ಹರಪನಹಳ್ಳಿ: ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎನ್ನಿಸಿಕೊಂಡಿರುವ ಭಾರತದ ಸಂವಿಧಾನದ ಮಹತ್ವವನ್ನು ಪ್ರತಿಯೊಬ್ಬರು ತಿಳಿದು, ಕಾನೂನು ಗೌರವಿಸಿ, ಪರಿಪಾಲಿಸುವಂತೆ ಇಲ್ಲಿಯ ನ್ಯಾಯಾಲಯದ ಹಿರಿಯ ಶ್ರೇಣಿ ನ್ಯಾಯಾಧೀಶರಾದ ಉಂಡಿ ಮಂಜುಳಾ ಶಿವಪ್ಪ ಕರೆ ನೀಡಿದರು.
ಪಟ್ಟಣದ ಎಸ್.ಯು.ಜೆ.ಎಂ. ಕಾಲೇಜು ಆವರಣದಲ್ಲಿ ಮಂಗಳವಾರ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಶಿಕ್ಷಣ ಇಲಾಖೆ, ತಾಲೂಕು ಆಡಳಿತ, ಪುರಸಭೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರಕ್ಷಕ ಠಾಣೆ, ಸಮಾಜ ಕಲ್ಯಾಣ ಹಾಗೂ ತಾಪಂ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಕಾನೂನು ಸಾಕ್ಷರತಾ ರಥ ಸಂಚಾರ ಮತ್ತು ಜನತಾ ನ್ಯಾಯಾಲಯ ಕುರಿತು ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಂವಿಧಾನ ದತ್ತ ಹಕ್ಕುಗಳನ್ನು ಪ್ರತಿಯೊಬ್ಬರೂ ಚಲಾಯಿಸಬೇಕು. ಹಾಗೆಯೇ ಕರ್ತವ್ಯಗಳನ್ನು ಚಾಚೂ ತಪ್ಪದೇ ಪಾಲಿಸಬೇಕು. ಕಾನೂನು ತಿಳಿದರೆ ಅಪರಾಧ ಮನೋಭಾವ ಬರುವುದಿಲ್ಲ ಎಂದರು. ಕಾಲೇಜು ವ್ಯಾಸಂಗದ ಸಮಯದಲ್ಲಿ ವಿದ್ಯಾರ್ಥಿಗಳು ಮೂಲಭೂತ ಹಕ್ಕು ಅರಿತುಕೊಳ್ಳುತ್ತಾರೆ. ಆದರೆ ಕರ್ತವ್ಯಗಳನ್ನು ಮರೆತು ಬಿಡುತ್ತಾರೆ. ಕಾನೂನಿನ ಬಲದಿಂದ ಅನ್ಯಾಯ ತಡೆಯುವ ಶಕ್ತಿ ಪ್ರತಿಯೊಬ್ಬರಲ್ಲೂ ಬೆಳೆಯಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಡಿವೈಎಸ್‌ಪಿ ನಾಗೇಶ್ ಐತಾಳ, ಜಮೀನು ವ್ಯಾಜ್ಯಗಳನ್ನು ಕಾನೂನು ಮೂಲಕವೇ ಬಗೆಹರಿಸಿಕೊಳ್ಳಬೇಕು. ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲು ಏರಿದರೆ ಮಕ್ಕಳು ಆದಿಯಾಗಿ ಎಲ್ಲರ ಮೇಲೂ ಕ್ರಿಮಿನಲ್ ದೂರು ದಾಖಲಾಗುತ್ತದೆ. ಮುಂದೆ ವಿದ್ಯಾರ್ಥಿಗಳಿಗೆ ನೌಕರಿ ಸಮಸ್ಯೆ ಉಂಟಾಗುತ್ತದೆ. ಹೀಗಾಗಿ ಕಾನೂನು ಬಗ್ಗೆ ಪಾಲಕರಲ್ಲಿ ನೀವು ತಿಳಿವಳಿಕೆ ಮೂಡಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಮೂಲಭೂತ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ವಕೀಲರಾದ ಎಂ. ಮೃತ್ಯುಂಜಯ, ಮೋಟಾರ್ ವಾಹನ ಕಾಯ್ದೆ ಕುರಿತು ಗೋಣಿಬಸಪ್ಪ ಉಪನ್ಯಾಸ ನೀಡಿದರು.
ತಹಶೀಲ್ದಾರ ಕೆ. ಗುರುಬಸವರಾಜ, ಉಪನ್ಯಾಸಕ ಎಚ್. ಮಲ್ಲಿಕಾರ್ಜುನ, ಕಿರಿಯ ನ್ಯಾಯಾಧೀಶರಾದ ಬಿ.ಜಿ. ಶೋಭಾ, ವಕೀಲರ ಸಂಘದ ಅಧ್ಯಕ್ಷ ಎ.ಕೆ. ಅಜ್ಜಪ್ಪ, ಕಾರ್ಯದರ್ಶಿ ಇದ್ಲಿ ರಾಮಪ್ಪ ಮಾತನಾಡಿದರು. ಇಒ ಆರ್.ತಿಪ್ಪೇಸ್ವಾಮಿ, ಬಿಇಒ ಎಲ್.ರವಿ, ಮುಖ್ಯಾಧಿಕಾರಿ ಐ.ಬಸವರಾಜ, ಸಹಾಯಕ ಸರ್ಕಾರಿ ಅಭಿಯೋಜಕಿ ಟಿ.ಎಸ್. ಗೋಪಿಕಾ, ಅಪರ ಸರ್ಕಾರಿ ವಕೀಲ ಕಣಿವಿಹಳ್ಳಿ ಮಂಜುನಾಥ, ಪ್ರಾ| ಎಲ್. ಕೃಷ್ಣಸಿಂಗ್, ಹಿರಿಯ ವಕೀಲರಾದ ಗಂಗಾಧರ ಗುರುಮಠ, ಜೆ. ಸೀಮಾ, ಎಸ್.ಮಂಜುನಾಥ, ಎಂ. ಮಲ್ಲಪ್ಪ, ಕೆ. ಕೊಟ್ರೇಶ, ಎಂ. ನಳಿನಾ, ಡಿ.ವಿ. ಜ್ಯೋತಿ ಇತರರಿದ್ದರು.