ಸಾಗರ: ನಗರದ ನೆಹರೂ ನಗರದ 7ನೇ ತಿರುವಿನ ಹೊಸ ಉಪ್ಪಾರ ಕೇರಿ ಸರ್ಕಲ್‌ನಲ್ಲಿ ತೆರವುಗೊಳಿಸಿರುವ ನಾಮಫಲಕವನ್ನು ಪುನರ್ ಅಳವಡಿಸುವಂತೆ ಒತ್ತಾಯಿಸಿ ಶುಕ್ರವಾರ ವೀರ ಮಾರುತಿ ಯುವಕ ಸಂಘದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು. ವೀರಮಾರುತಿ ದೇವಸ್ಥಾನದಿಂದ ಹೊರಟ ಬೃಹತ್ ಪ್ರತಿಭಟನಾ ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ನಗರಸಭೆ ಎದುರು ಧರಣಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಪ್ರತಿಭಟನಾನಿರತರು ಬೇಡಿಕೆ ಈಡೇರುವವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದರು. ಪ್ರತಿಭಟನಾನಿರತರು ನಗರಸಭೆ ಅಧ್ಯಕ್ಷರ ವಾಹನವನ್ನು ಅಡ್ಡಗಟ್ಟಿ ಬೇಡಿಕೆ ಈಡೇರಿಸುವಂತೆ ಒತ್ತಾಯಿಸುವ ಜೊತೆಗೆ ಸ್ಥಳದಲ್ಲಿ ಗಂಜಿ ಕೇಂದ್ರ ಸ್ಥಾಪಿಸಿ ಅಹೋರಾತ್ರಿ ಧರಣಿ ನಡೆಸುವ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಡಿವೈಎಸ್‌ಪಿ ಮಂಜುನಾಥ ಕವರಿ, ಯಾವುದೇ ಕಾರಣಕ್ಕೂ ಗಂಜಿ ಕೇಂದ್ರ ಸ್ಥಾಪಿಸಲು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಆಗ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಪರಸ್ಪರ ಮಾತಿನ ಚಕಮಕಿ ನಡೆಯಿತು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಯು.ಎಚ್. ರಾಮಪ್ಪ ಮಾತನಾಡಿ, ಹೊಸ ಉಪ್ಪಾರಕೇರಿ ಅತ್ಯಂತ ಹಳೆಯ ಸ್ಥಳವಾಗಿದೆ. ಮಾರಿಕಾಂಬಾ ದೇವಸ್ಥಾನ ಪ್ರಾರಂಭವಾದಾಗಿನಿಂದ ಉಪ್ಪಾರಕೇರಿ ಇಲ್ಲಿದೆ. ಮಾರಿಕಾಂಬಾ ಜಾತ್ರೆ ಸಂದರ್ಭದಲ್ಲಿ ಈ ಕೇರಿಯಿಂದಲೇ ಪೋತರಾಜ ಹೊರಡುತ್ತದೆ. ಹಿಂದಿನಿಂದಲೂ ಈ ಕೇರಿಯನ್ನು ಹೊಸ ಉಪ್ಪಾರಕೇರಿ ರಸ್ತೆ ಸರ್ಕಲ್ ಎಂದು ಕರೆದುಕೊಂಡು ಬರಲಾಗುತ್ತಿದೆ. ಇದೀಗ ನಗರಸಭೆ ಅಧಿಕಾರಿಗಳು ನಾಮಫಲಕ ತೆಗೆದು ಹಾಕುವ ಮೂಲಕ ಸ್ಥಳೀಯರ ಮನಸ್ಸಿಗೆ ಘಾಸಿ ಉಂಟು ಮಾಡಿದ್ದಾರೆ ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಡಿ. ಮೇಘರಾಜ್ ಮಾತನಾಡಿ, ನಗರಸಭೆ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆ ವಾಸ್ತವ ಸ್ಥಿತಿಯನ್ನು ಅರಿಯಬೇಕು. ಅತ್ಯಂತ ಹಳೆಯದಾದ ಉಪ್ಪಾರ ಕೇರಿಯಲ್ಲಿ ಅಶಾಂತಿ ಉಂಟು ಮಾಡಲು ಒಂದು ಕೋಮಿನವರು ಪ್ರಯತ್ನ ಮಾಡುತ್ತಿದ್ದಾರೆ. ಇಲ್ಲಿರುವ ಕನ್ನಡ ಧ್ವಜಸ್ತಂಭವನ್ನು ಕೆಲವು ಕಿಡಿಗೇಡಿಗಳು ಕಾಲಿನಿಂದ ಒದ್ದು ನಾಡುನುಡಿಗೆ ಅವಮಾನ ಮಾಡಿದ್ದಾರೆ ಎಂದರು. ಸಂಘ ಪರಿವಾರದ ಪ್ರಮುಖರಾದ ಅ.ಪು. ನಾರಾಯಣಪ್ಪ ಮಾತನಾಡಿ, ಒಂದು ಕೋಮಿನವರು ಊರಿನಲ್ಲಿ ಅಶಾಂತಿ ಉಂಟು ಮಾಡಲು ಬೇರೆ ಬೇರೆ ಸಂದರ್ಭವನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ. ನಾವು ಕಾನೂನು ಉಲ್ಲಂಘಿಸುವ ಸ್ವಭಾವ ಹೊಂದಿಲ್ಲ. ಅಧಿಕಾರ ಇದೆ ಎಂದು ಜನರನ್ನು ಕೆರಳಿಸುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ. ಕಿತ್ತು ಹಾಕಿರುವ ನಾಮಫಲಕವನ್ನು ತಕ್ಷಣ ಅಳವಡಿಸಬೇಕು. ಅನಗತ್ಯವಾಗಿ ನಮ್ಮನ್ನು ಹೋರಾಟಕ್ಕೆ ಇಳಿಸುವ ಪ್ರಯತ್ನ
ಮಾಡಲಾಗುತ್ತಿದೆ. ನಾವು ಸಮಾಧಾನಚಿತ್ತವಾಗಿ ನಾಮಫಲಕ ಅಳವಡಿಸುವತನಕ ಹೋರಾಟ ಮುಂದುವರಿಸುತ್ತೇವೆ ಎಂದು ತಿಳಿಸಿದರು.
ನಗರಸಭೆ ಸದಸ್ಯರಾದ ಸಂತೋಷ್ ಶೇಟ್, ಆರ್. ಶ್ರೀನಿವಾಸ್, ಅರವಿಂದ ರಾಯ್ಕರ್, ನಾಗರತ್ನ, ಸಂಘದ ಅಧ್ಯಕ್ಷ ಅನೂಪ್, ಸುದರ್ಶನ್, ವಿಶ್ವ ಹಿಂದೂ ಪರಿಷತ್ ತಾಲೂಕು ಅಧ್ಯಕ್ಷ ಐ.ವಿ.ಹೆಗಡೆ, ಪ್ರಮುಖರಾದ ಆರಗ ಚಂದ್ರಶೇಖರ್, ರಾಘವೇಂದ್ರ ಭಟ್, ಶ್ರೀಧರ ಜೋಗಿ, ಸತೀಶ್ ಕೆ. ಮೊಗವೀರ, ಏಜೆಂಟ್ ನಾಗರಾಜ್, ನಾಗರಾಜ ಮೊಗವೀರ, ಬಸವರಾಜ್, ಮಂಜಮ್ಮ, ನೇತ್ರಮ್ಮ, ರಾಜು ಬಿ. ಮಡಿವಾಳ, ಮಾ.ಪು. ಇಕ್ಕೇರಿ, ಕೆ.ವಿ. ಪ್ರವೀಣ್, ಗಣೇಶ್ ಗಟ್ಟಿ, ರವಿರಾಜ ಶೆಟ್ಟಿ, ಪರಶುರಾಮ್, ಶ್ರೀಧರ ಸಾಗರ್, ಹೇಮಾವತಿ, ಶಶಿಕಲ, ಕುಮಾರ, ಸಂತೋಷ್, ನಾಗವೇಣಿ ಇನ್ನಿತರರು ಇದ್ದರು.
ಈ ನಡುವೆ ಪ್ರತಿಭಟನೆ ಮುಂದುವರಿದಿದ್ದು, ಶಾಸಕರು ಹಾಗೂ ನಗರಸಭೆಯ ಜನಪ್ರತಿನಿಧಿಗಳು ಆಗಮಿಸಿ ವಿವಾದ ಬಗೆಹರಿಸಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದು ಕುಳಿತಿದ್ದಾರೆ.