Advertisement

ಅವಿಭಜಿತ ದ.ಕ. ಜಿಲ್ಲೆಯಲ್ಲಿಯೂ ಮಳೆ ಪ್ರಮಾಣ ಕುಂಠಿತ

03:12 PM Aug 01, 2017 | Team Udayavani |

ಉಡುಪಿ: ರಾಜ್ಯದ ಇತರ ಜಿಲ್ಲೆಗಳಲ್ಲಿ ಮಾತ್ರವಲ್ಲದೆ ಉತ್ತಮ ಮಳೆಯಾಗುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿಯೂ ಮುಂಗಾರು ಮಳೆ ಪ್ರಮಾಣ ಕುಂಠಿತಗೊಂಡಿದೆ. 

Advertisement

ಉಡುಪಿಯಲ್ಲಿ ವಾಡಿಕೆಯಷ್ಟಾದರೂ ಮಳೆಯಾದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾಡಿಕೆಗಿಂತ ಕಡಿಮೆ ಪ್ರಮಾಣದ ಮಳೆಯಾಗಿದೆ. ಒಟ್ಟಾರೆ ಕರಾವಳಿಯಲ್ಲಿ ವಾಡಿಕೆಗಿಂತ ಶೇ. 15ರಷ್ಟು ಕಡಿಮೆ ಮಳೆಯಾಗಿದೆ. ಮುಂಗಾರಿನಲ್ಲಿ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ದಲ್ಲಿ ಒಟ್ಟು 1,935.60 ಮೀ.ಮೀ. ವಾಡಿಕೆ ಮಳೆಯಾಗಬೇಕು. ಆದರೆ ಈ ಬಾರಿ ಒಟ್ಟು 1,639.43 ಮೀ.ಮೀ. ಮಳೆಯಾಗಿದೆ. ಅದರಲ್ಲಿ ಉಡುಪಿಯಲ್ಲಿ 2,545.10 ಮೀ.ಮೀ. ವಾಡಿಕೆ ಮಳೆಯಲ್ಲಿ 2,134.93 ಮೀ.ಮೀ. ಮಳೆಯಾಗಿದೆ. ದ.ಕ.ದಲ್ಲಿ 2,183.50 ಮೀ. ಮೀ. ವಾಡಿಕೆ ಮಳೆಯಲ್ಲಿ 1,600.16 ಮೀ.ಮೀ. ಮಳೆಯಾದರೆ, ಉತ್ತರ  ಕನ್ನಡದಲ್ಲಿ 1609.20 ಮೀ. ಮೀ. ವಾಡಿಕೆ ಮಳೆಯಲ್ಲಿ 1,486. 19 ಮೀ. ಮೀ. ಮಳೆಯಾಗಿದೆ.

ತಾಲೂಕುವಾರು ಮಳೆ ಪ್ರಮಾಣ 
ಜುಲೈಯಲ್ಲಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಅಧಿಕ ಅಂದರೆ 1,010.7 ಮೀ.ಮೀ. (1,349.7 ಮೀ.ಮೀ. ವಾಡಿಕೆ ಮಳೆ) ಮಳೆಯಾಗಿದೆ. ಕಾರ್ಕಳದಲ್ಲಿ 1,005.4 ಮೀ.ಮೀ. (1,588.3  ಮೀ.ಮೀ.), ಉಡುಪಿ ತಾಲೂಕಿನಲ್ಲಿ 882.6 ಮೀ. ಮೀ. (1,251.8 ಮೀ.ಮೀ.) ಮಳೆಯಾಗಿದೆ. ಇನ್ನು ದಕ್ಷಿಣ ಕನ್ನಡ ಜಿಲ್ಲೆಯ ಪೈಕಿ ಮಂಗಳೂರಿನಲ್ಲಿ 788.2 ಮೀ.ಮೀ. (1,135 ಮೀ.ಮೀ.), ಬೆಳ್ತಂಗಡಿಯಲ್ಲಿ 769 ಮೀ.ಮೀ. (1,391 ಮೀ. ಮೀ.), ಸುಳ್ಯದಲ್ಲಿ 768.9 ಮೀ. ಮೀ. (1,119.8), ಪುತ್ತೂರಿನಲ್ಲಿ 751.2 ಮೀ.ಮೀ. (1,198.8 ಮೀ. ಮೀ.), ಬಂಟ್ವಾಳದಲ್ಲಿ ಅತಿ ಕಡಿಮೆ ಅಂದರೆ 679.3 ಮೀ.ಮೀ. (1,238.6 ಮೀ. ಮೀ.) ಮಳೆಯಾಗಿದೆ. ಜೂನ್‌ನಲ್ಲಿ ಉಡುಪಿ ಜಿಲ್ಲೆಯಲ್ಲಿ 1,127.3 ಮೀ.ಮೀ. ವಾಡಿಕೆಗಿಂತ 1,159.3 ಮೀ.ಮೀ. ಮಳೆಯಾಗುವ ಮೂಲಕ ಶೇ. 3ರಷ್ಟು ಹೆಚ್ಚಿನ ಮಳೆಯಾಗಿದ್ದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 935.5 ಮೀ.ಮೀ. ವಾಡಿಕೆ ಮಳೆಯಲ್ಲಿ 845. 2 ಮೀ.ಮೀ. ಅಂದರೆ ಶೇ. 10ರಷ್ಟು ಕಡಿಮೆ ಪ್ರಮಾಣದ ಮಳೆಯಾಗಿತ್ತು.

ಕೃಷಿಗೆ ಹೊಡೆತ: ಮುಂಗಾರಿನಲ್ಲಿ ಬಿಟ್ಟು ಬಿಟ್ಟು ಮಳೆಯಾಗುತ್ತಿರುವುದರಿಂದ ಕೃಷಿಗೂ ದೊಡ್ಡ ಪ್ರಮಾಣದ ಹೊಡೆತ ಬೀಳುವ ಸಂಭವ ವಿದೆ. ಮಳೆ ಒಮ್ಮೆ ಬಂದು ಹೋಗುವುದರಿಂದ ಈಗಷ್ಟೇ ಮುಗಿದ ಭತ್ತ ಕೃಷಿಯಲ್ಲಿ ಹುಳಬಾಧೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಅಡಿಕೆ, ತೆಂಗಿನ ಮರದಲ್ಲೂ ರೋಗಬಾಧೆ ಕಾಣಿಸುವ ಸಂಭವವಿರುತ್ತದೆ. ಈಗ ಮುಂಗಾರು ಮಳೆ ಪ್ರಮಾಣ ಕಡಿಮೆಯಾದರೆ ಮುಂದಿನ ಜನವರಿ-ಫೆಬ್ರವರಿಯಲ್ಲಿಯೇ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.

Advertisement

ಆಗಸ್ಟ್‌ನಲ್ಲಿ ಉತ್ತಮ ಮಳೆ ಸಂಭವ
ಕಳೆದ ವರ್ಷ ಜೂನ್‌ ಹಾಗೂ ಜುಲೈ ತಿಂಗಳಲ್ಲಿ ಉತ್ತಮ ಮಳೆಯಾಗಿದ್ದರೂ ಆ ಬಳಿಕ ವರುಣನ ಅಬ್ಬರ ಕಡಿಮೆಯಾಗಿತ್ತು. ಇದರಿಂದ ರಾಜ್ಯದ ಹೆಚ್ಚಿನ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ತಲೆದೋರಿತ್ತು. ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಮುಂದಿನ 3 ದಿನಗಳಲ್ಲಿ ಕಡಿಮೆ ಪ್ರಮಾಣದ ಮಳೆಯಾಗಲಿದೆ. ಆದರೆ ಈ ಬಾರಿಯ ಆಗಸ್ಟ್‌ನಲ್ಲಿ ಉತ್ತಮ ಮಳೆಯಾಗುವ ಸಂಭವವಿದೆ ಎಂದು ಬೆಂಗಳೂರಿನಲ್ಲಿರುವ ರಾಜ್ಯ ನೈಸರ್ಗಿಕ ವಿಕೋಪ ಕೇಂದ್ರದ ವಿಜ್ಞಾನಿ ಎಸ್‌.ಎಸ್‌.ಎಂ. ಗಾವಸ್ಕರ್‌ ತಿಳಿಸಿದ್ದಾರೆ.

ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next