ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಗಿರಿಜನ ಉಪಯೋಜನೆಯ ಅನುದಾನದಲ್ಲಿ ಕಡ್ಡಾಯವಾಗಿ ನೀಡಬೇಕಿದ್ದ 26,131 ಕೋಟಿ ರೂ.ಗಳ ಬದಲಿಗೆ, ಅದನ್ನು ಹೆಚ್ಚು ಮಾಡಿ 26,930 ಕೋಟಿ ರೂ.ಗಳ ಅನುದಾನ ನೀಡಿರುವುದು ಮೆಚ್ಚತಕ್ಕ ಅಂಶ. ಇದರಿಂದ 799 ಕೋಟಿ ರೂ.ಗಳ ಅನು ದಾನ ಹೆಚ್ಚಳವಾಗಿದೆ. ಉತ್ತಮ ಕ್ರಿಯಾ ಯೋಜನೆ ರೂಪಿಸಿ ಕಾಲಕಾಲಕ್ಕೆ ನಿಯಮಿತವಾಗಿ ಅನುದಾನವನ್ನು ಬಿಡುಗಡೆ ಮಾಡಿ, ಕಟ್ಟುನಿಟ್ಟಿನ ಅನುಷ್ಟಾನ ಮಾಡಿದಲ್ಲಿ ಪರಿಶಿಷ್ಟರಿಗೆ ಅನುಕೂಲವಾಗುತ್ತದೆ.
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಶಾಲೆ ಗಳಲ್ಲಿ ಆಯಾ ತಾಲೂಕಿನ ವಿದ್ಯಾರ್ಥಿಗಳಿಗೆ ಶೇ.25ರಷ್ಟು ಸೀಟುಗಳನ್ನು ಹಂಚುವ ತೀರ್ಮಾನದಿಂದ ಬಡವರಿಗೆ ಗುಣಮಟ್ಟದ ಶಿಕ್ಷಣ ನೀಡಿದಂತಾಗುತ್ತದೆ. ಈ ವಸತಿ ಶಾಲೆಗಳ ನಿರ್ವಹಣೆಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಲಾಗುವುದು ಎಂದಿದ್ದಾರೆ. ವಿಶ್ವವಿದ್ಯಾಲಯಗಳ ಶಿಕ್ಷಣ ತಜ್ಞರೊಬ್ಬರನ್ನೂ ಸಹ ಇಂತಹ ಸಮಿತಿಗೆ ನೇಮಿಸಿಕೊಂಡರೆ ಶಿಕ್ಷಣದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತರಬಹುದಾಗಿದೆ.
ಅತಿ ಹೆಚ್ಚು ಅಂಕ ಗಳಿಸಿದ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಜಿಲ್ಲಾವಾರು ಒಂದು ಲಕ್ಷ ರೂ.ಬಹುಮಾನ ನೀಡುವ ಯೋಜನೆ ಶ್ಲಾಘನೀಯ. ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ ಚಾಲನಾ ತರಬೇತಿ, ಪ್ಯಾರಾಮೆಡಿಕಲ್ ಕೋರ್ಸುಗಳ ಅಭ್ಯರ್ಥಿಗಳಿಗೆ ಕೌಶಲ್ಯಾಭಿವೃದ್ಧಿ, ಸರಕು ಸಾಗಣೆ ವಾಹನಗಳ ಖರೀದಿಯಂತಹ ಯೋಜನೆಗಳಿವೆ. ಆದರೆ, ಉನ್ನತ ಶಿಕ್ಷಣ ಪಡೆ ಯುತ್ತಿರುವ ಹಾಗೂ ಪಡೆದಿರುವ ನಿರುದ್ಯೋಗಿ ಪರಿಶಿಷ್ಟರನ್ನು ಗಮನದಲ್ಲಿಟ್ಟುಕೊಂಡು ಉತ್ತಮ ಯೋಜನೆಗಳನ್ನು ರೂಪಿಸಿಲ್ಲ.
ಅಂತಹ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿಶೇಷ ಶಿಷ್ಯವೇತನ ನೀಡುವ ಕಾರ್ಯಕ್ರಮ ಇರಬೇಕಿತ್ತು. ಡಾ.ಬಾಬಾಸಾಹೇಬ್ ಅಂಬೇ ಡ್ಕರ್ ಹೆಸರಿನ ವಿಶ್ವವಿದ್ಯಾಲಯ ಸ್ಥಾಪನೆಯನ್ನು ಘೋಷಿಸಬೇಕಿತ್ತು. ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಗಿರಿಜನ ಉಪಯೋಜ ನೆಯ ಅನುದಾನದಲ್ಲಿ ನೂರಿನ್ನೂರು ಕೋಟಿಗಳನ್ನು ತೆಗೆದಿರಿಸಿದರೆ ಸಾಕಾಗುತ್ತಿತ್ತು. ಮುಂದಿನ ದಿನಗಳಲ್ಲಾದರೂ ಈ ಕುರಿತು ಧನಾತ್ಮಕ ಚಿಂತನೆಗಳು ನಡೆಯಲಿ.
* ಪ್ರೊ.ಎಂ.ನಾರಾಯಣಸ್ವಾಮಿ, ಶಿಕ್ಷಣ ತಜ್ಞರು ಮತ್ತು ಚಿಂತಕರು