ಬೆಂಗಳೂರು: ದೇಶ ಕೋವಿಡ್ ಕಾರಣದಿಂದ ಆರ್ಥಿಕ ಕುಸಿತ ಕಂಡು, ಸಂಕಷ್ಟದಲ್ಲಿರುವ ಸಂದರ್ಭದಲ್ಲಿಯೂ ಜನಸಾಮಾನ್ಯರ ಮೇಲೆ ಆರ್ಥಿಕ ಹೊರ ಹಾಕದೆ ಕೃಷಿ ಹಾಗೂ ಮೂಲ ಸೌಕರ್ಯಕ್ಕೆ ಉತ್ತೇಜನ ನೀಡಲಾಗಿದೆ. ಕೇಂದ್ರ ಸರ್ಕಾರದಿಂದ ಇದೊಂದು ಜನಪರ ಬಜೆಟ್ ಎಂದು ಸಚಿವ ಡಾ. ನಾರಾಯಣಗೌಡ ಅಭಿಪ್ರಾಯಪಟ್ಟಿದ್ದಾರೆ.
602 ಜಿಲ್ಲೆಗಳಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಆರಂಭಿಸಲು ಉದ್ದೇಶಿಸಲಾಗಿದೆ. ರೈತರಿಗೆ ನೀಡುತ್ತಿರುವ ಕನಿಷ್ಠ ಬೆಂಬಲ ಬೆಲೆಯನ್ನು ಮುಂದುವರಿಸಲಾಗಿದೆ. ಇದು ಕೇಂದ್ರ ಸರ್ಕಾರಕ್ಕೆ ರೈತರ ಮೇಲಿರುವ ಕಾಳಜಿಯನ್ನು ತೋರಿಸುತ್ತದೆ.
ಟೆಕ್ಸ್ಟೈಲ್ ಉದ್ಯಮದಲ್ಲಿ 3 ವರ್ಷದಲ್ಲಿ 7 ಮೆಗಾ ಟೆಕ್ಸ್ಟೈಲ್ ಪಾರ್ಕ್ ಅಭಿವೃದ್ಧಿ ಮಾಡಲು ತೀರ್ಮಾನಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗಾಗಿ 1,18,101 ಕೋಟಿ ನೀಡಲಾಗಿದೆ. ಗ್ರಾಮೀಣ ಅಭಿವೃದ್ಧಿಗೆ 40 ಸಾವಿರ ಕೋಟಿ ಮೀಸಲಿರಿಸಿದ್ದಾರೆ. ಜೊತೆಗೆ ಬೆಂಗಳೂರು ಮೆಟ್ರೋ ವಿಸ್ತರಣೆಗೆ 14,788 ಕೋಟಿ ರೂ. ಅನುದಾನ ನೀಡಿದ್ದಾರೆ. ಗ್ರಾಮೀಣ ಭಾಗದಲ್ಲಿ ಸಾರಿಗೆ ಸೌಲಭ್ಯಕ್ಕಾಗಿ, 18 ಸಾವಿರ ಕೋಟಿ ರೂ. ನೀಡಿದ್ದಾರೆ. ಸೌರಶಕ್ತಿ ವಲಯಕ್ಕೆ 1 ಸಾವಿರ ಕೋಟಿ ಮೀಸಲಿರಿಸಿದ್ದಾರೆ.
ಇದನ್ನೂ ಓದಿ: ಮಂಗಳೂರು: ದೇವಸ್ಥಾನದ ಹುಂಡಿ ಕಳ್ಳತನ, ಭಗವಧ್ವಜಕ್ಕೆ ಅವಮಾನ ಮಾಡಿದ್ದ ಇಬ್ಬರು ಆರೋಪಿಗಳ ಬಂಧನ
ಕೃಷಿ ವಲಯ ಚೇತರಿಕೆಗೆ ಕೇಂದ್ರದಿಂದ ಹೊಸ ಯೋಜನೆ ಘೋಷಣೆ ಮಾಡಲಾಗಿದ್ದು, ಪ್ರಸಕ್ತ ವರ್ಷ ಗೋಧಿ ಖರೀದಿಗೆ ₹75 ಸಾವಿರ ಕೋಟಿ ಮೀಸಲಿಡಲಾಗಿದೆ. ಈ ಯೋಜನೆಯಿಂದ 40 ಲಕ್ಷ ರೈತರಿಗೆ ಅನುಕೂಲವಾಗಲಿದೆ. ಅಲ್ಲದೆ ಭತ್ತ ಖರೀದಿಗೆ 1 ಲಕ್ಷ 72 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ಜೊತೆಗೆ ರೈತರಿಗೆ ಸಾಲ ಯೋಜನೆಗೆ 16.5 ಲಕ್ಷ ಕೋಟಿ ರೂ. ಮೀಸಲಿಡಲಾಗಿದೆ.
ಪಶುಪಾಲನೆ, ಹೈನುಗಾರಿಕೆ, ಕುಕ್ಕುಟೋದ್ಯಮಕ್ಕೆ 30 ಸಾವಿರ ಕೋಟಿ ಇದ್ದ ಅನುದಾನ 40 ಸಾವಿರ ಕೋಟಿಗೆ ಹೆಚ್ಚಿಸಲಾಗಿದೆ. ಹೀಗೆ ಪ್ರತಿಯೊಂದು ವಲಯಕ್ಕೂ ಪ್ರಾಮುಖ್ಯತೆ ನೀಡಿರುವ ಕೇಂದ್ರ ಬಜೆಟ್ ಸ್ವಾಗತಾರ್ಹ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್, ಪ್ರಧಾನಿ ಮೋದಿ ಅವರ ಜನರಪರ ನಿಲುವನ್ನು ಪ್ರತಿಬಿಂಬಿಸುತ್ತಿದೆ. ಕೋವಿಡ್ -19 ಕಾರಣದಿಂದ ಆರ್ಥಿಕ ವ್ಯವಸ್ಥೆ ಕುಸಿದಿದ್ದರೂ, ಜನರ ಪರ ಬಜೆಟ್ ನೀಡಿದ್ದು ಶ್ಲಾಘನೀಯ ಎಂದು ಸಚಿವ ನಾರಾಯಣಗೌಡ ತಿಳಿಸಿದ್ದಾರೆ.
ಇದನ್ನೂ ಓದಿ: ನಿರ್ಮಲಾ ಸೀತಾರಾಮನ್ ಜಾದು; ಇದೊಂದು “ಆತ್ಮನಿರ್ಭರ್ ಬಜೆಟ್” ಎಂದ ಸದಾನಂದ ಗೌಡ