ನವದೆಹಲಿ:ಕೋವಿಡ್ 19 ಸೋಂಕಿನಿಂದ ಸಂಭವಿಸಿದ ಹಲವಾರು ರೀತಿಯ ಅನಿಶ್ಚಿತತೆಗಳನ್ನು ನಿವಾರಿಸಿ ಅಭಿವೃದ್ದಿ ಪಥದಲ್ಲಿ ಮುನ್ನಡೆಯುವ ನಿಟ್ಟಿನಲ್ಲಿ ಮುಂಬರುವ ಬಜೆಟ್ ನಲ್ಲಿ ನಿರ್ಧಾರ ತೆಗೆದುಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ(ಜನವರಿ 08, 2021) ಪ್ರಮುಖ ಆರ್ಥಿಕ ತಜ್ಞರು ಹಾಗೂ ಕ್ಷೇತ್ರವಾರು ತಜ್ಞರ ಜತೆ ಸಮಾಲೋಚನೆ ನಡೆಸಲಿದ್ದಾರೆ ಎಂದು ವರದಿ ತಿಳಿಸಿದೆ.
ಸರ್ಕಾರದ ಚಿಂತಕರ ಚಾವಡಿಯಾಗಿರುವ ನೀತಿ ಆಯೋಗ ಈ ಸಭೆಯನ್ನು ವರ್ಚುವಲಿಯಾಗಿ ಆಯೋಜಿಸಲಿದ್ದು, ಸಭೆಯಲ್ಲಿ ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಮತ್ತು ಸಿಇಒ ಅಮಿತಾಭ್ ಕಾಂತ್ ಭಾಗವಹಿಸಲಿದ್ದಾರೆ.
ಮುಂಬರುವ ಬಜೆಟ್ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಆರ್ಥಿಕ ತಜ್ಞರನ್ನು ಭೇಟಿಯಾಗಿ ಅವರಿಂದ ಸಲಹೆ ಪಡೆಯಲಿದ್ದಾರೆ ಎಂದು ಹೆಸರು ಹೇಳಲು ಇಚ್ಚಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಪ್ರಕಾರ ಭಾರತದ ಆರ್ಥಿಕತೆ 2021ರ ಮಾರ್ಚ್ 31ರಲ್ಲಿ ಜಿಡಿಪಿ ಶೇ.7.5ರಷ್ಟಾಗಲಿದೆ ಎಂದು ನಿರೀಕ್ಷಿಸಿದೆ. ಆದರೆ ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಶೇ.10.3ರಷ್ಟು ಹಾಗೂ ವಿಶ್ವಬ್ಯಾಂಕ್ ಶೇ.9.6ರಷ್ಟು ಎಂದು ಅಂದಾಜಿಸಿದ್ದು ಈ ಬಗ್ಗೆ ಮಾತುಕತೆಯಲ್ಲಿ ಚರ್ಚೆಯಾಗಲಿದೆ ಎಂದು ವರದಿ ತಿಳಿಸಿದೆ.
2021ರ ಫೆಬ್ರುವರಿ 1ರಂದು ಕೇಂದ್ರದ ಬಜೆಟ್ ಮಂಡನೆಯಾಗುವ ಸಾಧ್ಯತೆ ಇದ್ದು, ಈ ಬಗ್ಗೆ ಎಲ್ಲಾ ಸಿದ್ದತೆಗಳು ನಡೆಯುತ್ತಿದೆ ಎಂದು ವರದಿ ಹೇಳಿದೆ.