Advertisement
1997ರವರೆಗೂ ಚಾಮರಾಜನಗರ ಪ್ರದೇಶ ಮೈಸೂರು ಜಿಲ್ಲೆಯೊಳಗೇ ಸೇರಿತ್ತು. ಈಗಿನ ಚಾಮರಾಜನಗರ ಜಿಲ್ಲೆಯ ಐದು ತಾಲೂಕುಗಳೂ ಮೈಸೂರು ಜಿಲ್ಲೆಗೇ ಸೇರಿದ್ದವು. ಆಡಳಿತ ವ್ಯವಸ್ಥೆಯ ಅನುಕೂಲಕ್ಕಾಗಿ 1997ರಲ್ಲಿ ಚಾಮರಾಜನಗರವನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಲಾಯಿತು.
Related Articles
Advertisement
1826ರಲ್ಲಿ ದ್ರಾವಿಡ ಶೈವಾಗಮ ಶಾಸ್ತ್ರ ರೀತಿಯಲ್ಲಿ ಶಿವ ದೇವಾಲಯ ನಿರ್ಮಾಣ ವಾಯಿತು. ರಾಜತ್ವ, ಈಶ್ವರತ್ವಗಳ ಸಮ್ಮಿಲನದ ಕುರುಹಾಗಿ ಚಾಮರಾಜೇಶ್ವರ ಎಂಬ ಹೆಸರಿನಲ್ಲಿ ಲಿಂಗವನ್ನು ಪ್ರತಿಷ್ಠಾಪಿಸಲಾಯಿತೆಂದು ದೇವಾಲಯದ ಕೈಪಿಡಿ ನಿರೂಪವೊಂದರಲ್ಲಿ ನಮೂದಿಸಲಾಗಿದೆ. ಮುಮ್ಮಡಿಯವರ ಮಾತೃಶ್ರೀ ಕೆಂಪನಂಜಮ್ಮಣ್ಣಿ ಅವರ ಹೆಸರಿನಲ್ಲಿ ಕೆಂಪ ನಂಜಾಂಬಾ ವಿಗ್ರಹವನ್ನು ಮತ್ತು ಚಾಮುಂಡೇಶ್ವರಿ ವಿಗ್ರಹವನ್ನು ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿದೆ.
ನಗ ನಾಣ್ಯ ಒಡವೆಗಳ ದೃಷ್ಟಿಯಿಂದ ಚಾಮರಾಜೇಶ್ವರ ಶ್ರೀಮಂತ ದೇವರು. ಮುಮ್ಮಡಿ ಕೃಷ್ಣರಾಜ ಒಡೆಯರು ತಮ್ಮ ಮೂವರು ಪತ್ನಿಯರೊಡನೆ ದೇವರ ದರ್ಶನಕ್ಕೆ ಬಂದಾಗ ತಮ್ಮ ಮತ್ತು ತಮ್ಮ ಪತ್ನಿಯರ ಮೈಮೇಲಿನ ಎಲ್ಲ ಒಡವೆಗಳನ್ನೂ ದೇವರಿಗೆ ಸಮರ್ಪಿಸುತ್ತಿದ್ದರಂತೆ. ಇವುಗಳು ಈಗಲೂ ಖಜಾನೆಯಲ್ಲಿ ಸುರಕ್ಷಿತವಾಗಿವೆ. ಇವುಗಳಲ್ಲಿ ಕೆಲವನ್ನು ಗಿರಿಜಾ ಕಲ್ಯಾಣದ ಸಮಯದಲ್ಲಿ ಹೊರತೆಗೆದು ದೇವರಿಗೆ ಅಲಂಕರಿಸುತ್ತಾರೆ. ಹಿಂದೆ ಮುಮ್ಮಡಿ ಕೃಷ್ಣರಾಜ ಒಡೆಯರು ದರ್ಶನಕ್ಕೆ ಬಂದಾಗ ಉತ್ಸವ ಮೂರ್ತಿಗೆ ಎಲ್ಲ ಆಭರಣಗಳನ್ನೂ ಧರಿಸಿ ಚಿತ್ರ ಮಂಟಪೋತ್ಸವ ಮಾಡುತ್ತಿದ್ದರು. ವಿಜಂಭಣೆಯಿಂದ ಕಾಣುತ್ತಿದ್ದ ದೇವರನ್ನು ನೋಡಲು ಎರಡು ಕಣ್ಣುಗಳು ಸಾಲದೆಂಬಂತೆ ಇರುತ್ತಿತ್ತಂತೆ.
50-60 ವರ್ಷಗಳ ಹಿಂದೆ ಈ ದೇವಾಲಯ ಊರಿನ ಕೇಂದ್ರವಾಗಿತ್ತು. ಅರ್ಚಕರು, ಮಂತ್ರ ಪುಷ್ಪದವರು, ಶ್ರೀಪಾದದವರು, ವಾದ್ಯದವರು, ಪರಿಚಾರಕರು ಸೇರಿ 108 ಮಂದಿ ಸಿಬ್ಬಂದಿಯಿದ್ದರೆಂದು ಹಿರಿಯರು ನೆನೆಸಿಕೊಳ್ಳುತ್ತಾರೆ. ದೇವಸ್ಥಾನದಲ್ಲೇ ಸಂಸ್ಕೃತ ವೇದ ಉಪನಿಷತ್ತುಗಳನ್ನು ಕಲಿಸಲಾಗುತ್ತಿತ್ತು. ಪ್ರಾಚಾರ್ಯರ ಗುಂಪೇ ಇತ್ತು. ಈ ಪಾಠ ಶಾಲೆಗೆ ಚಕ್ರವರ್ತಿ ರಾಜಗೋಪಾಲಾಚಾರ್ಯರೂ ಅಧ್ಯಕ್ಷರಾಗಿದ್ದರು. ಪಾಠಶಾಲೆಗೆ, ವಿದ್ಯಾರ್ಥಿಗಳಿಗೆ, ದೇವರ ನೈವೇದ್ಯಕ್ಕೆ, (ಬೇರೆಡೆಯಿಂದ ಬಂದು ಸತ್ಯಮಂಗಲಕ್ಕೆ ಹೋಗಬೇಕಾದವರು ಚಾಮರಾಜನಗರದಲ್ಲಿ ತಂಗಬೇಕಿತ್ತು.) ಯಾತ್ರಾರ್ಥಿಗಳಿಗೆ ಶಿವಕೂಟ ಎಂಬ ಹೆಸರಿನಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಅದರ ಅಡುಗೆ ಮಾಡುತ್ತಿದ್ದವರಲ್ಲಿ ಪಚ್ಚಪ್ಪನವರೂ ಒಬ್ಬರಾಗಿದ್ದರು. (ಈ ಪಚ್ಚಪ್ಪನವರು ನಂತರ ಚಾಮರಾಜನಗರದಲ್ಲಿ ಪ್ರಸಿದ್ಧ ಹೋಟೆಲ್ ಸ್ಥಾಪಿಸಿದರು. ಅದು ದೋಸೆಗೆ ಬಹಳ ಪ್ರಸಿದ್ಧವಾಗಿತ್ತು.) ಪಚ್ಚಪ್ಪನವರು ಮಾಡುತ್ತಿದ್ದ ಅಡುಗೆ ಬಹಳ ಹೆಸರಾಗಿತ್ತು. ಸಾರು ಅಂದರೆ ಪಚ್ಚಪ್ಪನ ಸಾರು ಎಂದು ಆಗಿನವರು ಹೊಗಳುತ್ತಿದ್ದರಂತೆ.
ದೇವಸ್ಥಾನದ ಖರ್ಚು ವೆಚ್ಚಗಳಿಗಾಗಿ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು 13 ಗ್ರಾಮಗಳನ್ನು ಬಿಟ್ಟಿದ್ದರು. ಉಮ್ಮತ್ತೂರು, ನವಿಲೂರು, ಮೂಡಲ ಅಗ್ರಹಾರ, ಬೇಡರಪುರ, ಕಟ್ಟೇಪುರ, ಶಿವಪುರ, ಯಲಕ್ಕೂರು, ಹರದನಹಳ್ಳಿ, ಸಪ್ಪಯ್ಯನಪುರ, ಹಂಡ್ರಕಹಳ್ಳಿ, ಬೆಂಡರವಾಡಿ, ಮುತ್ತಿಗೆ ಮತ್ತು ಹೆಗ್ಗೊಠಾರ. ಈ ಗ್ರಾಮಗಳಿಂದ ಬರುವ ಕಂದಾಯದ ಆದಾಯದಲ್ಲಿ ದೇವಾಲಯದ ಪೂಜಾದಿಗಳು ವಿಜೃಂಭಣೆಯಿಂದ ನಡೆಯುತ್ತಿದ್ದವು. ರಥೋತ್ಸವ, ಗಿರಿಜಾ ಕಲ್ಯಾಣ, ಅಂಧಕಾಸುರ ವಧೆ ಮುಂತಾದವುಗಳನ್ನು ನೋಡಲು ದೂರದ ಊರುಗಳಿಂದ ಜನರು ಬರುತ್ತಿದ್ದರು ಎಂದು ಹಿರಿಯರು ಜ್ಞಾಪಿಸಿಕೊಳ್ಳುತ್ತಾರೆ.