ವಿಧಾನಪರಿಷತ್ತು: ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಪ್ರಸ್ತಾಪದ ವೇಳೆ ಅಧಿಕಾರಿಗಳು ಗೈರು ಹಾಜರಿದ್ದ ಬಗ್ಗೆ ವಿಷಯ ಪ್ರಸ್ತಾಪಿಸಿದ ಆಡಳಿತಾರೂಢ ಪಕ್ಷದ ಸದಸ್ಯ ವಿ.ಎಸ್. ಉಗ್ರಪ್ಪ ಅಸಮಧಾನ ಹೊರಹಾಕಿದ ಪ್ರಸಂಗ ಬುಧವಾರ ನಡೆಯಿತು.
ಕಾಂಗ್ರೆಸ್‌ನ ಎಸ್. ರವಿ ಮಂಡಿಸಿದ ಪ್ರಸ್ತಾಪವನ್ನು ಜಯಮಾಲಾ ಅನುಮೋದಿಸಿ ಮಾತನಾಡಿದ ಬಳಿಕ, ಅಧಿಕಾರಿಗಳು ಗೈರು ಆಗಿರುವುದನ್ನು ಸದನದ ಗಮಕ್ಕೆ ತಂದ ಉಗ್ರಪ್ಪ, ರಾಜ್ಯಪಾಲರ ಭಾಷಣ ಮೇಲಿನ ಚರ್ಚೆ ವೇಳೆ ಸರ್ಕಾರಕ್ಕೆ ಉತ್ತಮ ಸಲಹೆಗಳನ್ನು ಕೊಡಲಾಗುತ್ತದೆ. ಅದನ್ನು ಬರೆದುಕೊಳ್ಳಬೇಕಾದ ಅಧಿಕಾರಿಗಳೇ ಇಲ್ಲ. ಅಧಿಕಾರಿಗಳು ರೇಸ್‌ಕೋರ್ಸ್‌ಗೆ ಹೋಗಿದ್ದಾರಾ ಎಂದು ತೀಕ್ಷ್ಣವಾಗಿ ಹೇಳಿದರು.
ಮಧ್ಯಪ್ರವೇಶಿಸಿದ ಬಿಜೆಪಿಯ ಕ್ಯಾ. ಗಣೇಶ್ ಕಾರ್ಣಿಕ್, ಕೋಟಾ ಶ್ರೀನಿವಾಸಪೂಜಾರಿ ಅಧಿಕಾರಿಗಳನ್ನು ಬಿಡಿ, ಸಚಿವರೇ ಇಲ್ಲ. ಕಡ್ಡಾಯವಾಗಿ ಮೂರು ಜನ ಸಚಿವರು ಸದನದಲ್ಲಿ ಇರಬೇಕು ಎಂಬ ನಿಯಮವಿದೆ. ಆದರೆ, ಇಲ್ಲಿ ಸಭಾನಾಯಕರನ್ನು ಬಿಟ್ಟರೆ, ಯಾವ ಸಚಿವರೂ ಇಲ್ಲ. ಕಡ್ಡಾಯವಾಗಿ ಹಾಜರಿರಬೇಕಿದ್ದ ಸಚಿವರು ಮತ್ತು ಅಧಿಕಾರಿಗಳ ಪಟ್ಟಿ ಓದಿ ಅದು ಕಡತಕ್ಕೆ ಹೋಗಲಿ ಎಂದು ಹೇಳಿದರು.
ಆಗ ಸಭಾಪತಿ ಪೀಠದಲ್ಲಿದ್ದ ರಾಮಚಂದ್ರಗೌಡ, ಕಾಗೋಡು ತಿಮ್ಮಪ್ಪ, ಟಿ.ಬಿ. ಜಯಚಂದ್ರ, ರಮಾನಾಥ ರೈ, ಎಂ.ಬಿ. ಪಾಟೀಲ್, ಸಂತೋಷ್ ಲಾಡ್, ಎಂ. ಕೃಷ್ಣಪ್ಪ, ಪ್ರಮೋದ್ ಮಧ್ವರಾಜ್ ಈ ದಿನ ಸದನದಲ್ಲಿ ಕಡ್ಡಾಯವಾಗಿ ಹಾಜರಿರಬೇಕಿತ್ತು. ಅದೇ ರೀತಿ ಕಾನೂನು, ಜಲಸಂಪನ್ಮೂಲ, ಪಶುಸಂಗೋಪನೆ, ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ವಸತಿ, ಕಾರ್ಮಿಕ ಹಾಗೂ ಯುವಸಬಲೀಕರಣ ಇಲಾಖೆಯ ಉಪಕಾರ್ಯದರ್ಶಿಗಳು ಕಡ್ಡಾಯವಾಗಿ ಇರಬೇಕಿತ್ತು ಎಂದು ಪಟ್ಟಿ ಓದಿದರು.
ಅಧಿಕಾರಿಗಳ ಗೈರು ಒಂದು ರೀತಿಯ ಶಿಷ್ಠಾಚಾರ ಉಲ್ಲಂಘನೆ ಎಂದು ಉಗ್ರಪ್ಪ ಹೇಳಿದರು. ಅಧಿಕಾರಿಗಳ ಮೇಲೆ ಸರ್ಕಾರದ ಹಿಡಿತ ಇಲ್ಲ ಅನ್ನುವುದು ಇದು ತೋರಿಸುತ್ತದೆ ಎಂದು ಬಿಜೆಪಿಯ ಎಂ.ಕೆ. ಪ್ರಾಣೇಶ್ ಹೇಳಿದರು. ಗೈರು ಹಾಜರಾಗುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಕಾನೂನು ರೂಪಿಸುವ ಅಗತ್ಯವಿದೆ. ಹಾಗಾಗಿ ಸೂಕ್ತ ಕಾನೂನು ರೂಪಿಸುವಂಎತೆ ಕಾನೂನು ಸಚಿವರಲ್ಲಿ ಅರಿಕೆ ಮಾಡಿಕೊಳ್ಳುತ್ತೇನೆ ಎಂದು ರಾಮಚಂದ್ರಗೌಡ ಹೇಳಿ ಚರ್ಚೆಗೆ ತೆರೆ ಎಳೆದರು.
ಸದಸ್ಯರೂ ಇರಲಿಲ್ಲ: ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯವನ್ನು ಕಾಂಗ್ರೆಸ್ ಸದಸ್ಯ ಎಸ್. ರವಿ ಸಂಜೆ 4.25ಕ್ಕೆ ಪ್ರಸ್ತಾಪಿಸಲು ಎದ್ದು ನಿಂತಾಗ ಸದಸ್ಯರ ಸಂಖ್ಯೆ ತೀರಾ ಕಡಿಮೆ ಇತ್ತು. ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷ ಸೇರಿ 11ರಿಂದ 13 ಜನ ಮಾತ್ರ ಸದಸ್ಯರು ಇದ್ದರು. ಸದನ ಮುಂದೂಡಲ್ಪಟ್ಟಾಗಲೂ ಸದಸ್ಯರ ಸಂಖ್ಯೆ ಹೆಚ್ಚು ಕಡಿಮೆ ಇಷ್ಟೇ ಇತ್ತು.