Advertisement

Mining: ಗಣಿ ಗುತ್ತಿಗೆ ಸಮಸ್ಯೆ ಇತ್ಯರ್ಥಕ್ಕೆ ಏಕಗವಾಕ್ಷಿ ವ್ಯವಸ್ಥೆ

11:57 PM Oct 10, 2023 | Team Udayavani |

ಬೆಂಗಳೂರು: ಅರಣ್ಯ ಇಲಾಖೆಯ ಗಣಿ ಗುತ್ತಿಗೆ ಸಮಸ್ಯೆಗಳ ಪರಿಹಾರಕ್ಕೆ ಏಕಗವಾಕ್ಷಿ ಮಾದರಿ ವ್ಯವಸ್ಥೆ ರೂಪಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದರು. ಗೃಹ ಕಚೇರಿ ಕೃಷ್ಣಾದಲ್ಲಿ ಅರಣ್ಯ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳೊಂದಿಗೆ ಪರಿಶೀಲನ ಸಭೆಯಲ್ಲಿ ಅರಣ್ಯ ಇಲಾಖೆ ತೀರುವಳಿ ಪಡೆಯಲು ಬಹಳಷ್ಟು ಪ್ರಕರಣಗಳು ಬಾಕಿ ಇರುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಇದಕ್ಕೆ ಗಣಿ ಗುತ್ತಿಗೆ ಪಡೆದ ಸಂಸ್ಥೆಗಳು ಅರಣ್ಯೀಕರಣಕ್ಕೆ ಪರ್ಯಾಯ ಭೂಮಿ ನೀಡಿಲ್ಲ. ಆನೆಗಳು ಮತ್ತಿತರ ವನ್ಯಜೀವಿಗಳ ಉಪಟಳದಿಂದಾಗಿ ಕೃಷಿ ಭೂಮಿ ಮಾರಾಟ ಮಾಡಲು ಸಿದ್ಧರಿರುವ ರೈತರು ಹಾಸನ ಮತ್ತು ರಾಜ್ಯದ ಇತರ ಕೆಲವು ಭಾಗಗಳಲ್ಲಿ¨ªಾರೆ. ಇಂತಹ ರೈತರಿಗೆ ಈ ಸಂಸ್ಥೆಗಳು ಸೂಕ್ತ ಬೆಲೆ ನೀಡಿ ಜಮೀನು ಖರೀದಿಸಬಹುದು ಎಂದು ಅಧಿಕಾರಿಗಳಿಂದ ಅಭಿಪ್ರಾಯ ವ್ಯಕ್ತವಾಯಿತು.

Advertisement

ಪ್ರತ್ಯೇಕ ಸಭೆ ನಡೆಸಿ
ಆಗ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದಲ್ಲಿ ಗಣಿ ಗುತ್ತಿಗೆ ಪಡೆದಿರುವ ಸಂಸ್ಥೆಗಳಿಗೆ ಅರಣ್ಯ ಇಲಾಖೆ ತೀರುವಳಿ ಮತ್ತಿತರ ಅನುಮತಿ ಪತ್ರಗಳನ್ನು ನೀಡಲು ಹಾಗೂ ಸಮಸ್ಯೆಗಳನ್ನು ಬಗೆಹರಿಸಲು ಗಣಿ ಮತ್ತು ಭೂ ವಿಜ್ಞಾನ, ಕಂದಾಯ ಹಾಗೂ ಅರಣ್ಯ ಇಲಾಖೆ ಸಚಿವರು ಹಾಗೂ ಅಧಿಕಾರಿಗಳು ಪ್ರತ್ಯೇಕ ಸಭೆ ನಡೆಸಬೇಕು. ಈ ಸಂಬಂಧ ಏಕಗವಾಕ್ಷಿ ಮಾದರಿ ವ್ಯವಸ್ಥೆ ರೂಪಿಸಿ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ವಿಳಂಬ ಮಾಡಬಾರದು
ಅನಗತ್ಯವಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಅರಣ್ಯ ಇಲಾಖೆ ತೊಂದರೆ ನೀಡಬಾರದು ಹಾಗೂ ಅನಗತ್ಯ ವಿಳಂಬ ಮಾಡಬಾರದು ಎಂದುಎಚ್ಚರಿಕೆ ನೀಡಿದ ಅವರು, ಕೇಂದ್ರ ಸರಕಾರ ಸ್ವಾಮ್ಯದ ಕೆಐಒಸಿಎಲ್‌ ಕುದುರೆಮುಖದ ಭೂಮಿಯನ್ನು ಅರಣ್ಯ ಇಲಾಖೆಗೆ ವಹಿಸಿಕೊಡುವ ಬಗ್ಗೆ ಚರ್ಚಿಸಿ ಬಗೆಹರಿಸಲು ಸೂಚಿಸಿದರು.

ರಾಜಧನ ಸೋರಿಕೆಯಾಗದಿರಲಿ
ಅರಣ್ಯ ಇಲಾಖೆಯ 25 ಮಿಲಿಯನ್‌ ಟನ್‌ ಅದಿರು ಹರಾಜು ಹಾಕುವ ಸಂಬಂಧ ಅಡ್ವೊಕೇಟ್‌ ಜನರಲ್‌ ಅವರ ಅಭಿಪ್ರಾಯ ಪಡೆದು ಮುಂದುವರಿಯುವಂತೆ ತಿಳಿಸಿದ ಅವರು, 2023- 24ನೇ ಸಾಲಿಗೆ ಮುಖ್ಯ ಖನಿಜ ಹಾಗೂ ಉಪ ಖನಿಜಗಳಿಗೆ ಸಂಬಂಧಿಸಿ ಸೆಪ್ಟೆಂಬರ್‌ ಅಂತ್ಯದವರೆಗೆ 3,276 ಕೋಟಿ ರೂ. ರಾಜಧನ ಸಂಗ್ರಹವಾಗಿದೆ. ಸರಕಾರಕ್ಕೆ ಸಲ್ಲಿಕೆಯಾಗಬೇಕಾದ ರಾಜಧನ ಅನಗತ್ಯವಾಗಿ ಸೋರಿಕೆಯಾಗದಂತೆ ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಜಾಗೃತ ದಳ ಕಾಲ-ಕಾಲಕ್ಕೆ ಇದನ್ನು ಪರಿಶೀಲಿಸಬೇಕು. ಇನ್ನು ಸಿ ವರ್ಗದ ಅದಿರಿನ ಬ್ಲಾಕ್‌ಗಳಿಗೆ ಸುಪ್ರೀಂ ಕೋರ್ಟ್‌ ಆದೇಶದನ್ವಯ ಅರಣ್ಯ ಅನುಮತಿಗಳನ್ನು ವರ್ಗಾಯಿಸುವ ಬಗ್ಗೆ ಕಾನೂನು ಅಭಿಪ್ರಾಯ ಪಡೆಯುವಂತೆ ಸೂಚಿಸಿದರು.

ಅರಣ್ಯ ಸಚಿವ ಈಶ್ವರ ಖಂಡ್ರೆ, ಗಣಿ ಮತ್ತು ಭೂವಿಜ್ಞಾನ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌, ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌, ಸಿಎಂ ಅವರ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್‌, ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಗಣಿ ಇಲಾಖೆ ನಿರ್ದೇಶಕ ಗಿರೀಶ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next