Advertisement

ಮಾಹಿತಿ ನೀಡದ ಅಧಿಕಾರಿಗಳ ವಿರುದ್ಧ ಅಸಮಾಧಾನ

04:18 PM Nov 24, 2018 | Team Udayavani |

ಚಿತ್ರದುರ್ಗ/ಮೊಳಕಾಲ್ಮೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿಯಡಿ ತೋಟಗಾರಿಕೆ ಮರ ಬೆಳೆಗಳಿಗೆ ಪ್ರೋತ್ಸಾಹ ನೀಡಲು ಅವಕಾಶ ಇದ್ದರೂ ಇದನ್ನು ರೈತರಿಗೆ ತಲುಪಿಸಲು ವಿಫರಾಗಿರುವ ಜಿಲ್ಲಾ ಪಂಚಾಯತ್‌ ಅಧಿಕಾರಿಗಳ ಮೇಲೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಸಚಿವ ಕೃಷ್ಣಭೈರೇಗೌಡ ಅಸಮಧಾನ ವ್ಯಕ್ತಪಡಿಸಿದರು.

Advertisement

ಮೊಳಕಾಲ್ಮುರು ತಾಲೂಕಿನ ಪೂಜಾರಹಟ್ಟಿಯಲ್ಲಿ ತಿಪ್ಪೇಸ್ವಾಮಿಯವರ ನುಗ್ಗೆ ಬೆಳೆ ಕ್ಷೇತ್ರ ಹಾಗೂ ಚಳ್ಳಕೆರೆ ತಾಲೂಕಿನ ಅಬ್ಬೇನಹಳ್ಳಿಯಲ್ಲಿ ಕುಮಾರಸ್ವಾಮಿಯವರ ರೇಷ್ಮೆ ಬೆಳೆ ಕ್ಷೇತ್ರಕ್ಕೆ ಭೇಟಿ ನೀಡಿ ಅಲ್ಲಿ ರೈತರೊಂದಿಗೆ ಸಂವಾದ ನಡೆಸಿದರು. ತೋಟಗಾರಿಕೆ ಬೆಳೆಗಳಾದ ಪಪ್ಪಾಯಿ, ದಾಳಿಂಬೆ, ನಿಂಬೆ, ಸಪೋಟ, ನುಗ್ಗೆ ಸೇರಿದಂತೆ ರೇಷ್ಮೆ ಬೆಳೆ ಉತ್ತೇಜನಕ್ಕೆ ಉದ್ಯೋಗ ಖಾತರಿಯಲ್ಲಿ ಅವಕಾಶ ಕಲ್ಪಿಸಿಕೊಡಲಾಗಿದೆ. ಆದರೆ, ಈ ಬಗ್ಗೆ ಬಹುತೇಕ ರೈತರಿಗೆ ಮಾಹಿತಿಯಿಲ್ಲ. ಆದರೆ, ಅಧಿಕಾರಿಗಳು ಸಹ
ರೈತರಿಗೆ ಮಾಹಿತಿ ನೀಡಿರುವುದಿಲ್ಲ. ರೈತರಿಗೆ ಸರ್ಕಾರ ಕಲ್ಪಿಸಿರುವ ಸೌಲಭ್ಯ, ಯೋಜನೆಗಳ ಮಾಹಿತಿ ನೀಡುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ, ಪಡೆಯುವುದು ಆಯಾ ರೈತರಿಗೆ ಬಿಟ್ಟ ವಿಷಯವಾಗಿದೆ ಎಂದರು.

ಚಿತ್ರದುರ್ಗ ಜಿಲ್ಲೆಯಲ್ಲಿ ಒಂದು ಸಾವಿರ ಎಕರೆಯಷ್ಟು ತೋಟಗಾರಿಕೆ ಬೆಳೆಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಇನ್ನೂ ಹೆಚ್ಚಿನ ಪ್ರದೇಶಗಳಿಗೆ ಉದ್ಯೋಗ ಖಾತ್ರಿಯಲ್ಲಿ ಮರ ತೋಟಗಾರಿಕೆ ಬೆಳೆಗಳಿಗೆ ಪ್ರೋತ್ಸಾಹ ನೀಡಲು ಅವಕಾಶ ಇದೆ. ಪ್ರೋತ್ಸಾಹವಾಗಿ ನೀಡುವುದರಿಂದ ಸಣ್ಣ, ಅತೀ ಸಣ್ಣ ರೈತರಿಗೆ ಅನುಕೂಲವಾಗಲಿದ್ದು ಇದರಿಂದ ರೈತರಿಗೆ ಹೆಚ್ಚು ಅನುಕೂಲ ಕಲ್ಪಿಸಿದಂತಾಗುತ್ತದೆ ಎಂದರು. 

ಮೊಳಕಾಲ್ಮುರು ತಾಲೂಕಿನ ಪೂಜಾರಹಟ್ಟಿಯಲ್ಲಿ ಮುಕ್ಕಾಲು ಎಕರೆಯಲ್ಲಿ ತಿಪ್ಪೇಸ್ವಾಮಿ ಎಂಬ ರೈತ ನುಗ್ಗೆ ಬೆಳೆ ಹಾಗೂ ಇದರ ನಡುವೆ ಕರಿಬೇವು ಮತ್ತು ಸೀತಾಫಲ ಹಾಕಲಾಗಿದೆ. ಖಾತ್ರಿಯಡಿ 42 ಸಾವಿರ ರೂ. ಪ್ರೋತ್ಸಾಹಧನ ನೀಡಿದ್ದು ಇದನ್ನು ರೈತ ಮೂಲ ಬಂಡವಾಳವಾಗಿ ಉಪಯೋಗಿಸಿಕೊಳ್ಳಲಾಗಿದೆ. ಈಗಾಗಲೇ ನುಗ್ಗೆ, ಕರಿಬೇವಿನಿಂದ 65 ಸಾವಿರ ರೂ. ಪಡೆದಿದ್ದು ಲಾಭದಾಯಕವಾಗಿದೆ ಎಂದು ರೈತ ತಮ್ಮ ಅನುಭವವನ್ನು ಸಚಿವರೊಂದಿಗೆ ಹಂಚಿಕೊಂಡರು.

ಅಬ್ಬೇನಹಳ್ಳಿಯಲ್ಲಿ ಕುಮಾರಸ್ವಾಮಿ ಎಂಬ ರೈತ ಬೆಳೆದ ರೇಷ್ಮೆ ಬೆಳೆ ವೀಕ್ಷಿಸಿದ ಸಚಿವರು ಈ ರೈತನಿಗೆ ಯಾವ ಯಾವ ಸೌಲಭ್ಯ ಕಲ್ಪಿಸಲಾಗಿದೆ ಎಂದು ರೈತನೊಂದಿಗೆ ಸಂವಾದ ನಡೆಸಿದರು. ಈ ವೇಳೆ ಉದ್ಯೋಗ ಖಾತ್ರಿಯಿಂದ ಯಾವುದೇ ಸೌಲಭ್ಯ ನೀಡಲಾಗಿಲ್ಲ ಎಂದು ರೈತ ತಿಳಿಸಿದರು. ಈ ವೇಳೆ ಸಚಿವರು ಅಧೊಕಾರಿಗಳಿಗೆ ಸೂಚಿಸುತ್ತಾ ಅರ್ಥವಾಯಿತಾ ನಿಮಗೆ, ಮಾದರಿಯಾದ ರೈತನಿಗೆ ಸೌಲಭ್ಯಗಳ ಮಾಹಿತಿ ನೀಡಿಲ್ಲ ಎಂದರೆ ನೀವು ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತೀರಾ ಎಂದು ತಿಳಿಯಬೇಕಾಗುತ್ತದೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

Advertisement

ರೈತರು ಆಸಕ್ತಿ ಇದ್ದರೆ ಸರ್ಕಾರದ ಸೌಲಭ್ಯ ಪಡೆಯುವರು, ಇಲ್ಲವಾದಲ್ಲಿ ಸ್ವಂತವಾಗಿ ಕೈಗೊಳ್ಳುವರು. ಆದರೆ, ರೈತರು ಯಾವ ಬೆಳೆ ಬೆಳೆಯುತ್ತಾರೆ, ಅಂತಹ ಬೆಳೆಗಳಿಗಿರುವ ಸೌಲಭ್ಯಗಳ ಮಾಹಿತಿಯನ್ನು ಅಧಿಕಾರಿಗಳು ಕಡ್ಡಾಯವಾಗಿ ನೀಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಚಿವರು ಮಲ್ಲೂರಹಳ್ಳಿ ಗ್ರಾಪಂನ ಬಾಪೂಜಿ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಜನರಿಗೆ ನೀಡುತ್ತಿರುವ ಸೇವೆಗಳನ್ನು ಪರಿಶೀಲಿಸಿದರು. ಆಧಾರ್‌ ತಿದ್ದುಪಡಿಯನ್ನು ಕೇಂದ್ರದಲ್ಲಿ ಕೈಗೊಳ್ಳಲಾಗುತ್ತಿರುವ ಬಗ್ಗೆ ಮಾಹಿತಿ ಪಡೆದರು.

ಸಚಿವರೊಂದಿಗೆ ಸಂಸದ ಬಿ.ಎನ್‌.ಚಂದ್ರಪ್ಪ, ಜಿಪಂ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್‌, ಉಪಾಧ್ಯಕ್ಷ ಸುಶೀಲಮ್ಮ, ಆರ್‌.ಡಿ.ಪಿ.ಆರ್‌. ಸರ್ಕಾರದ ಪ್ರಧಾನ ಕಾರ್ಯದರ್ಶಿ ಎಲ್‌.ಕೆ. ಅತೀಕ್‌, ಜಿಪಂ ಸದಸ್ಯರಾದ ಮುಂಡರಗಿ ನಾಗರಾಜ್‌, ಡಾ| ಯೋಗೇಶ್‌ಬಾಬು, ಓಬಳೇಶ್‌, ಜಿಪಂ ಸಿಇಒ ರವೀಂದ್ರ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next