Advertisement

ಅಂಡರ್‌ಪಾಸ್‌ ಒಂದು; ಸಮಸ್ಯೆ ಹಲವು

05:32 AM Jun 14, 2020 | Lakshmi GovindaRaj |

ಬೆಂಗಳೂರು: ಸಾರ್ವಜನಿಕರ ಅನುಕೂಲಕ್ಕೆ ಸಿಗಬೇಕಿದ್ದ ಅಂಡರ್‌ಪಾಸ್‌ ಅರ್ಧಕ್ಕೆ ನಿಂತಿದ್ದು, ನಿರ್ಮಿಸಲಾದ ಗೋಡೆಗಳು ಸೇರಿ ರಸ್ತೆ ಕಾಮಗಾರಿ ನಡೆಯುತ್ತಿದ್ದ ಸರ್ವೀಸ್‌ ರಸ್ತೆ ಬಳಿಯೂ ಮಣ್ಣು ಕುಸಿಯುತ್ತಿದೆ. ಬೆಂಗಳೂರು  ಅಭಿವೃದ್ಧಿ ಪ್ರಾಧಿಕಾರದ ನಿರ್ಲಕ್ಷ್ಯದಿಂದಾಗಿ ಪ್ರಸ್ತುತ ಸ್ಥಳೀಯರು ಮತ್ತು ವಾಹನ ಸಂಚಾರರು ಪರದಾಡಬೇಕಾಗಿದೆ! ಕಂಠೀರವ ಸ್ಟುಡಿಯೋ ಬಳಿ ಬಿಡಿಎ ನಿರ್ಮಿಸುತ್ತಿರುವ ಅಂಡರ್‌ಪಾಸ್‌ ಗೆ ಭೂಸ್ವಾಧೀನ ಕಗ್ಗಂಟಾಗಿದ್ದು,  ಕಾಮಗಾರಿಯನ್ನು 4 ವರ್ಷದ ಹಿಂದೆಯೇ ಅರ್ಧಕ್ಕೆ ಬಿಟ್ಟಿದೆ.

Advertisement

ಈವರೆಗೂ ಕಾಮಗಾರಿ ಮುಂದುವರಿಸುವ ಪ್ರಯತ್ನ ಮಾಡಿಲ್ಲ. ಅರ್ಧಕ್ಕೆ ನಿಂತಿರುವ ಕಾಮಗಾರಿಯಿಂದಾಗಿ ಸ್ಥಳೀಯರು ತೊಂದರೆ ಅನುಭವಿಸುತ್ತಿದ್ದಾರೆ. ಇದೀಗ ಮಳೆಗಾಲ  ಆರಂಭವಾಗಲಿದ್ದು, ಮಳೆನೀರು ಕಂಠೀರವ ಸ್ಟುಡಿಯೋ ರಸ್ತೆಯಿಂದ ಹರಿದು ಕಾಮಗಾರಿ ಸ್ಥಳ ಸೇರಲಿದೆ. ಇದರಿಂದಾಗಿ ಅಕ್ಕಪಕ್ಕದ ಅಂಗಡಿಗಳ ಮುಂದೆ ನೀರು ಮತ್ತು ಮಣ್ಣು ನಿಲ್ಲಲಿದೆ. ಮಳೆ ಬಂದರೆ ಸಾಕು ಸ್ಥಳೀಯ ರಿಗೆ  ಮಣ್ಣು ಎತ್ತಿ ಹಾಕುವ ದುಸ್ಥಿತಿ ಎದುರಾಗಲಿದೆ.

8 ಕೋಟಿ ಖರ್ಚಾದರೂ ಅರ್ಧಕ್ಕೆ ನಿಂತ  ಕಾಮಗಾರಿ: ಬಿಡಿಎ 2013-14 ಸಾಲಿನಲ್ಲಿಯೇ ಈ ಅಂಡರ್‌ ಪಾಸ್‌ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿತ್ತು. ಇದಕ್ಕಾಗಿ ಬರೋಬ್ಬರಿ 8 ಕೋಟಿ ರೂ. ಖರ್ಚು ಮಾಡಿದೆ. ಆದರೆ, ಅಂಡರ್‌ ಪಾಸ್‌ ಮಾತ್ರ ಇನ್ನೂ ಪೂರ್ಣಗೊಂಡಿಲ್ಲ. ಭೂ ಸ್ವಾಧೀನ ಕಗ್ಗಂಟಾಗಿರುವುದರಿಂದಾಗಿ ಈ ಅಂಡರ್‌ ಪಾಸನ್ನು ನಾವು ಮಾಡುವುದಿಲ್ಲ ಎಂದು ಹೇಳುತ್ತಿದೆ.

ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಅಂಡರ್‌ ಪಾಸಿಗಾಗಿ ಭೂಮಿ ನೀಡಿದವರು, ಇವರಿಗೆ ಇಷ್ಟ ಬಂದಾಗ ಅಂಡರ್‌ ಪಾಸ್‌ ಮಾಡುತ್ತೇವೆ ಎನ್ನುತ್ತಾರೆ. ಬೇಕಾದಾಗ ನಿಲ್ಲಿಸುತ್ತೇವೆ ಎನ್ನುತ್ತಾರೆ. ಇವರಿಂದಾಗಿ ಅಂಗಡಿ ಕಳೆದು ಕೊಂಡಿದ್ದೇವೆ. ಜಾಗ ಕಳೆದುಕೊಂಡಿದ್ದೇವೆ. ಅರ್ಧ  ಪರಿಹಾರ ಕೊಟ್ಟಿದ್ದಾರೆ. ಅದನ್ನೂ ವಾಪಸ್‌ ಕೇಳಲು ಚಿಂತನೆ ನಡೆಸುತ್ತಿದ್ದಾರೆ.

ಅಂಡರ್‌ ಪಾಸ್‌ ಅನ್ನು ಪೂರ್ಣ ಮಾಡದೇ ಅರ್ಧಕ್ಕೆ ನಿಲ್ಲಿಸಿದರೆ ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ  ಸಂದರ್ಭದಲ್ಲಿ ನಗರ ವೀಕ್ಷಣೆ ನಡೆಸಿದ್ದರು. ಈ ವೇಳೆ ಕಂಠೀರವ ಸ್ಟುಡಿಯೋ ಬಳಿ ನಡೆಯುತ್ತಿರುವ ಅಂಡರ್‌ ಪಾಸ್‌ ಕಾಮಗಾರಿ ಸ್ಥಳ ಪರಿಶೀಲಿಸಿ ಶೀಘ್ರ ಕಾಮಗಾರಿ ಆರಂಭಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದರು. ಆದರೆ, ಈವರೆಗೂ ಕಾಮಗಾರಿ ಆರಂಭಿಸಿಲ್ಲ.

Advertisement

ಅಂಡರ್‌ ಪಾಸ್‌ ಮೇಲೆ ಕಸದ ಟಿಪ್ಪರ್‌ಗಳು: ಅಂಡರ್‌ ಪಾಸ್‌ ಮೇಲೆ ಖಾಲಿ ಜಾಗವಿದ್ದು, ಕಸದ ಆಟೋ, ಟಿಪ್ಪರ್‌, ಆ್ಯಂಬುಲೆನ್ಸ್‌ , ಲಾರಿಗಳು ನಿಲ್ಲಲಿವೆ. ಇದೇ ಸ್ಥಳದಲ್ಲಿ ಆಟೋಗಳಿಂದ ಟಿಪ್ಪರ್‌ ಗೆ ಕಸ ವಿಲೇವಾರಿಯಾಗಲಿದೆ. ಇದರಿಂದಾಗಿ ಸುತ್ತಲಿನ ಪ್ರದೇಶ ಗಬ್ಬುನಾರುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕಂಠೀರವ ಸ್ಟುಡಿಯೋ ಬಳಿ ಅರ್ಧಕ್ಕೆ ನಿಲ್ಲಿಸಿರುವ ಅಂಡರ್‌ಪಾಸ್‌ ಕಾಮಗಾರಿ ಬಗ್ಗೆ ಗಮನಕ್ಕೆ ಬಂದಿದೆ. ಈ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರ ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು. ನನೆಗುದಿಗೆ ಬಿದ್ದಿರುವ  ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದು, ತಿಂಗಳೊಳಗೆ ಕಾಮಗಾರಿ ಆರಂಭಿಸಲಾಗುವುದು.
-ಡಾ.ಎಚ್‌.ಆರ್‌. ಮಹಾದೇವ್‌, ಬಿಡಿಎ ಆಯುಕ್ತ

ಅಂಡರ್‌ ಪಾಸ್‌ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಮಳೆ ಬಂದರೆ ನೀರು ರಸ್ತೆಯಲ್ಲಿಯೇ ನಿಲ್ಲಲಿವೆ. ಇದು ಇಳಿಜಾರು ಪ್ರದೇಶವಾಗಿದ್ದು, ನೀರು ಸಹಿತ ಮಣ್ಣು ಬರುತ್ತಿದೆ. ಮಳೆ ಬಂದರೆ ಅಂಗಡಿ ಮುಂದೆ ಶೇಖರಣೆಗೊಂಡ ಮಣ್ಣನ್ನುಎತ್ತಿ  ಹಾಕಬೇಕು. ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿ ಅರಂಭಿಸಬೇಕು.
-ಅಜೀಜ್‌, ಸ್ಥಳೀಯ ನಿವಾಸಿ

ಅಂಡರ್‌ ಪಾಸ್‌ ಕಾಮಗಾರಿ ಸರ್ವೀಸ್‌ ರಸ್ತೆ ಬಳಿ ಅರ್ಧಕ್ಕೆ ನಿಂತಿದ್ದು, ಮಳೆ ನೀರು ಹೆಚ್ಚಾಗಿ ಹೋಗುವುದರಿಂದ ಮಣ್ಣು ಕುಸಿಯುತ್ತಿದೆ. ಹೀಗೆ ಮುಂದುವರಿದರೆ ರಸ್ತೆಯೇ ಹಾಳಾಗಲಿದೆ. ಸರ್ವೀಸ್‌ ರಸ್ತೆ ಬಳಿಯೇ ಅಂಗಡಿ ಇರುವುದರಿಂದ  ಜಾಸ್ತಿ ಮಳೆ ಬಂದರೆ ಅಂಗಡಿ ಮುಂಭಾಗ ಮಳೆ ನೀರು ಮತ್ತು ಮಣ್ಣು ಶೇಖರಣೆಗೊಳ್ಳಲಿದೆ. ಈ ಬಗ್ಗೆ ಅಧಿಕಾರಿಗಳು ಗಮನಿಸಬೇಕು.
-ವಾಸೀಮ್‌, ಸ್ಥಳೀಯ ನಿವಾಸಿ

Advertisement

Udayavani is now on Telegram. Click here to join our channel and stay updated with the latest news.

Next