ಮಂಗಳೂರು: ರಿಯಲ್ ಎಸ್ಟೇಟ್ ವ್ಯವಹಾರ ಪಾತಾಳಕ್ಕೆ ಕುಸಿದಿರುವ ಹಿನ್ನೆಲೆಯಲ್ಲಿ ಈಗ ಭೂಗತ ಪಾತಕಿಗಳ ಚಿತ್ತ ಸಣ್ಣ ವ್ಯಾಪಾರಿಗಳತ್ತ ತಿರುಗಿದೆ. ಹೀಗಾಗಿ, ಈಗ ಸಣ್ಣಪುಟ್ಟ ವ್ಯಾಪಾರಸ್ಥರು ಕೂಡ ಭೂಗತ ಪಾತಕಿಗಳ ಹಫ್ತಾ ವಸೂಲಿಗೆ ಟಾರ್ಗೆಟ್
ಆಗುತ್ತಿದ್ದಾರೆ!
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಇತ್ತೀಚೆಗೆ 30ಕ್ಕೂ ಅಧಿಕ ಸಣ್ಣ ವ್ಯಾಪಾರಿಗಳಿಗೆ ಭೂಗತ ಪಾತಕಿ ಕಲಿ ಯೋಗೀಶ ಮತ್ತು ಆತನ ಸಹಚರರಿಂದ ಬೆದರಿಕೆ ಕರೆ ಬಂದಿದ್ದು, ಯಾರೂ ಈ ಬಗ್ಗೆ ಪೊಲೀಸರಿಗೆ ದೂರು ನೀಡುವ ಧೈರ್ಯ ಪ್ರದರ್ಶಿಸಿಲ್ಲ. ಅದರ ಪರಿಣಾಮ ಎಂಬಂತೆ ಡಿ.8ರಂದು ಮಂಗಳೂರಿನ ಕಾರ್ ಸ್ಟ್ರೀಟ್‌ನ ಪ್ರಸಿದ್ಧ ಎಂ. ಸಂಜೀವ ಶೆಟ್ಟಿ ಸಿಲ್ಕ್ಸ್ ಆ್ಯಂಡ್ ಸ್ಯಾರಿಸ್ ಬಟ್ಟೆ ಮಳಿಗೆಯಲ್ಲಿ ರಾತ್ರಿ 8ರ ವೇಳೆ ಏಕಾಏಕಿ ಗುಂಡಿನ ದಾಳಿ ನಡೆದಿದ್ದು, ಅಂಗಡಿಯ ಕೆಲಸಗಾರ ಮಹಾಲಿಂಗ ನಾಯ್ಕ ಗಾಯ ಗೊಂಡಿದ್ದರು. ಈ ಘಟನೆ ನಡೆದ ಮರುದಿನ ಭೂಗತ ಪಾತಕಿ ಕಲಿ ಯೋಗೀಶ ಕೆಲವು ಮಾಧ್ಯ ಮಗಳಿಗೆ ಫೋನ್ ಕರೆ ಮಾಡಿ ಈ ಶೂಟೌಟ್ ನಡೆಸಿರುವುದಾಗಿ ಹೇಳಿಕೊಂಡಿದ್ದಾನೆ.
ಪೊಲೀಸರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೂ ಕೆಲವು ಬಿಲ್ಡರ್‌ಗಳು ಭೂಗತ ಪಾತಕಿಗಳ ತಂಟೆ ಬೇಡ ಎಂದುಕೊಂಡು ಪಾತಕಿಗಳಿಗೆ ಮಾಮೂಲು ಸಂದಾಯ ಮಾಡುತ್ತಲೇ ಬಂದಿದ್ದರು. ಆದರೆ 2016ರ ನವೆಂಬರ್‌ನಲ್ಲಿ ಕೇಂದ್ರ ಸರಕಾರದ ನೋಟು ರದ್ದತಿ ಕ್ರಮದ ಬಳಿಕ ರಿಯಲ್ ಎಸ್ಟೇಟ್ ಉದ್ಯಮ ಸಂಪೂರ್ಣವಾಗಿ ನೆಲ ಕಚ್ಚಿದ್ದು, ಆ ಬಳಿಕ ಪಾತಕಿಗಳಿಗೆ ಬಿಲ್ಡರ್‌ಗಳಿಂದ ಸಂದಾಯವಾಗುವ ಹಫ್ತಾ ಹಣಕ್ಕೆ ಸಂಪೂರ್ಣ ಬ್ರೇಕ್ ಬಿದ್ದಿದೆ. ಸುಮಾರು ಒಂದು ವರ್ಷದಿಂದ ಹಫ್ತಾ ಸಂದಾಯವಾಗದ ಕಾರಣ ಭೂಗತ ಪಾತಕಿಗಳು ಕಾಂಚಾಣವಿಲ್ಲದೆ ಕಂಗಾಲಾಗಿದ್ದಾರೆ. ಹಾಗಾಗಿ ಈಗ ಅವರೆಲ್ಲ ಅನಿವಾರ್ಯವಾಗಿ ಸಣ್ಣ ವ್ಯಾಪಾರಿಗಳನ್ನು ಟಾರ್ಗೆಟ್ ಮಾಡಿ ಸಿಕ್ಕಿದ್ದನ್ನು ದಕ್ಕಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ಭೂಗತ ಪಾತಕಿ ಕಲಿ ಯೋಗೀಶನಿಂದ ಮೂಲ್ಕಿ, ಕಿನ್ನಿಗೋಳಿ, ಪಡುಬಿದ್ರೆ ಪರಿಸರದ ಸಣ್ಣ ವ್ಯಾಪಾರಿಗಳಿಗೆ ಹಫ್ತಾ ಹಣಕ್ಕೆ ಬೇಡಿಕೆ ಇರಿಸಿ ಬೆದರಿಕೆ ಕರೆಗಳು ಬಂದಿವೆ ಎಂದು ಮೂಲಗಳು ತಿಳಿಸಿವೆ. ಭೂಗತ ಪಾತಕಿಗಳೊಂದಿಗೆ ಯಾವುದೇ ಸಂಪರ್ಕ ಇಲ್ಲದಿರುವ ವ್ಯಕ್ತಿಗಳು ಈಗ ಈತನ ಬಲೆಗೆ ಸಿಲುಕಿದ್ದಾರೆ. ವಿದೇಶದಿಂದ ಕರೆಗಳು ಬಂದಿದ್ದು, ಅವುಗಳನ್ನು ಪರಿಶೀಲಿಸಿದಾಗ ಕೆಲವು ಕರೆಗಳು ಆಸ್ಟ್ರೇಲಿಯಾದಿಂದ ಬಂದಿರಬೇಕೆಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ನೋಟು ಅಮಾನ್ಯಿಕರಣ ಮತ್ತು ಜಿಎಸ್‌ಟಿಯಿಂದಾಗಿ ಸಣ್ಣ ವ್ಯಾಪಾರಿಗಳು ಈಗಾಗಲೇ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈಗ ಭೂಗತ ಪಾತಕಿಗಳ ಬೆದರಿಕೆಗಳಿಂದಾಗಿ ಹೈರಾಣಾಗಿದ್ದಾರೆ. ಈ ಸಂಕಟದಿಂದ ಪಾರಾಗುವ ಮಾರ್ಗ ಹೇಗೆ ಎಂಬ ಆತಂಕದಲ್ಲಿದ್ದಾರೆ. ಇತ್ತ ಭೂಗತ ಪಾತಕಿಗಳ ಬೆದರಿಕೆಯಿಂದ ಕಂಗೆಟ್ಟ, ಅತ್ತ ಪೊಲೀಸರಿಗೆ ದೂರು ಕೊಡಲಾಗದ ಸ್ಥಿತಿ ಅವರದ್ದಾಗಿದೆ.
ಹಿಲರಿ ಕ್ರಾಸ್ತಾ