Advertisement

ಕೇಂದ್ರ ಸಂಪುಟ ಪುನಾರಚನೆಯಲ್ಲೂ ಧ್ವನಿಸಿದ ಸಬ್‌ ಕಾ ಸಾಥ್‌

03:01 AM Jul 08, 2021 | Team Udayavani |

ತಿಂಗಳ ಹಿಂದೆಯಷ್ಟೇ 2ನೇ ಅವಧಿಯ 2 ವರ್ಷಗಳನ್ನು ಪೂರೈಸಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಸರಕಾರದ ಸಂಪುಟ ಪುನಾರಚನೆ ಬುಧವಾರ ನಡೆದಿದೆ. ಎರಡನೇ ಅವಧಿಯ ಸರಕಾರದ ಮೊದಲ ಸಂಪುಟ ಪುನರಾಚನೆ ಇದಾಗಿದ್ದು, ಇದಕ್ಕೆ ಕಸರತ್ತು ತಿಂಗಳ ಹಿಂದೆಯೇ ಆರಂಭಗೊಂಡಿ­ತ್ತಾದರೂ ಇಷ್ಟೊಂದು ಭಾರೀ ಪ್ರಮಾಣ­ದಲ್ಲಿ ಪುನಾರಚನೆ ನಡೆದೀತು ಎಂದು ಯಾರೂ ಊಹಿಸಿ­ರಲಿಲ್ಲ. ಪುನಾರಚಿತ ಸಂಪುಟದಲ್ಲಿ ಅನುಭವಿ­ಗಳು, ಯುವ ಮತ್ತು ಹೊಸ ಮುಖಗಳಿಗೆ ಆದ್ಯತೆ ನೀಡಲಾಗಿದ್ದು ಇದೇ ಮೊದಲ ಬಾರಿಗೆ ಮಹಿಳೆಯರಿಗೆ ಸಂಪುಟದಲ್ಲಿ 11 ಮಂದಿಗೆ ಅವಕಾಶ ಕಲ್ಪಿಸಿಕೊಡ­ಲಾಗಿದೆ. ಜಾತಿವಾರು ನೆಲೆಯಲ್ಲಿಯೂ ಸಂಪುಟದಲ್ಲಿ ಸಮತೋಲನ ಕಾಯ್ದುಕೊಳ್ಳಲು ಪ್ರಧಾನಿ ಕಸರತ್ತು ನಡೆಸಿದ್ದು ಹಿಂದುಳಿದ ವರ್ಗಗಳಿಗೆ ಸೇರಿದ 27 ನಾಯಕರಿಗೆ ಸಚಿವ ಸ್ಥಾನ ನೀಡಿದ್ದಾರೆ.

Advertisement

ಅಚ್ಚರಿಯ ವಿಷಯ ಅಂದರೆ ಸಂಪುಟದಲ್ಲಿ ಮಾತ್ರವಲ್ಲದೆ ಪಕ್ಷದಲ್ಲಿ ಅತ್ಯಂತ ಕ್ರಿಯಾಶೀಲ ಮತ್ತು ಪ್ರಭಾವಿ ಸಚಿವರೆಂದೇ ಪ್ರತಿಬಿಂಬಿತರಾಗಿದ್ದ ರವಿಶಂಕರ ಪ್ರಸಾದ್‌, ಪ್ರಕಾಶ್‌ ಜಾಬ್ಡೇಕರ್‌, ಡಾ| ಹರ್ಷವರ್ಧನ್‌, ರಮೇಶ್‌ ಪೋಖ್ರಿಯಾಲ್‌, ಡಿ.ವಿ. ಸದಾನಂದ ಗೌಡ ಸಹಿತ 12 ಸಚಿವರನ್ನು ಸಂಪುಟದಿಂದ ಕೈಬಿಡಲಾಗಿದೆ. ಈ ನಾಯಕರಿಗೆ ಮುಂದಿನ ದಿನಗಳಲ್ಲಿ ಪಕ್ಷದಲ್ಲಿ ಸ್ಥಾನಮಾನ ನೀಡುವ ಇಲ್ಲವೇ ಮುಂದಿನ ವರ್ಷ ದೇಶದ ಏಳು ರಾಜ್ಯಗಳಲ್ಲಿ ನಡೆಯಲಿರುವ ಚುನಾವಣೆಯ ನಿರ್ವಹಣೆಯ ಹೊಣೆಗಾರಿಕೆಯನ್ನು ವಹಿಸುವ ಸಾಧ್ಯತೆಗಳಿವೆ.

ಸಂಪುಟ ಪುನಾರಚನೆ ಕಸರತ್ತಿನ ಭಾಗವಾಗಿ 15 ಕ್ಯಾಬಿನೆಟ್‌ ಮತ್ತು 28 ಮಂದಿ ಸಹಾಯಕ ಸಚಿವರ ಸಹಿತ ಒಟ್ಟು 43 ಮಂದಿ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಇವರ ಪೈಕಿ 7 ಮಂದಿಗೆ ಸಂಪುಟ ದರ್ಜೆಗೆ ಭಡ್ತಿ ನೀಡಲಾಗಿದ್ದರೆ 36 ಮಂದಿ ಹೊಸಬರಾಗಿದ್ದಾರೆ. ಇನ್ನು ಪಕ್ಷಕ್ಕೆ ಸೇರ್ಪಡೆಯಾಗಿ ಆ ರಾಜ್ಯಗಳಲ್ಲಿ ಪಕ್ಷ ಅಧಿಕಾರಕ್ಕೇರಲು ಅಥವಾ ಪಕ್ಷದ ಬೆಂಬಲಕ್ಕೆ ನಿಂತ ನಾಯಕರಿಗೂ ಬಿಜೆಪಿ ಸಚಿವ ಸ್ಥಾನದ ಉಡುಗೊರೆ ನೀಡಿದೆ. ರಾಜ್ಯದ ನಾಲ್ವರಿಗೆ ಸಚಿವ ಭಾಗ್ಯ ಲಭಿಸಿದೆ. ರಾಜ್ಯಸಭೆ ಸದಸ್ಯ ರಾಜೀವ್‌ ಚಂದ್ರಶೇಖರ್‌, ಉಡುಪಿ-­ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಚಿತ್ರದುರ್ಗ ಸಂಸದ ಎ.ನಾರಾಯಣ ಸ್ವಾಮಿ ಮತ್ತು ಬೀದರ್‌ ಸಂಸದ ಭಗವಂತ ಖೂಬಾ ಅವರು ಸಂಪುಟಕ್ಕೆ ಸಹಾಯಕ ಸಚಿವರಾಗಿ ಸೇರ್ಪಡೆಯಾಗಿದ್ದಾರೆ. ಈ ಮೂಲಕ ರಾಜ್ಯಕ್ಕೆ ನಿರೀಕ್ಷೆಗಿಂತ ಹೆಚ್ಚಿನ ಅವಕಾಶ ಲಭಿಸಿದಂತಾಗಿದ್ದು ಇಲ್ಲಿಯೂ ಜಾತಿ, ಪ್ರಾದೇಶಿಕವಾರು ಲೆಕ್ಕಾಚಾರ ನಡೆದಿರುವುದು ಸ್ಪಷ್ಟ.

ಪರಿಶಿಷ್ಟ ಜಾತಿಗೆ ಸೇರಿದ 12, ಬುಡಕಟ್ಟು ಜನಾಂಗಕ್ಕೆ ಸೇರಿದ 8 ಮಂದಿ ಸ್ಥಾನ ಪಡೆದಿದ್ದಾರೆ. ಈಶಾನ್ಯ ರಾಜ್ಯಗಳಿಗೆ ಸೇರಿದ ಐವರು ಕೇಂದ್ರ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ. ಹೊಸ ಸಚಿವರ ಪೈಕಿ ವಕೀಲರು, ವೈದ್ಯರು, ಎಂಜಿನಿಯರ್‌ ಗಳು, ಮಾಜಿ ಮುಖ್ಯ ಮಂತ್ರಿಗಳು ಸೇರಿದ್ದು ಎಲ್ಲ ದೃಷ್ಟಿಯಿಂದಲೂ ಅತ್ಯಂತ ಸಮತೋಲಿತ ಮತ್ತು ಸಂತುಲಿತ ಸಂಪುಟ ಹೊಂದುವ ಪ್ರಯತ್ನ­ವನ್ನು ನಡೆಸಿದ್ದಾರೆ. ಇನ್ನೊಂದು ವೈಶಿಷ್ಟ ಎಂದರೆ ಸಂಪುಟ­ದ ಸರಾಸರಿ ವಯಸ್ಸು 58. ಈ ಮೂಲಕ ಆಡಳಿತ ಯಂತ್ರ­ವನ್ನು ಮತ್ತಷ್ಟು ಚುರುಕಾ­ಗಿಸಲು ಮೋದಿ ಪಣತೊಟ್ಟಂತೆ ಕಾಣುತ್ತಿದೆ. ಈ ಬಾರಿಯ ಪುನಾರಚನೆ ಕಸರತ್ತಿನಲ್ಲಿಯೂ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಶಾ ಜೋಡಿಯ ರಾಜಕೀಯ ಚಾಣಾಕ್ಷತನ ಮತ್ತು ತಂತ್ರಗಾರಿಕೆ ಕೆಲಸ ನಿಚ್ಚಳ.

Advertisement

Udayavani is now on Telegram. Click here to join our channel and stay updated with the latest news.

Next