ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಏಕರೂಪ ನಾಗರಿಕ ಸಂಹಿತೆ ಮಸೂದೆ ಮಂಡಿಸಲಾಗುವುದು ಎಂಬ ಊಹಾಪೋಹದ ನಡುವೆಯೇ UCC ದೇಶದ ಈಶಾನ್ಯ ರಾಜ್ಯಗಳಿಗೆ ಮತ್ತು ಬುಡಕಟ್ಟು ಸಮುದಾಯಕ್ಕೆ ಯಾವುದೇ ಧಕ್ಕೆ ತರುವುದಿಲ್ಲ ಎಂದು ಕೇಂದ್ರದ ರಾಜ್ಯ ಆರೋಗ್ಯ ಖಾತೆ ಸಚಿವ ಎಸ್ ಪಿ ಸಿಂಗ್ ಬಘೇಲ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಮಲೆನಾಡಿನಲ್ಲಿ ಗಾಳಿ ಮಳೆಯ ಆರ್ಭಟ… ಧರೆಗುರುಳಿದ ವಿದ್ಯುತ್ ಕಂಬ, ಮನೆ ಮೇಲೆ ಬಿದ್ದ ಮರ
ಈಶಾನ್ಯ ರಾಜ್ಯದ ಬುಡಕಟ್ಟು ಸಮುದಾಯದ ಹಕ್ಕುಗಳು ಮತ್ತು ಸಂಪ್ರದಾಯಗಳಿಗೆ ಪ್ರಸ್ತಾವಿತ ಏಕರೂಪ ನಾಗರಿಕ ಸಂಹಿತೆಯಿಂದ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿರುವ ಸಚಿವ ಬಘೇಲ್, ಬುಡಕಟ್ಟು ಸಮುದಾಯಗಳ ವೈವಿಧ್ಯತೆ ಮತ್ತು ಸಂಸ್ಕೃತಿಯನ್ನು ಬಿಜೆಪಿ ಗೌರವಿಸುತ್ತದೆ ಮತ್ತು ಅವರ ಹಿತಾಸಕ್ತಿಗಳಿಗೆ ವಿರುದ್ಧವಾದ ಯಾವುದೇ ಕಾನೂನನ್ನು ಹೇರುವುದಿಲ್ಲ ಎಂದು ತಿಳಿಸಿದ್ದಾರೆ.
ದೇಶದ ನೆಲದ ಅತ್ಯುನ್ನತ ಹುದ್ದೆಗೆ ಭಾರತೀಯ ಜನತಾ ಪಕ್ಷ ಬುಡಕಟ್ಟು ಮಹಿಳೆಯನ್ನು ರಾಷ್ಟ್ರಪತಿಯನ್ನಾಗಿ ಆಯ್ಕೆ ಮಾಡಿದೆ. ಅಷ್ಟೇ ಅಲ್ಲ ದೊಡ್ಡ ಪ್ರಮಾಣದಲ್ಲಿ ಬುಡಕಟ್ಟು ಸಮುದಾಯದ ಶಾಸಕರು, ಸಂಸದರು, ರಾಜ್ಯಸಭಾ ಸದಸ್ಯರು ಹಾಗೂ ಸಚಿವರನ್ನು ಹೊಂದಿದೆ. ಆ ನಿಟ್ಟಿನಲ್ಲಿ ನಮ್ಮ ಪಕ್ಷ (ಬಿಜೆಪಿ) ಈಶಾನ್ಯ ರಾಜ್ಯದ ಸಂಪ್ರದಾಯವನ್ನು ಗೌರವಿಸಲಿದೆ. ಆದರೆ ಈ ವಿಚಾರದಲ್ಲಿ ತುಷ್ಠೀಕರಣದ ರಾಜಕೀಯ ಸರಿಯಲ್ಲ ಎಂದು ಹೇಳಿದರು.
ಅಸ್ಸಾಂ, ಮೇಘಾಲಯ, ತ್ರಿಪುರಾ ಮತ್ತು ಮಿಜೋರಾಂ ರಾಜ್ಯಗಳಲ್ಲಿ ಕೆಲವು ಬುಡಕಟ್ಟು ಪ್ರದೇಶಗಳಿಗೆ ವಿಶೇಷ ನಿಬಂಧನೆಗಳನ್ನು ನೀಡುವ ಸಂವಿಧಾನದ ಶೆಡ್ಯೂಲ್ 6ರ ಪ್ರಕಾರ, ಅವರ ರಾಜ್ಯದ ಶಾಸಕರು ಕೇಂದ್ರದ ನಿರ್ಧಾರವನ್ನು ಅಂಗೀಕರಿಸದ ಹೊರತು ಅವರಿಗೆ ಯಾವುದೇ ಮಸೂದೆ ಅನ್ವಯಿಸುವುದಿಲ್ಲ ಎಂದು ಬಘೇಲ್ ವಿವರಿಸಿದ್ದಾರೆ.
ಇದರ ಹೊರತಾಗಿಯೂ ಯಾವುದೇ ಕಾನೂನು ಜಾರಿಗೊಳಿಸುವ ಮೊದಲು ಇತರ ರಾಜ್ಯಗಳ ಬುಡಕಟ್ಟು ಜನಾಂಗದವರ ಜತೆ ಸಮಾಲೋಚನೆ ನಡೆಸಿ ಅಭಿಪ್ರಾಯ ಸಂಗ್ರಹಿಸಲಾಗುವುದು ಎಂದು ಹೇಳಿದರು.
ಈಶಾನ್ಯ ಮತ್ತು ಇತರ ಪ್ರದೇಶದ ಬುಡಕಟ್ಟು ಸಮುದಾಯವನ್ನು ಯುಸಿಸಿ ವ್ಯಾಪ್ತಿಯಿಂದ ಹೊರಗಿಡಬೇಕು ಎಂದು ಕಾನೂನು ಮತ್ತು ಸಂಸದೀಯ ಸ್ಥಾಯಿ ಸಮಿತಿ ಮುಖ್ಯಸ್ಥ, ರಾಜ್ಯಸಭಾ ಸಂಸದ ಸುಶೀಲ್ ಕುಮಾರ್ ಮೋದಿ ಅವರ ಹೇಳಿಕೆಗೆ ಸಂಬಂಧಿಸಿದಂತೆ ಬಘೇಲ್ ಈ ಪ್ರತಿಕ್ರಿಯೆ ನೀಡಿರುವುದಾಗಿ ವರದಿ ತಿಳಿಸಿದೆ.