Advertisement

ಡೀಮ್ಡ್ ವಿಶ್ವವಿದ್ಯಾಲಯಗಳು ಸರ್ಕಾರದ ವ್ಯಾಪ್ತಿಗೆ

03:45 AM Mar 25, 2017 | Team Udayavani |

ವಿಧಾನಪರಿಷತ್ತು: ರಾಜ್ಯದಲ್ಲಿರುವ ಎಲ್ಲ ಡೀಮ್ಡ್ (ಸ್ವಾಯತ್ತ) ವಿಶ್ವವಿದ್ಯಾಲಯಗಳನ್ನು ರಾಜ್ಯ ಸರ್ಕಾರದ ನಿಯಂತ್ರಣಕ್ಕೆ ತೆಗೆದುಕೊಳ್ಳಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್‌ ಪಾಟೀಲ್‌ ತಿಳಿಸಿದ್ದಾರೆ.

Advertisement

ಕರ್ನಾಟಕ ವೃತ್ತಿ ಶಿಕ್ಷಣ ಸಂಸ್ಥೆಗಳ (ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ) ತಿದ್ದುಪಡಿ ವಿಧೇಯಕದ ಬಗ್ಗೆ ವಿವರಣೆ ನೀಡಿದ ಸಚಿವರು, ಡೀಮ್ಡ್ ವಿವಿಗಳ ಮೇಲೆ ರಾಜ್ಯ ಸರ್ಕಾರಕ್ಕೆ ಯಾವುದೇ ನಿಯಂತ್ರಣ ಇಲ್ಲ. ಹಾಗಾಗಿ ವೃತ್ತಿ ಶಿಕ್ಷಣ ಕೋರ್ಸ್‌ಗಳ ಶುಲ್ಕ ನಿಗದಿ, ಸೀಟು ಹಂಚಿಕೆ ಸೇರಿದಂತೆ ಆಡಳಿತಾತ್ಮಕ ವಿಷಯಗಳಲ್ಲಿ ಡೀಮ್ಡ್ ವಿವಿಗಳು ಸರ್ಕಾವನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿರಲಿಲ್ಲ. ಇನ್ನು ಮುಂದೆ ಡೀಮ್ಡ್ ವಿವಿಗಳನ್ನು ಸರ್ಕಾರದ ವ್ಯಾಪ್ತಿಗೆ ತರಲಾಗುವುದು. ಈ ವಿಷಯ ತಿದ್ದುಪಡಿ ವಿಧೇಯಕದಲ್ಲಿ ಅಡಕವಾಗಿದೆ ಎಂದು ಹೇಳಿದರು.

ಬಹುತೇಕ ಎಲ್ಲ ಡೀಮ್ಡ್ ವಿವಿಗಳು ವೃತ್ತಿ ಶಿಕ್ಷಣ ಕೋರ್ಸ್‌ಗಳಲ್ಲಿ ಸರ್ಕಾರಕ್ಕೆ ಸೀಟುಗಳನ್ನು ಬಿಟ್ಟುಕೊಡುತ್ತಿರಲಿಲ್ಲ. ಡೀಮ್ಡ್ ಮಾನ್ಯತೆ ನೀಡುವಾಗಿ ಶರತ್ತುಗಳನ್ನು ವಿಧಿಸಿದ್ದ ಕೆಲವೊಂದು ವಿವಿಗಳು ಮಾತ್ರ ಸರ್ಕಾರಿ ಕೋಟಾದ ಸೀಟುಗಳನ್ನು ಬಿಟ್ಟುಕೊಡುತ್ತಿದ್ದರು. ಅಲ್ಲದೇ ಡೀಮ್ಡ್ ವಿವಿಗಳು ತಮ್ಮದೇ ಆದ ವೇಳಾಪಟ್ಟಿ, ಪರೀಕ್ಷೆ ಮತ್ತು ಶುಲ್ಕ ನಿಗದಿಪಡಿಸಿಕೊಂಡಿದ್ದಾರೆ. ಸರ್ಕಾರ ಏನಾದರು ನಿಯಂತ್ರಣ ಹೇರಲು ಮುಂದಾದರೆ, ಯುಜಿಸಿ ಕಾಯ್ದೆ ಮತ್ತು ಸುಪ್ರೀಂಕೋರ್ಟ್‌ನ ಕೆಲವು ತೀರ್ಪುಗಳ ಆಶ್ರಯವನ್ನು ಈ ವಿವಿಗಳು ಪಡೆದುಕೊಳ್ಳುತ್ತವೆ. ಆದರೆ, ಈಗ ರಾಷ್ಟ್ರೀಯ ಪ್ರವೇಶ ಮತ್ತು ಅರ್ಹತಾ ಪರೀಕ್ಷೆ (ನೀಟ್‌) ಜಾರಿಗೆ ಬಂದಿದ್ದು, ಅದರಂತೆ ರಾಜ್ಯ ಸರ್ಕಾರವೇ ಏಕರೂಪ ಕೌನ್ಸಿಲಿಂಗ್‌ ನಡೆಸಿದರೆ, ಡೀಮ್ಡ್ ವಿವಿಗಳಲ್ಲೂ ಸರ್ಕಾರಿ ಕೋಟಾ ನಿಗದಿಪಡಿಸಲು ಅವಕಾಶವಿರುತ್ತದೆ. ಆ ಮೂಲಕ ಡೀಮ್ಡ್ ವಿವಿಗಳನ್ನು ರಾಜ್ಯ ಸರ್ಕಾರದ ವ್ಯಾಪ್ತಿಗೆ ತೆಗೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರವೇ ಏಕರೂಪ ಕೌನ್ಸಿಲಿಂಗ್‌ ನಡೆಸಿದರೂ ಪ್ರವೇಶ ಮೇಲ್ವಿಚಾರಣಾ ಸಮಿತಿ ಹಾಗೂ ಶುಲ್ಕ ನಿಗದಿ ಸಮಿತಿಗಳನ್ನು ಯಥಾವತ್ತಾಗಿ ಮುಂದುವರಿಸಲಾಗುವುದು. ಮೀಸಲಾತಿಗೆ ಸಂಬಂಧಿಸಿದಂತೆ ಉಭಯ ಸದನಗಳ ಆಯ್ದ ಸದಸ್ಯರು ಹಾಗೂ ತಜ್ಞರ ಸಭೆ ಕರೆದು ಚರ್ಚಿಸಿ, ಕಾಯ್ದೆಯ ನಿಯಮಗಳಲ್ಲಿ ಅಳವಡಿಸಿಕೊಳ್ಳಲಾಗುವುದು ಎಂದು ಶರಣಪ್ರಕಾಶ್‌ ಪಾಟೀಲ್‌ ಸ್ಪಷ್ಟಪಡಿಸಿದರು. ಇದಕ್ಕೂ ಮೊದಲು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಮಂಡಿಸಿದ ತಿದ್ದುಪಡಿ ವಿಧೇಯಕದ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್‌ ಪಾಟೀಲ್‌ ವಿವರಣೆ ನೀಡಿದರು. ಚರ್ಚೆ ಬಳಿಕ ಧ್ವನಿಮತದ ಮೂಲಕ ವಿಧೇಯಕಕ್ಕೆ ಅನುಮೋದನೆ ಸಿಕ್ಕಿತು.

Advertisement

Udayavani is now on Telegram. Click here to join our channel and stay updated with the latest news.

Next