ ಪಾರ್ಥಿವ ಶರೀರವನ್ನು ಅವರ ನಿವಾಸಕ್ಕೆ ತರಲಾಗಿದ್ದು, ಮಧ್ಯಾಹ್ನ ಥಾಲ್ತೇಜ್ ಚಿತಾಗಾರದಲ್ಲಿ ಅಂತಿಮ ಸಂಸ್ಕಾರ ನೆರವೇರಲಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಬಾಲಕನ ಜೀವಕ್ಕೆ ಮಾರಕವಾದ ಗಾಳಿಪಟದ ದಾರ… ತಂದೆಯ ಜೊತೆ ಬೈಕ್ ನಲ್ಲಿ ತೆರಳುವ ವೇಳೆ ಘಟನೆ