ಬೆಂಗಳೂರು: ಕೇಂದ್ರ ಸರಕಾರದ ಬಜೆಟ್ ರಾಜಕೀಯ ದೃಷ್ಟಿಕೋನದಿಂದ ಕೂಡಿರುವುದರಿಂದ ಇದು ದೇಶದ ಅಭಿವೃದ್ಧಿಯ ಬಜೆಟ್ ಅಲ್ಲ. ಅಧಿಕಾರ ಕಳೆದುಕೊಳ್ಳುವ ಭಯದಿಂದ ಬಿಹಾರ ಸಿಎಂ ನಿತೀಶ್ ಕುಮಾರ್ ಹಾಗೂ ಆಂಧ್ರದ ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ಹೆದರಿ ಮಂಡಿಸಿದ ಬಜೆಟ್ ಇದಾಗಿದೆ, ಜತೆಗೆ ರಾಜ್ಯ ರಾಜ್ಯಗಳ ನಡುವೆ ತಾರತಮ್ಯ ಮಾಡಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರ ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ವಿಕಸಿತ ಭಾರತ ಎಂಬ ಹಗಲುಗನಸನ್ನು ಬಿತ್ತಿ ತೀವ್ರ ನಿರಾಸೆ ಉಂಟು ಮಾಡಿದೆ. ಕೇಂದ್ರ ಸರಕಾರದಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕದ ಬಗ್ಗೆ ಎಳ್ಳಷ್ಟು ಆಲೋಚನೆ ಮಾಡಿಲ್ಲ. ರಾಜ್ಯದ ಭದ್ರಾ ಮೇಲ್ಡಂಡೆ ಯೋಜನೆಗೆ 5,300 ಕೋಟಿ ರೂ. ಅನುದಾನ ನೀಡುವುದಾಗಿ ಹಿಂದಿನ ಬಜೆಟ್‌ನಲ್ಲಿ ಹೇಳಿದ್ದರೂ ಇದುವರೆಗೂ 1 ರೂಪಾಯಿ ಕೂಡ ಸಿಕ್ಕಿಲ್ಲ. ಜತೆಗೆ ರಾಜ್ಯಕ್ಕೆ ಸಂಬಂಧಿಸಿದ ಯಾವುದೇ ಯೋಜನೆಗಳಿಗೂ ಅನುದಾನ ನೀಡದ ಬಿಜೆಪಿ ರಾಜಕೀಯ ದ್ವೇಷ ಸಾಧಿಸಿದೆ ಎಂದು ಕಿಡಿ ಕಾರಿದ್ದಾರೆ.
ಕರ್ನಾಟಕಕ್ಕೆ ಹೈದರಾಬಾದ್- ಬೆಂಗಳೂರು ಕೈಗಾರಿಕಾ ಕಾರಿಡಾರ್ ಘೋಷಿಸಿರುವುದನ್ನು ಹೊರತುಪಡಿಸಿದರೆ ಬೇರೇನೂ ಬಜೆಟ್‌ನಲ್ಲಿ ಸಿಕ್ಕಿಲ್ಲ. ಹಿಂದಿನ ಅನುಭವಗಳನ್ನು ನೋಡಿದರೆ ಈ ಕಾರಿಡಾರ್ ಯೋಜನೆ ಕೇವಲ ಘೋಷಣೆಯಾಗಿಯೇ ಉಳಿಯುವುದರ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ಹೇಳಿರುವ ಮಂಜುನಾಥ ಭಂಡಾರಿ ಅವರು, ಬಿಪಿಎಲ್ ವರ್ಗ, ಕೆಳ, ಮಧ್ಯಮ ವರ್ಗ, ಪರಿಶಿಷ್ಟರಿಗೆ ಯಾವುದೇ ವಿಶೇಷ ಯೋಜನೆಗಳು ದೊರೆತಿಲ್ಲ. ಕೃಷಿ ವಿಷಯದಲ್ಲೂ ಕನಿಷ್ಠ ಬೆಂಬಲ ಬೆಲೆ ಕಾಯಿದೆ ರೂಪಿಸುವಂತೆ ರೈತರು ಹಲವು ವರ್ಷಗಳಿಂದ ಒತ್ತಾಯಿಸುತ್ತಿದ್ದರೂ ಈ ಬಜೆಟ್‌ನಲ್ಲಿ ಯಾವುದೇ ಪ್ರಸ್ತಾವ ಮಾಡಿಲ್ಲ ಎಂದು ಹೇಳಿದ್ದಾರೆ.
ಬೆಲೆ ಏರಿಕೆಯಿಂದ ಜನ ಸಾಮಾನ್ಯರು ತತ್ತರಿಸುತ್ತಿದ್ದರೆ ದಿನಬಳಕೆ ವಸ್ತುಗಳ ಬೆಲೆಯನ್ನು ಕಡಿಮೆ ಮಾಡುವ ಬದಲಿಗೆ ಕೇಂದ್ರ ಸರಕಾರ ಚಿನ್ನದ ಬೆಲೆ ಕಡಿಮೆ ಮಾಡಿದೆ. ಅನ್ನದ ಬದಲು ಚಿನ್ನದ ಬೆಲೆ ಕಡಿಮೆ ಮಾಡಿರುವ ಕೇಂದ್ರ ಸರಕಾರದ ಧೋರಣೆ ಖಂಡನೀಯ. ಜತೆಗೆ ನಿರುದ್ಯೋಗಿಗಳ ಸಮಸ್ಯೆ ಕಡೆಗೂ ಸರಕಾರ ಗಮನಹರಿಸಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಜಾರಿಗೊಳಿಸಿರುವ ಯುವ ನಿಧಿಯಂತಹ ಕಾರ್ಯಕ್ರಮಗಳ ಜಾರಿಗೆ ಕೇಂದ್ರ ಸರಕಾರ ಮುಂದಾಗಬೇಕೆಂದು ಭಂಡಾರಿ ಆಗ್ರಹಿಸಿದ್ದಾರೆ.