Advertisement

ಮುಗಿಯದ ಕಥೆ

06:00 AM Dec 29, 2017 | |

ಹೀಗೊಬ್ಬಳು ಅತ್ತೆ. ಮೊದಲೇ ದಳಬಾಯಿ ಮಾಂಕಾಳಿ, ಕೆರಳಿದಾಗೆಲ್ಲ ಭದ್ರಕಾಳಿಯಾಗುವವಳು. ಜೇನುಮೇಣದಲಿ ಹಣೆಗೆ ಅಂಟಿಸಿದ ಅಸ್ತಕಾಲದ ಕೆಂಪುನೇಸರನ ದುಂಡು ಕುಂಕುಮದಲ್ಲೇ ಒಲೆಯ ಸಾವಿರ ಕೊಳ್ಳಿಗಳಂತೆ ಧಗಧಗನೆ ಉರಿಯುವವಳು. ಬಡ್ಡಿಬಂಗಾರಮ್ಮನಂಥವಳು! ಒಗ್ಗರಣೆ ಹಾಕುವಾಗ ಒಂದು ಕೊತ್ತಂಬರಿ ಬೀಜ ಓಡಿ ಹೋದರೂ ಅದರ ಹಿಂದೆಯೇ ಓಡಿ ಹೆಕ್ಕಿ ತಂದು ಮಸಾಲೆಗೆ ಹಾಕುವವಳು. ಇಂದು ಸೋಸಿದ ಚಾಪುಡಿಯನ್ನು ನಾಳೆಗಾದೀತು ಎಂದು ಡಬ್ಬದಲಿ ಮುಚ್ಚಿಡುವವಳು. ದಿನಾ ಮುಂಜಾನೆ ಮರದ ಕಲೆಂಬಿಯ ಬಾಯಿ ತೆರೆದು ಆ ದಿನಕ್ಕೆ ಬೇಕಾಗುವಷ್ಟೇ ಅಕ್ಕಿಬೇಳೆಯನ್ನು ಸೊಸೆಯ ಕೈಯಲ್ಲಿಟ್ಟು ಬೇಯಿಸಲು ಹೇಳುವವಳು.

Advertisement

ಆ ಕಾಲದ್ದೇ ಸೊಸೆ. ಒಲೆಯ ಬೆಂಕಿಯಲಿ ಬೇಳೆ ಬೇಯಲಿಟ್ಟು ಒಲವು ಬೆಳಕ ಕಾಯುವ ಮೂಳೆಚೀಲ ಅವಳು. ಹಸಿವಲ್ಲಿ ಮುಖವೇ ರೊಟ್ಟಿಯಾದವಳು, ಉಣ್ಣುತ್ತಿರುವ ಅತ್ತೆ, ಮಾವ, ಗಂಡನನ್ನೇ ರೊಟ್ಟಿಯೋ ಎನ್ನುವಂತೆ ಬಾವಿಯೊಳಗೇ ಹೂತುಹೋದ ಕಂಗಳಲ್ಲಿ ಉಗುಳುನುಂಗಿ ನೋಡುವವಳು. ಬೆನ್ನಿಗಂಟಿದ ಹೊಟ್ಟೆಯನ್ನು ಕತ್ತಲಲೇ ಬೆರಳುಗಳಲಿ ತಡಕಾಡುವವಳು. ಒಲೆಯ ಕೆಂಡವನ್ನೇ ನುಂಗಿಕೊಂಡು  ನೀರು ಕುಡಿದು ಬೆಳಕುನಗೆ ನಗುವವಳು. ಕತ್ತೆಚಾಕರಿಗೆ ತೊತ್ತವಳು. 

ತಾನು ನುಂಗಿದ ಬೆಂಕಿ ಇನ್ನೇನು ತನ್ನನ್ನೇ ಸುಟ್ಟು ಬಿಡುತ್ತದೆ ಎಂಬಷ್ಟು ಬದುಕು ಕುತ್ತಿಗೆಗೆ ಬಂದು ತೀರದಲಿ ಬಿದ್ದ ಮೀನಿನಂತೆ ವಿಲಿವಿಲಿ ಒದ್ದಾಡುತ್ತಿದ್ದ ದಿನ! ಅಂದೇ ಅತ್ತೆ ಆರು ಬಂಗುಡೆ ಮೀನು ತಂದು ಮಸಾಲೆ ಅರೆಯಲು ಹೇಳಿಯಾಯಿತು, ಸೊಸೆ ಒಡಲ ಬೆಂಕಿಯಲ್ಲೇ ಬೇಯಿಸಿಯೂ ಆಯಿತು. ಹೊರಗೆ ಗದ್ದೆಯಲ್ಲಿ ಅತ್ತೆ ಪುಂಡದ ಹಕ್ಕಿಯಂತೆ ಹೆಜ್ಜೆ ಹಾಕುವಾಗ ಒಳಗೆ ಮಣ್ಣಬಿಸಲೆಯೊಳಗೆ ಕೆಂಪುಮಸಾಲೆ ಹಚ್ಚಿಕೊಂಡ ಮೀನುತುಂಡುಗಳು ತಕಪಕ ಕುಣಿಯುತ  ಘಮಘಮ ಪರಿಮಳದಲ್ಲೇ ಕೈಬೀಸಿ ಕರೆಯುತ್ತಿವೆ. ಮೂಗು ಅರಳಿ ಹಸಿವು ಕೆರಳಿ ಹೊರಗಿಣುಕುತ್ತಲೇ ಸೊಸೆಯು ಒಂದು ಒಂದು ಎನ್ನುತ್ತ ತಿಂದು ಮೂರು  ತುಂಡು ಮಾತ್ರ ಉಳಿಯಬೇಕೇ? ಅತ್ತೆ ಬಂದವಳು ಮಣ್ಣಬಿಸಲೆ ನೋಡಿದವಳೇ ಬಣ್ಣ ಬಿಳುಚಿ, “ಏನೇ ಬೋಸುಡಿ, ಆರು ಬಂಗುಡೆ ತಂದಿದ್ದೆ, ಇಲ್ಲಿ ಮೂರೆ ತುಂಡು ಉಂಟಲ್ಲ? ಮಿಕ್ಕಿದ್ದೆಲ್ಲ ಏನಾಯೆ¤à ಬೊಗಳು? ಹೊಟ್ಟೆಗೆ ಕೈಹಾಕಿ ಕಾರಿಸ್ಲಿಕ್ಕೆ ಉಂಟು ಹಾ…!’ ಎಂದು ತಾರಸ್ವರದ ಬಣ್ಣದ ವೇಷದಂತೆ ಧಿಗಿಣಕುಟ್ಟುತ್ತ ಅಬ್ಬರಿಸಿಯೂ ಆಯಿತು. ಏನೇ ಆಗಲಿ, ಶತಮಾನಗಳಿಂದ ಹಸಿದಿದ್ದ ಹೊಟ್ಟೆ ಇಂದು ತುಂಬಿದೆ. ಇದುವರೆಗೆ ನುಂಗಿಕೊಂಡಿದ್ದ  ಬೆಂಕಿಯಲ್ಲಿ ಒಂದು ಕಿಡಿಯನ್ನಾದರೂ ಇಂದು ಹೊರ ಕಾರಲೇಬೇಕು ಎಂದು ಇಂದು ಜೀವದಾಸೆ ಬಿಟ್ಟು ನಿಶ್ಚಯಿಸಿದ್ದಳು ಆ ಸೊಸೆ. 

“ಯಾವ ಕಲ್ಪವಾ (ವಂಚನೆಯೊ) ಕೋಮಟಿಗೆಯೋ ನಂಗೊತ್ತಿಲ್ಲ ಮಾಮಿ, ಕತ್ತರಿಸುವಾಗ ಆರು ಬಂಗುಡೆ ಮೂರೇ ತುಂಡಾಯಿತು ನೋಡಿ! ಹನ್ನೆರಡಾಗಬೇಕಿತ್ತಲ್ಲ ‘ ಎಂದಳಂತೆ.
 
ಅತ್ತೆಗೆ ಜೀವ ಗಾಲ್‌ಮೇಲ್‌!
ಇಂಥ‌ದ್ದೇ ಇನ್ನೊಬ್ಬಳು ಸೊಸೆ ಹೊಟ್ಟೆ ತುಂಬಿಸಲು ಹೊರದಾರಿಯೊಂದನ್ನು ಯೋಚಿಸಿದಳು. ನೀರು ತರಲು ನೀರೆ ಮೈಲುಗಟ್ಟಲೆ ನಡೆಯಬೇಕಿದ್ದ ಕಾಲ. ಸೂರ್ಯ ಬಾಡುತ್ತಿದ್ದ ಹೊತ್ತು ನೋಡಿ, “ಅತ್ತೆ, ನೀರಿಗೆ ಹೋಗಿ ಬರ್ತೆàನೆ’ ಎಂದು ಹೊರಬಂದವಳ ಕೈಯಲ್ಲಿ ಕೊಡಪಾನ, ಅದರ ತಳದಲಿ ಇರುಳು ಕೊಳದಲಿ ಅಲುಗುವ ಚಂದ್ರನ ಪ್ರತಿಬಿಂಬದಂತೆ ಅವಳ ನಡಿಗೆಗೆ ಲಯಬದ್ಧವಾಗಿ ಚಲಿಸುವ ರುಬ್ಬು ಅಕ್ಕಿಹಿಟ್ಟು! ಕದ್ದು ಗೊತ್ತಿದ್ದವಳಲ್ಲ, ಕದ್ದಾಗಿದೆ. ಹಸಿವೆ ಎಂದು ಹಸಿ ಹಿಟ್ಟು ತಿನ್ನಲಾಗುವುದೆ? ತೆಕ್ಕಿಯ ಎಲೆಯಲ್ಲಿ ಸುರಿದು ಚೌಕ ಮಡಚಿ, ಬದುವಿನಂಚಿನಲ್ಲಿ ಹೆಣ ಸುಟ್ಟುರಿದ ಕೆಂಡದಲ್ಲಿ ಅರೆಬರೆ ಸುಟ್ಟಳು. ಗುಡಿಯಲ್ಲಿ ಅಮ್ಮನವರ ಮುಂದೆ ಉರಿಯುತ್ತಿದ್ದ ಹಣತೆ ದೀಪದ ಎಣ್ಣೆಯಲ್ಲಿ ಮುಳುಗಿಸಿ ಮುಳುಗಿಸಿ ತಿಂದಳು. 

“ಅಬ್ಟಾ ಇವಳ ಸೊಕ್ಕೇ! ಹೆಣ ಸುಟ್ಟ ಕೆಂಡದಲ್ಲಿ ಸುಟ್ಟ ಪೊಟ್ಟುಗಟ್ಟಿ (ಕಡುಬು)ಯನ್ನು ನನ್ನ ದೀಪದೆಣ್ಣೆಗೆ ಮುಳುಗಿಸಿ ಮುಳುಗಿಸಿ ರುಚಿಮಾಡಿ ತಿಂತಾಳಲ್ಲ! ಎಷ್ಟು ಧೈರ್ಯ ಇವಳಿಗೆ?’ ಎಂದು ದೇವಿ ಪಟಕ್ಕನೆ ಮೂಗಿನ ಮೇಲೆ ಬೆರಳಿಟ್ಟುಕೊಂಡಳು. ಮರುದಿನ ಅಭಿಷೇಕಕ್ಕೆ ಬಂದ ಪೂಜಾರಿಯ ಜೀವ ಬಾಯಿಗೇ ಬಂದು ಜಮೀನಾªರರ ಮನೆಯ ಅಂಗಳಕ್ಕೇ ನೆಗೆಯಿತು. “ಊರಿಗೆ ಏನೋ ಅನಿಷ್ಟ ಕಾದಿದೆ, ದೇವರ ಮೂಗಿನಿಂದ ಬೆರಳನ್ನು ಯಾರು ಕೆಳ ಹಾಕಿಸ್ತಾರೋ ಅವರಿಗೆ ನಾಲ್ಕು ಗದ್ದೆ, ಮತ್ತೂಂದು ಚಕ್ರಸರ ಮಾಡಿಸಿಕೊಡ್ತೇನೆ’ ಎಂದು ದಾಸವಾಳ ಮೈಕದಲ್ಲಿ ಬೊಬ್ಬಿಟ್ಟಾಯಿತು. ಯಾರು ಯಾರೇ ಬಂದರೂ ದೇವಿ ಜಪ್ಪಯ್ಯ ಎನ್ನಲಿಲ್ಲ. ಇತ್ತ ಈ ಕುಂಬಳಕಾಯಿ ಕಳ್ಳಿ ಹೆಗಲು ಮುಟ್ಟಿಕೊಂಡಳು. ಗುಡಿಯೊಳಗೆ ಹೋಗಿ ಬಾಗಿಲು ಮುಚ್ಚಿಕೊಂಡು ಅಗುಳಿ ಹಾಕಿಕೊಂಡಳು. “ನಾನು ಮಾಮಿಯ ಹೆಡೆಯಡಿಯ ಮರ್ಮಾಲ್‌(ಸೊಸೆ) ಎಂದು ಗೊತ್ತಿಲ್ಲವೇ ನಿನಗೆ? ಬೆರಳು ಕೆಳಹಾಕ್ತೀಯ, ಇಲ್ಲ ಈ ಕೊಡಪಾನದಲ್ಲೇ ನಿನ್ನ ಮಂಡೆಗೆ ಬಡೀಲಾ?’ ಎಂದದ್ದು ಕಿವಿಹಾಳೆಗೆ ಮುಟ್ಟುವ ಮೊದಲೇ ಸಟಕ್ಕ ದೇವಿಯ ಕೈಕೆಳಗಾಯಿತಂತೆ!

Advertisement

ಮತ್ತೂಬ್ಬಳು ಸೊಸೆ. ಸೊಸೆಯೆಂದರೆ ಎಂಥ ಸೊಸೆ. ತುಸು ಮಿಸುಕಿದರೆ ಸಾಕು, ಫ‌ಳಕ್ಕ ಮಿಂಚು ರಟ್ಟುವ ಹಸಿಬಿಸಿ ಜಕ್ಕಜವ್ವನೆ. ಗಂಡನನ್ನೇ ಮಂಕುಮರ್ಲು ಮಾಡಿ ಅಂಗೈಮುಷ್ಟಿಯಲ್ಲಿಟ್ಟುಕೊಂಡವಳು. ಬೊಚ್ಚುಬಾಯಿಯ ಹಣ್ಣು ಹಣ್ಣು ಅತ್ತೆಯನ್ನು ಬೀದಿಗೆ ತಳ್ಳಲು ಕಾಲ ಕಾಯುತ್ತಿದ್ದವಳು. ಕಥೆ ಕಥೆ ಕಥೆ. ಎರಡು ಜಡೆಗಳು ಹೊಯ್ಯಕಯ್ಯ ಹೊಡೆದಾಡಿದ ಕಥೆ! ಒಲೆಯ ಮುಂದೆ ಕಣ್ಮುಚ್ಚಿ ಕುರುಕುರು ಕಿರಿಕಿರಿ ಮಾಡುವ ಪಿಳಿಪಿಳಿ ಬೆಕ್ಕು ಕದ್ದಾಲಿಸಿ ಹೊರಗೆ ಕೂಗಿ ಹೇಳಿದ ಕಥೆ. ನಾಟಿಗದ್ದೆಗಳಲ್ಲಿ ಪಿಸಿಪಿಸಿ ಎದ್ದು  ತೆನೆತೆನೆಯಾಗಿ ತಲೆತೂಗಿದ ಕಥೆ. ಕಾಳು ಹೆಕ್ಕಿ ಹೆಕ್ಕಿ ತೂಕಡಿಸಿದ ಕೊರಳು ಹಕ್ಕಿ ಚೆಲ್ಲಿದ ಕಥೆ. ಮಣ್ಣಲ್ಲಿ ಮೊಳೆತ ಕಥೆ. ಗಾಳಿ ಬೊಗಸೆಯಲ್ಲಿ ದೂರ ಹೊತ್ತೂಯ್ದ ಹೂಗಂಧದ ನಿಟ್ಟುಸಿರ  ಕಥೆ. ಇಬ್ಬನಿ ಹೇಳುವ ಕಥೆ, ಮಳೆಗರೆಯುವ ಕಥೆ. ಕಣ್ಣಿಂದ ಉದುರಿ ನದಿಯಾಗಿ ಹರಿದು ಉಪ್ಪು$ನೀರ ಕಡಲಾಗುವ ಕಥೆ. ಕಾಲ-ದೇಶದ ಎಲ್ಲೆ ಮೀರಿ ಹರಿಯುತ್ತಲೇ ಇರುವ  ಮುಗಿಯದ ಕಥೆ.

ಕಿಚ್ಚಿಲ್ಲದ ಬೇಗೆಯಲ್ಲಿ, ಏರಿಲ್ಲದ ಗಾಯದಲ್ಲಿ ಬೆಂದು ನೊಂದ ಅಕ್ಕನ ನೋವ ನೋಯದವರೆತ್ತ ಬಲ್ಲರು? ದನಿಯೆತ್ತದೆ ಬೀಸುಕಲ್ಲಿಗೇ ತಮ್ಮೆದೆಯ ನೋವ ಬಿಟ್ಟುಬಿಟ್ಟವರು, ಜೋರಾಗಿ ನರಳದೆ ಒನಕೆ ಒರಲಿಗೇ ತಮ್ಮ ಪಾಡ ಬಿಟ್ಟುಕೊಟ್ಟವರು, ಒಲೆಯ ಬೆಂಕಿ ಹೊರಗೆ ಹರಡದಂತೆ ನೋಡಿಕೊಂಡವರು, ವ್ಯಥೆಯಲ್ಲೇ ಕಥೆಯಾದವರು.  ಸೀತಮ್ಮ, ಕೂಚಕ್ಕ, ಪಿಜ್ಜು, ಭಾಗಿ, ರಾಧಾ, ರಜಿಯಾ, ರೋಜಾ, ಹಸಿದವರ ಒಡಲಲ್ಲಿ ನರಳುವ ಹಸಿದ ಕಥೆ! ಕಾಯಕಥೆ!

– ಕಾತ್ಯಾಯಿನಿ ಕುಂಜಿಬೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next