Advertisement

ಅತೃಪ್ತರ ಬಂಡಾಯ ಶಮನಕ್ಕೆ ಕಸರತ್ತು

11:54 AM Jun 13, 2018 | Team Udayavani |

ಬೆಂಗಳೂರು: ಸರ್ಕಾರ ಟೇಕ್‌ ಆಫ್ ಆಗುತ್ತಿರುವ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಅತೃಪ್ತರ ಬಂಡಾಯ ಶಮನ ಕಸರತ್ತು ನಡೆಯುತ್ತಿದೆ. ತಮ್ಮ ಆಪ್ತರಿಗೆ ಸಚಿವ ಸ್ಥಾನ, ನಿಗಮ ಮಂಡಳಿ ಹಾಗೂ ಸಂಸದೀಯ ಕಾರ್ಯದರ್ಶಿ ಹುದ್ದೆ ನೀಡುವಂತೆ ಎಚ್‌.ಕೆ.ಪಾಟೀಲ್‌ ಷರತ್ತು ವಿಧಿಸಿದ್ದಾರೆಂದು ತಿಳಿದು ಬಂದಿದೆ. 

Advertisement

ಪಕ್ಷದ ನಿರ್ಧಾರದ ವಿರುದ್ಧ ಮುನಿಸಿಕೊಂಡಿರುವ ಹಿರಿಯ ನಾಯಕ ಎಚ್‌.ಕೆ. ಪಾಟೀಲ್‌ ತಮ್ಮ ನಿವಾಸದಲ್ಲಿ ಮಂಗಳವಾರ ಅತೃಪ್ತ ಶಾಸಕರ ಸಭೆ ನಡೆಸಿದರು. ಏಳು ಶಾಸಕರು ಮೂವರು ವಿಧಾನ ಪರಿಷತ್‌ ಸದಸ್ಯರು ಸಭೆಗೆ ಹಾಜರಾಗಿದ್ದರು. ಎಚ್‌.ಕೆ. ಪಾಟೀಲರೊಂದಿಗೆ 14 ಜನ ಶಾಸಕರು ಗುರುತಿಸಿಕೊಂಡಿದ್ದಾರೆ. 

ಬಂಡಾಯ ಶಮನವಾಗಿದೆ ಎಂದು ಭಾವಿಸಿದ್ದ ಕಾಂಗ್ರೆಸ್‌ ಹೈಕಮಾಂಡ್‌ಗೆ ಎಚ್‌.ಕೆ. ಪಾಟೀಲ್‌ ಅತೃಪ್ತರ ಸಭೆ ನಡೆಸುತ್ತಿದ್ದಂತೆ ಅವರೊಂದಿಗೆ ಮಾತುಕತೆ ನಡೆಸಲು ಎಐಸಿಸಿ ಕಾರ್ಯದರ್ಶಿಗಳಾದ ಮಾಣಿಕ್ಯಂ ಠಾಕೂರ್‌ ಮತ್ತು ವಿಷ್ಣುನಾಥನ್‌ ಅವರ ಮೂಲಕ  ಪ್ರಯತ್ನ ನಡೆಸಿದರು.  

ಇಬ್ಬರೂ ಕಾರ್ಯದರ್ಶಿಗಳು ಎಚ್‌.ಕೆ. ಪಾಟೀಲ್‌ ನೇತೃತ್ವದ ಶಾಸಕರೊಂದಿಗೆ 4 ಗಂಟೆ ಚರ್ಚೆ ನಡೆಸಿದ್ದು, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಹಾಗೂ ಗುಲಾಂ ನಬಿ ಅಜಾದ್‌ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಸಮಾಧಾನ ಪಡಿಸುವ ಪ್ರಯತ್ನ ನಡೆಸಿದ್ದಾರೆ. 

ಎಚ್‌.ಕೆ. ಪಾಟೀಲ್‌ ತಮ್ಮೊಂದಿಗೆ ಗುರುತಿಸಿಕೊಂಡಿರುವ ಉತ್ತರ ಕರ್ನಾಟಕದ ಇಬ್ಬರು ಶಾಸಕರಿಗೆ ಸಚಿವ ಸ್ಥಾನ ನೀಡಬೇಕು. ಲಂಬಾಣಿ ಕೋಟಾದಡಿ ಒಬ್ಬರಿಗೆ ಸಚಿವ ಸ್ಥಾನ ನೀಡಬೇಕು. ಅಲ್ಲದೇ ಮೂವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಹಾಗೂ ಇಬ್ಬರಿಗೆ ಸಂಸದೀಯ ಕಾರ್ಯದರ್ಶಿ ಹುದ್ದೆ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ. 

Advertisement

ಮೂಲಗಳ ಪ್ರಕಾರ ಎಚ್‌.ಕೆ.ಪಾಟೀಲ್‌ ಸಚಿವರಾಗಲು ಒಪ್ಪಿದರೆ, ಅವರೊಂದಿಗೆ ಕುರುಬ ಸಮುದಾಯಕ್ಕೆ ಸೇರಿರುವ ಕುಂದಗೋಳ ಶಾಸಕ ಸಿ.ಎಸ್‌.ಶಿವಳ್ಳಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ. ಎಚ್‌.ಕೆ. ಪಾಟೀಲರೊಂದಿಗೆ ಈಶ್ವರ್‌ ಖಂಡ್ರೆ, ರಹೀಂ ಖಾನ್‌, ರಾಮಲಿಂಗಾ ರೆಡ್ಡಿ,

ರೋಷನ್‌ ಬೇಗ್‌, ತನ್ವೀರ್‌, ಬಿ. ನಾರಾಯಣ, ಉಮೇಶ್‌ ಜಾಧವ್‌, ಅಮರೇಗೌಡ ಬಯ್ನಾಪುರ, ಸುಬ್ಟಾರೆಡ್ಡಿ, ಶರಣಬಸಪ್ಪ ದರ್ಶನಾಪುರ, ಸಿ.ಎಸ್‌.ಶಿವಳ್ಳಿ, ಯಶವಂತರಾಯಗೌಡ ಪಾಟೀಲ್‌, ಪಿ.ಟಿ. ಪರಮೇಶ್ವರ ನಾಯ್ಕ,  ಮೇಲ್ಮನೆ ಸದಸ್ಯರಾದ ಬಸವರಾಜ್‌ ಪಾಟೀಲ್‌ ಇಟಗಿ, ಅಬ್ದುಲ್‌ ಜಬ್ಟಾರ್‌ ಹಾಗೂ ಶ್ರೀನಿವಾಸ್‌ ಮಾನೆ ಗುರುತಿಸಿಕೊಂಡಿದ್ದಾರೆ. 

ನಮ್ಮ ಭಾವನೆಗಳನ್ನು ಹೈಕಮಾಂಡ್‌ ಅರ್ಥ ಮಾಡಿಕೊಳ್ಳುತ್ತದೆ  ಎಂದು ಭಾವಿಸಿದ್ದೇವೆ. ನಾವು ಯಾವುದೇ ರೀತಿಯ ಬಂಡಾಯ ಸಾರುತ್ತಿಲ್ಲ.
-ಎಚ್‌.ಕೆ.ಪಾಟೀಲ್‌, ಕಾಂಗ್ರೆಸ್‌ ನಾಯಕ

ಸಮಾನ ಮನಸ್ಕ ಶಾಸಕರು ನಮ್ಮ ಅನಿಸಿಕೆಗಳನ್ನು ಎಐಸಿಸಿ ಕಾರ್ಯದರ್ಶಿಗಳಿಗೆ  ತಿಳಿಸಿದ್ದೇವೆ. ಅವರು ಹೈ ಕಮಾಂಡ್‌ ಗಮನಕ್ಕೆ ತರುವುದಾಗಿಹೇಳಿದ್ದಾರೆ. ಪಕ್ಷದಲ್ಲಿ ಯಾವುದೇ ಬಂಡಾಯ ಇಲ್ಲ
-ಈಶ್ವರ್‌ ಖಂಡ್ರೆ, ಸಚಿವ ಸ್ಥಾನ ವಂಚಿತ ಶಾಸಕ

ಎಂಬಿಪಿ ಮನವೊಲಿಸಲು ಡಿಕೆಶಿ ಕಸರತ್ತು: ಎಂ.ಬಿ.ಪಾಟೀಲ್‌ರನ್ನು ಮನವೊಲಿಸುವ ಪ್ರಯತ್ನ ಮುಂದುವರಿದಿದ್ದು, ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಮಂಗಳವಾರ ಅವರ ನಿವಾಸದಲ್ಲಿ ಭೇಟಿ ಮಾಡಿ ಅಸಮಾಧಾನ ಬಿಟ್ಟು ಸರ್ಕಾರದ ಭಾಗವಾಗುವಂತೆ ಮನವಿ ಮಾಡಿದ್ದಾರೆಂದು ತಿಳಿದು ಬಂದಿದೆ.  ಆದರೆ, ಎಂ.ಬಿ.ಪಾಟೀಲ್‌ ತಮ್ಮ ನಿಲುವು ಪ್ರಕಟಿಸುವ ಮೊದಲು ತಮ್ಮೊಂದಿಗೆ ಗುರುತಿಸಿಕೊಂಡಿರುವ ಶಾಸಕರೊಂದಿಗೆ ಚರ್ಚಿಸಿ ತೀರ್ಮಾನ ಮಾಡುವುದಾಗಿ ತಿಳಿಸಿದ್ದಾರೆ ಎಂದು ಹೇಳಲಾಗಿದೆ.

ಈ ವೇಳೆ ಎಂ.ಬಿ.ಪಾಟೀಲ್‌ ಮಾತನಾಡಿ, ಹಿಂದಿನ ಸರ್ಕಾರದಲ್ಲಿ 5 ವರ್ಷ ಮಂತ್ರಿಯಾದವರಿಗೆ ಸಚಿವ ಸ್ಥಾನ ಕೊಡುವುದಿಲ್ಲ ಎನ್ನುವುದಾರೆ, ಪಕ್ಷದಲ್ಲಿ ಎಲ್ಲರಿಗೂ ಒಂದೇ ಮಾನದಂಡವಾಗಬೇಕು. ಅದಕ್ಕೆ ನಾನು ತಲೆಬಾಗುತ್ತೇನೆ. ಆದರೆ, ಒಬ್ಬರಿಗೊಂದು ಮತ್ತೂಬ್ಬರಿಗೊಂದು ನ್ಯಾಯ ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next