ಕಾರ್ಕಳ: ತಾಲೂಕಿನ ಹಾಳೆಕಟ್ಟೆ- ಕಲ್ಯಾ ಮಲ್ಲಾಯಬೆಟ್ಟು ರಸ್ತೆ ಕಳೆದ ಎಂಟು -ಹತ್ತು ವರ್ಷಗಳಿಂದ ಡಾಮರು ಕಾಮಗಾರಿ ಆಗದೇ ಸಂಪೂರ್ಣ ಹದಗೆಟ್ಟಿದೆ. ಇದರಿಂದಾಗಿ ಈ ರಸ್ತೆಯ ಅವಲಂಬಿತರಿಗೆ ನಿತ್ಯವೂ ಸಂಕಟ ಎದುರಾಗಿದೆ. ಹಾಳೆಕಟ್ಟೆಯಿಂದ- ಕಲ್ಯಾ ಮಲ್ಲಾಯಬೆಟ್ಟು ಮೂಲಕ ಕುಂಟಾಡಿ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ. ಈ ಭಾಗದ ಹೆಚ್ಚಿನ ಜನರು ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ಆದರೆ ಕೆಳೆದ ಹಲವು ವರ್ಷಗಳಿಂದ ರಸ್ತೆಗೆ ಡಾಮರು ಕಾಮಗಾರಿ ಆಗದೇ ಸಮಸ್ಯೆ ಎದುರಾಗಿದೆ. ಸದ್ಯ ಈ ರಸ್ತೆಯಲ್ಲಿ ಲಘು ವಾಹನಗಳೂ ಚಲಿಸಲು ಸಾಧ್ಯವಿಲ್ಲದಂತಾಗಿದೆ.
ಮಳೆಗಾಲದಲ್ಲಿ ಹೇಳತೀರದ ಸ್ಥಿತಿ
ಬೇಸಗೆಯಲ್ಲಿ ಧೂಳುಮಯವಾಗಿರುವ ಈ ರಸ್ತೆಯಲ್ಲಿ ಮಳೆಗಾಲದಲ್ಲಿ ಮತ್ತೂಂದು ರೀತಿಯಲ್ಲಿ ಸಮಸ್ಯೆ ಎದುರಾಗುತ್ತದೆ. ರಸ್ತೆ ಅಲ್ಲಲ್ಲಿ ಬೃಹತ್ ಹೊಂಡದಿಂದ ಕೂಡಿದ್ದು, ಅದರಲ್ಲಿ ನೀರು ನಿಂತು ಸಂಚಾರಕ್ಕೆ ಅಡ್ಡಿಯುಂಟಾಗುತ್ತದೆ. ಪಾದಾಚಾರಿಗಳಿಗೂ ಸಮಸ್ಯೆ ಎದುರಾಗುತ್ತದೆ. ಅರಣ್ಯ ಇಲಾಖೆಯ ತಡೆಯಿಂದಾಗಿ ಎರಡು ಗ್ರಾಮಗಳನ್ನು ಸಂಪರ್ಕಿಸುವ ರಸ್ತೆಯ ಕಾಮಗಾರಿ ಅರ್ಧಕ್ಕೆ ನಿಂತಿದೆ. ಆದರೆ ಹಲವು ವರ್ಷಗಳು ಕಳೆದರೂ ಸಮಸ್ಯೆಗೆ ಇನ್ನೂ ಮುಕ್ತಿ ದೊರೆತಿಲ್ಲ. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ‘ನಮ್ಮ ಗ್ರಾಮ – ನಮ್ಮ ರಸ್ತೆ’ ಕಾಮಗಾರಿ ಜಾರಿಯಾದರೂ ಇಲ್ಲಿಯವರೆಗೂ ಈ ರಸ್ತೆಯ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ.
ಹಾಳೆಕಟ್ಟೆಯಿಂದ ಮಲ್ಲಾಯಬೆಟ್ಟುವರೆಗೆ ರಸ್ತೆಗೆ ಡಾಮರು ರಸ್ತೆ ಇದ್ದು, ಅಲ್ಲಿಂದ ಸುಮಾರು 400 ಮೀ. ಉದ್ದದ ರಸ್ತೆಯಲ್ಲಿ ಜಲ್ಲಿ ಕಲ್ಲುಗಳು ಮೇಲೆದ್ದಿವೆ. ಈ ರಸ್ತೆಗೆ ಅರಣ್ಯ ಇಲಾಖೆಯ ಅಕ್ಷೇಪವಿದ್ದು, ಹೀಗಾಗಿ ಕಾಮಗಾರಿಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿತ್ತು. ಇದರಿಂದಾಗಿ ಕುಂಟಾಡಿ ಹಾಗೂ ಕಲ್ಯಾ ಹಾಳೆಕಟ್ಟೆಯ ಜನತೆ ಸಮಸ್ಯೆ ಎದುರಿಸುವಂತಾಗಿದೆ. ಹಾಳೆಕಟ್ಟೆಯಿಂದ ಕುಂಟಾಡಿಗೆ ಸುಮಾರು 5 ಕಿ.ಮೀ. ರಸ್ತೆಯಿದ್ದು 400 ಮೀ. ಉದ್ದದ ರಸ್ತೆ ಡಾಮರು ಕಾಣದೆ ಬಾಕಿಯಾಗಿದೆ. ಕುಂಟಾಡಿ ಕಡೆಯಿಂದ ಹಾಗೂ ಕಲ್ಯಾ ಮಲ್ಲಾಯಬೆಬೆಟ್ಟುವರೆಗೆ ಸ್ವಲ್ಪ ಭಾಗ ಡಾಮರು ಹಾಕಲಾಗಿದೆ. ಈ ಭಾಗದಲ್ಲಿ ಸಾಕಷ್ಟು ಗಣಿಗಾರಿಕೆಗಳು ನಡೆಯುತ್ತಿದ್ದು. ಘನ ವಾಹನಗಳ ಸಂಚರಿಸುತ್ತಿವೆೆ. ಇದರ ಪರಿಣಾಮ ಮಳೆಗಾಲದಲ್ಲಿ ರಸ್ತೆಗಳು ಹೊಲದಂತಾಗುತ್ತವೆ ಎನ್ನುತ್ತಾರೆ ಸ್ಥಳೀಯರು.
ಮೊಟಕುಗೊಂಡ ಕಾಮಗಾರಿ
ಈ ರಸ್ತೆ ದುರಸ್ತಿಗೊಂಡರೆ ಇಲ್ಲಿನ ಜನತೆಗೆ ತುಂಬಾ ಪ್ರಯೋಜನವಾಗಲಿದೆ. ಸಾಕಷ್ಟು ಹೋರಾಟ ನಡೆಸಲಾಗಿದೆ. ಪ್ರಯೋಜನವಾಗಿಲ್ಲ. ಅರಣ್ಯ ಇಲಾಖೆಯ ತಡೆಯಿಂದಾಗಿ ರಸ್ತೆಯ ಕಾಮಗಾರಿ ಅರ್ಧಕ್ಕೆ ನಿಂತಿದೆ. ಮಳೆಗಾಲದಲ್ಲಿ ಹೆಚ್ಚು ಸಮಸ್ಯೆ ಉಂಟಾಗುತ್ತದೆ.
– ಪ್ರವೀಣ್ ಕುಮಾರ್, ಸ್ಥಳೀಯ ನಿವಾಸಿ