Advertisement

ಮೆಲ್ಕಾರ್‌ನಲ್ಲಿ ಅಂಡರ್‌ಪಾಸ್‌ ಕಾಮಗಾರಿ; ಬಿ.ಸಿ.ರೋಡ್‌-ಅಡ್ಡಹೊಳೆ ಹೆದ್ದಾರಿ ಅಭಿವೃದ್ಧಿ

05:48 PM Feb 08, 2022 | Team Udayavani |

ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ 75ರ ಬಿ.ಸಿ.ರೋಡ್‌-ಅಡ್ಡಹೊಳೆ ಚತುಷ್ಪಥ ಕಾಮಗಾರಿಯು ಭರದಿಂದ ಸಾಗುತ್ತಿದ್ದು, ಇದೀಗ ಮೆಲ್ಕಾರಿನಲ್ಲಿ ಕಾಮಗಾರಿ ಆರಂಭಗೊಂಡಿದೆ. ಮೆಲ್ಕಾರಿನಲ್ಲಿ ಪ್ರಸ್ತುತ ಸಾಗಿರುವ ಹೆದ್ದಾರಿಯು ಕೊಂಚ ಮೇಲ್ಭಾಗದಲ್ಲಿ ಸಾಗಲಿದ್ದು, ಸರ್ವಿಸ್‌ ರಸ್ತೆಯ ಜತೆಗೆ ಮುಡಿಪು ಕ್ರಾಸ್‌ಗೆ ಅಂಡರ್‌ಪಾಸ್‌ ನಿರ್ಮಾಣಗೊಳ್ಳಲಿದೆ.

Advertisement

ಮೆಲ್ಕಾರ್‌ ಪೇಟೆಯು ದಿನೇ ದಿನೇ ವಿಸ್ತಾರಗೊಳ್ಳುತ್ತಿದ್ದು, ಹೀಗಾಗಿ ಇಲ್ಲಿ ವಾಹನದೊತ್ತಡವೂ ಅಧಿಕವಿದೆ. ಪೇಟೆಯ ಮಧ್ಯೆಯೇ ಮುಡಿಪು-ಕೋಣಾಜೆ ಕ್ರಾಸ್‌ ರಸ್ತೆಯಿರುವ ಕಾರಣದಿಂದ ಪದೇ ಪದೆ ಟ್ರಾಫಿಕ್‌ ಕಿರಿಕಿರಿಯೂ ಉಂಟಾ ಗುತ್ತಿರುತ್ತದೆ. ಜತೆಗೆ ವಾಹನದವರು ಕ್ರಾಸ್‌ ರಸ್ತೆಗೆ ಹೋಗಿ ಸಾಗಬೇಕು ಎಂಬ ಸ್ಪಷ್ಟ ಸೂಚನೆಯೂ ಇಲ್ಲದೇ ಆಗಾಗ ಅಪಘಾತಗಳು ಉಂಟಾಗುತ್ತಿರುತ್ತವೆ.

ಮುಂದಿನ ದಿನಗಳಲ್ಲಿ ಹೆದ್ದಾರಿಯು ಚತುಷ್ಪಥಗೊಂಡು ಇನ್ನೂ ವಿಸ್ತಾರ ವಾಗುವುದರಿಂದ ಮುಡಿಪು ಕ್ರಾಸ್‌ ರಸ್ತೆಯಲ್ಲಿ ಇನ್ನೂ ಗೊಂದಲ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಜತೆಗೆ ಹೆದ್ದಾರಿ ಅಭಿವೃದ್ಧಿಯಿಂದ ವಾಹನಗಳು ಕೂಡ ವೇಗವಾಗಿ ಸಾಗುವುದರಿಂದ ಅಪಾಯದ ಸಾಧ್ಯತೆ ಹೆಚ್ಚಿರುವುದನ್ನು ಅರಿತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೂ ಇಲ್ಲಿ ಅಂಡರ್‌ಪಾಸ್‌ ನಿರ್ಮಾಣಕ್ಕೆ ಉದ್ದೇಶಿಸಿದೆ.
ಹೀಗಿರುತ್ತದೆ ಅಂಡರ್‌ಪಾಸ್‌

ಕೆಲವು ಸಮಯಗಳ ಹಿಂದೆ ಕಾಮಗಾರಿ ಪರಿಶೀಲನೆಗಾಗಿ ಆಗಮಿಸಿದ್ದ ದ.ಕ.ಸಂಸದ ನಳಿನ್‌ ಕುಮಾರ್‌ ಕಟೀಲು ಮೆಲ್ಕಾರ್‌ ಜಂಕ್ಷನ್‌ನಲ್ಲಿ ಅಂಡರ್‌ಪಾಸ್‌ ಕಾಮಗಾರಿಯ ಕುರಿತು ಎನ್‌ಎಚ್‌ಎಐನ ಅಧಿಕಾರಿಗಳು ಹಾಗೂ ಕಾಮಗಾರಿ ನಿರ್ವ ಹಿಸುವ ಕೆಎನ್‌ಆರ್‌ ಕನ್‌ಸ್ಟ್ರಕ್ಷನ್ಸ್‌ ನ ಅಧಿ ಕಾರಿಗಳ ಜತೆ ಚರ್ಚೆ ನಡೆಸಿದ್ದಾರೆ.

Advertisement

ಮೆಲ್ಕಾರಿನಲ್ಲಿ ರಾಷ್ಟ್ರೀಯ ಹೆದ್ದಾರಿಯು ಮೇಲ್ಗಡೆಯಿಂದ ನೇರವಾಗಿ ಸಾಗಲಿದ್ದು, ಅದರ ತಳಭಾಗದಲ್ಲಿ ಎರಡೂ ಬದಿಗಳಲ್ಲೂ ಸರ್ವಿಸ್‌ ರಸ್ತೆ ಇರುತ್ತದೆ. ಅಂದರೆ ನೇರವಾಗಿ ಸಾಗುವವರು ಹೆದ್ದಾರಿಯಲ್ಲೇ ಸಾಗಬೇಕಿದೆ.

ಬಿ.ಸಿ.ರೋಡ್‌ ಭಾಗದಿಂದ ಮುಡಿಪು ರಸ್ತೆಗೆ ತೆರಳುವವರು ಸರ್ವಿಸ್‌ ರಸ್ತೆಯಲ್ಲಿ ಎಡಕ್ಕೆ ಚಲಿಸಿ ಬಳಿಕ ಅಂಡರ್‌ಪಾಸ್‌ ಮೂಲಕ ಮುಡಿಪು ರಸ್ತೆಯತ್ತ ಸಾಗಬೇಕಿದೆ. ಜತೆಗೆ ಮುಡಿಪು ರಸ್ತೆಯಲ್ಲಿ ಆಗಮಿಸಿದವರು ಕಲ್ಲಡ್ಕ ಭಾಗಕ್ಕೆ ತೆರಳಬೇಕಿದ್ದರೆ ಅಂಡರ್‌ಪಾಸ್‌ ಮೂಲಕ ಬಂದು ಸರ್ವಿಸ್‌ ರಸ್ತೆಯಲ್ಲಿ ಸಾಗಿ ಬಳಿಕ ಹೆದ್ದಾರಿಯನ್ನು ಸೇರುವ ವ್ಯವಸ್ಥೆ ಇರುತ್ತದೆ. ಉಳಿದಂತೆ ನೇರವಾಗಿ ಸರ್ವಿಸ್‌ ರಸ್ತೆಯಲ್ಲಿ ಸಾಗುವುದಕ್ಕೆ ಅವಕಾಶವಿದ್ದು, ಮೆಲ್ಕಾರ್‌ ಪೇಟೆಯಲ್ಲಿ ಕೆಲಸ ಇರುವವರು ಮಾತ್ರ ಸರ್ವಿಸ್‌ ರಸ್ತೆಯಲ್ಲಿ ಸಾಗಬೇಕಿದೆ.

ಮೆಲ್ಕಾರ್‌ ಪೇಟೆಗೆ ಪೆಟ್ಟು?
ಕಲ್ಲಡ್ಕದಲ್ಲಿ ಫ್ಲೈಓವರ್‌ ನಿರ್ಮಾಣದಿಂದ ಪೇಟೆಗೆ ಸಾಕಷ್ಟು ಪೆಟ್ಟು ಬಿದ್ದಿದೆ ಎಂಬ ಮಾತುಗಳು ಕೇಳಿ ಬರುತ್ತಿರುವ ಮಧ್ಯೆಯೇ ಇದೀಗ ಮೆಲ್ಕಾರ್‌ ಪೇಟೆಯಲ್ಲೂ ಅಂಡರ್‌ಪಾಸ್‌ನಿಂದ ಅದೇ ಮಾತುಗಳು ಕೇಳಿ ಬರುತ್ತಿವೆ. ಈ ರೀತಿ ಅಂಡರ್‌ಪಾಸ್‌ನಿಂದ ಸಂಚಾರ ತೊಂದರೆಗಳಿಗೆ ಮುಕ್ತಿ ದೊರಕಿದರೂ, ಪೇಟೆಯ ವರ್ತಕರಿಗೆ ಸಾಕಷ್ಟು ತೊಂದರೆಯಾಗುತ್ತದೆ ಎಂಬ ಮಾತುಗಳು ಕೂಡ ಕೇಳಿಬರುತ್ತಿದೆ. ಪ್ರಸ್ತುತ ಹೆದ್ದಾರಿ ಕಾಮಗಾರಿಗಾಗಿ ಜಾಗ ಬಿಟ್ಟು ಕೊಡುವಂತೆ ಪ್ರಾಧಿ ಕಾರ ನೋಟಿಸ್‌ ನೀಡಿ ದ್ದು, ಈ ರೀತಿ ಏಕಾಏಕಿ ನೋಟಿಸ್‌ ನೀಡಿದರೆ ನಾವೆತ್ತ ಹೋಗ ಬೇಕು ಎಂದು ವರ್ತಕರು ಪ್ರಶ್ನಿಸುತ್ತಿದ್ದಾರೆ. ನೋಟಿಸ್‌ ನೀಡಿ ನಮಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವುದಕ್ಕೆ ಸಮಯಾವಕಾಶ ನೀಡ ಬೇಕು ಎಂಬ ಅಭಿಪ್ರಾಯವೂ ಇದೆ.

ಮುಡಿಪು ಕ್ರಾಸ್‌ಗೆ ಅಂಡರ್‌ಪಾಸ್‌
ಮೆಲ್ಕಾರಿನಲ್ಲಿ ಹೆದ್ದಾರಿಯು ನೇರವಾಗಿ ಮೇಲ್ಗಡೆ ಸಾಗಲಿದ್ದು, ಎರಡೂ ಬದಿಗಳಲ್ಲಿ ಸರ್ವಿಸ್‌ ರಸ್ತೆ ಇರುತ್ತದೆ. ಹೆದ್ದಾರಿಯ ತಳ ಭಾಗದಲ್ಲಿ ಮುಡಿಪು ಕ್ರಾಸ್‌ಗೆ ಅಂಡರ್‌ಪಾಸ್‌ ಇರುತ್ತದೆ. ಈಗಾಗಲೇ ಕಾಮಗಾರಿ ಆರಂಭಗೊಂಡಿದ್ದು, ಕೆಲವು ಕಡೆಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆಯೂ ನಡೆಯಬೇಕಿದೆ.
-ಮಹೇಂದ್ರ ಸಿಂಗ್‌,
ಪ್ರೊಜೆಕ್ಟ್ ಮ್ಯಾನೇಜರ್‌,
ಕೆಎನ್‌ಆರ್‌ ಕನ್‌ಸ್ಟ್ರಕ್ಷನ್ಸ್‌

 

Advertisement

Udayavani is now on Telegram. Click here to join our channel and stay updated with the latest news.

Next