Advertisement

ಅರೆಬರೆ ಹೆದ್ದಾರಿ ಕಾಮಗಾರಿ: ಪ್ರಾಣಕ್ಕೆ ಎರವಾಗುವ ಭೀತಿ

02:00 AM Jul 04, 2018 | Team Udayavani |

ಕುಂದಾಪುರ: ಮಳೆ ಬಿರುಸುಗೊಂಡಿದ್ದು, ಈ ಮಧ್ಯೆ ಅರೆಬರೆಯಾಗಿರುವ ಕುಂದಾಪುರ – ಕಾರವಾರ ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿಯು ದಿನಕ್ಕೊಂದು ಅಧ್ವಾನವನ್ನು ಸೃಷ್ಟಿಸುತ್ತಿದೆ. ಕುಂದಾಪುರದ ವಿನಾಯಕ ಚಿತ್ರ ಮಂದಿರ ಬಳಿಯಿಂದ ಆರಂಭಗೊಂಡು, ಶಾಸ್ತ್ರಿ ಸರ್ಕಲ್‌ ಬಳಿ, ತಲ್ಲೂರು, ಹೆಮ್ಮಾಡಿಯಾಗಿ ತ್ರಾಸಿಯವರೆಗೂ ಹೆದ್ದಾರಿಯಲ್ಲಿ ಬೃಹತ್‌ ಗಾತ್ರದ ಹೊಂಡಗಳು ಕಾಣಿಸಿಕೊಂಡಿದ್ದು, ವಾಹನ ಸವಾರರ ಪ್ರಾಣಕ್ಕೆ ಎರವಾಗುವ ಭೀತಿ ಎದುರಾಗಿದೆ. ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು, ಅದರಲ್ಲೂ ದ್ವಿಚಕ್ರ ವಾಹನ ಸವಾರರಂತೂ ಪ್ರಾಣವನ್ನು ಕೈಯಲ್ಲಿಟ್ಟು ಕೊಂಡೇ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. 

Advertisement

ರಾಶಿ ಹಾಕಿದ ಮಣ್ಣು ರಸ್ತೆಗೆ
ಚತುಷ್ಪಥ ಕಾಮಗಾರಿಯ ವೇಳೆ ತಲ್ಲೂರು ಪೇಟೆಯಿಂದ ರಾಜಾಡಿ ಸೇತುವೆಯವರೆಗೆ ರಸ್ತೆಯ ಬಲಬದಿಗೆ ರಾಶಿ ಹಾಕಿದ ಮಣ್ಣು ಮಳೆಯಿಂದಾಗಿ ಕುಸಿದಿದ್ದು, ರಸ್ತೆಗೆ ಬಿದ್ದ ಪರಿಣಾಮ ಸಂಚಾರಕ್ಕೆ ತೊಂದರೆಯಾಗುತ್ತಿದೆ. ತಾತ್ಕಾಲಿಕ ರಸ್ತೆ ಮಾಡುವ ವೇಳೆಯಲ್ಲಿ ಮಣ್ಣನ್ನು ಗಟ್ಟಿಗೊಳಿಸದೆ, ಸೇಡಿ ಮಣ್ಣಿನ ಮೇಲೆ ಡಾಮರು ಹಾಕಲಾಗಿತ್ತು. ಆದರೆ ಕಳೆದ ಕೆಲ ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಹೆದ್ದಾರಿಯ ಎಡ ಭಾಗದಲ್ಲಿ ಕುಸಿತ ಉಂಟಾಗಿದ್ದು, ವಾಹನಗಳ ಸಂಚಾರಕ್ಕೆ ನಿತ್ಯವೂ ಅಡಚಣೆಯಾಗುತ್ತಿದೆ. ನಾವುಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಣಿಸಿಕೊಂಡಿರುವ ಬೃಹತ್‌ ಗಾತ್ರದ ಹೊಂಡಕ್ಕೆ ವಾಹನ ಸವಾರರು ಬೀಳಬಾರದು ಎಂದು ಸ್ಥಳೀಯರು ಪಪ್ಪಾಯಿ ಗಿಡವೊಂದನ್ನು ನೆಟ್ಟಿದ್ದಾರೆ.

ಟ್ರಾಫಿಕ್‌ ಜಾಂ
ಕುಂದಾಪುರದಿಂದ ಹೆಮ್ಮಾಡಿಯವರೆಗೆ ಹದಗೆಟ್ಟ ಹೆದ್ದಾರಿಯಿಂದಾಗಿ ನಿತ್ಯ ಬೆಳಗ್ಗೆ ಹಾಗೂ ಸಂಜೆ ಸಮಯದಲ್ಲಿ ವಾಹನ ದಟ್ಟಣೆ ಹೆಚ್ಚಿರುವುದರಿಂದ ಟ್ರಾಫಿಕ್‌ ಜಾಂ ಉಂಟಾಗುತ್ತಿದೆ.

ಎರಡೇ ದಿನದಲ್ಲಿ ತೇಪೆ ಮಾಯ
ತಲ್ಲೂರಿನ ಹೆದ್ದಾರಿಯಲ್ಲಿ ಹೊಂಡ- ಗುಂಡಿಗಳು ಹೆಚ್ಚಿರುವ ಕಡೆ ಸಿಮೆಂಟ್‌ ಮಿಶ್ರಿತವಾದ ಜಲ್ಲಿಯ ತೇಪೆ ಹಾಕುವ ಕಾರ್ಯ ಮಂಗಳವಾರ ನಡೆದಿತ್ತು. ಆದರೆ ಆ ತೇಪೆಯೂ ಎರಡೇ ದಿನಗಳಲ್ಲಿ ಎದ್ದು ಹೋಗಿದೆ.

Advertisement

Udayavani is now on Telegram. Click here to join our channel and stay updated with the latest news.

Next