Advertisement

ಭಾರತ-ಆಸ್ಟ್ರೇಲಿಯ: ಫೈನಲ್‌ ಗೂ ಮಿಗಿಲಾದ ಪೈಪೋಟಿ

11:03 PM Feb 01, 2022 | Team Udayavani |

ಕೂಲಿಜ್‌ (ಆಂಟಿಗಾ): ಕಿರಿಯರ ವಿಶ್ವಕಪ್‌ ಕೂಟದ ದ್ವಿತೀಯ ಸೆಮಿಫೈನಲ್‌ನಲ್ಲಿ ಪ್ರಬಲ ತಂಡಗಳಾದ ಭಾರತ ಮತ್ತು ಆಸ್ಟ್ರೇಲಿಯ ದೊಡ್ಡ ಕಾಳಗಕ್ಕೆ ಅಣಿಯಾಗಿವೆ. ಬುಧವಾರ ಸಂಜೆ ಇಲ್ಲಿನ “ಕೂಲಿಜ್‌ ಕ್ರಿಕೆಟ್‌ ಗ್ರೌಂಡ್‌’ನಲ್ಲಿ ಫೈನಲ್‌ಗೂ ಮಿಗಿಲಾದ ಜಿದ್ದಾಜಿದ್ದಿ ಪೈಪೋಟಿ ನಡೆಯುವ ಎಲ್ಲ ಸಾಧ್ಯತೆ ಇದೆ.

Advertisement

ಈ ಮುಖಾಮುಖಿಯಲ್ಲಿ ಭಾರತದ ಪೂರ್ಣ ಸಾಮರ್ಥ್ಯದ ತಂಡ ಕಣಕ್ಕಿಳಿಯುವುದು ಅಭಿಮಾನಿಗಳ ಪಾಲಿಗೆ ಖುಷಿಯ ಸಮಾಚಾರ. ಯಶ್‌ ಧುಲ್‌ ಸಹಿತ ಒಂದಷ್ಟು ಮಂದಿ ಕೊರೊನಾದಿಂದ ಚೇತರಿಸಿಕೊಂಡ ಬಳಿಕ ಕ್ವಾರ್ಟರ್‌ ಫೈನಲ್‌ನಲ್ಲಿ ಆಡಲಿಳಿದಿದ್ದರು. ಇದೇ ವೇಳೆ ಉಸ್ತುವಾರಿ ನಾಯಕ ನಿಶಾಂತ್‌ ಸಿಂಧು ಅವರ ಫಲಿತಾಂಶ ಪಾಸಿಟಿವ್‌ ಬಂತು. ಇವರೀಗ ಚೇತರಿಸಿಕೊಂಡಿರುವುದು ಸಮಾಧಾನಕರ ಸಂಗತಿ.

ಸಂಘಟಿತ ಹೋರಾಟ
ಸಿಂಧು ಆಗಮನದಿಂದ ಭಾರತದ ಬ್ಯಾಟಿಂಗ್‌ ವಿಭಾಗ ಹೆಚ್ಚು ಬಲಿಷ್ಠಗೊಳ್ಳಲಿದೆ. ಇದರ ತುರ್ತು ಅಗತ್ಯವೂ ಭಾರತಕ್ಕಿದೆ. ಏಕೆಂದರೆ, ಕ್ವಾರ್ಟರ್‌ ಫೈನಲ್‌ನಲ್ಲಿ ಬಾಂಗ್ಲಾದೇಶದ 111 ರನ್ನುಗಳ ಸಣ್ಣ ಮೊತ್ತವನ್ನು ಬೆನ್ನಟ್ಟುವಾಗ ನಮ್ಮವರ ಬ್ಯಾಟಿಂಗ್‌ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಈ ಹಂತದಲ್ಲಿ 5 ವಿಕೆಟ್‌ಗಳು ಉರುಳಿದವು ಎನ್ನುವುದಕ್ಕಿಂತ ಸಣ್ಣ ಮೊತ್ತವೆಂಬ ನಿರ್ಲಕ್ಷ್ಯ ಎಂಬುದು ಎಲ್ಲೋ ಒಂದು ಕಡೆ ಮನೆ ಮಾಡಿಕೊಂಡಂತಿತ್ತು.

ಬಾಂಗ್ಲಾಕ್ಕಿಂತ ಆಸ್ಟ್ರೇಲಿಯ ಹೆಚ್ಚು ಪ್ರಬಲ. ಬ್ಯಾಟಿಂಗ್‌, ಬೌಲಿಂಗ್‌ ಎರಡೂ ಬಲಿಷ್ಠ. ಹೀಗಾಗಿ ಭಾರತ ಹೆಚ್ಚು ಸಂಘಟನಾತ್ಮಕ ಹೋರಾಟ ತೋರಬೇಕಾದ ಅಗತ್ಯವಿದೆ. ಈ ಸಂದರ್ಭದಲ್ಲಿ, ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯವನ್ನು ಸೋಲಿಸಿದ ಆತ್ಮವಿಶ್ವಾಸವೂ ಜತೆಗೂಡಬೇಕಿದೆ.

ಭಾರತದ ಬ್ಯಾಟಿಂಗ್‌ ಲೈನ್‌ಅಪ್‌ ಬಲಿಷ್ಠ ಎಂಬುದರಲ್ಲಿ ಅನುಮಾನವೇ ಇಲ್ಲ. ರಘುವಂಶಿ, ಹರ್ನೂರ್‌, ಬಾವಾ, ಧುಲ್‌, ಸಿಂಧು, ರಶೀದ್‌… ಹೀಗೆ ಸಾಲು ಸಾಲು ಹೀರೋಗಳಿದ್ದಾರೆ. ಎಲ್ಲರೂ ಕೂಟದ ಒಂದಲ್ಲ ಒಂದು ಪಂದ್ಯದಲ್ಲಿ ಬ್ಯಾಟಿಂಗ್‌ ಅಬ್ಬರ ತೋರಿದವರೇ. ಆದರೆ ಕಾಂಗರೂ ವಿರುದ್ಧ ಇವರೆಲ್ಲ ಹೆಚ್ಚು ಜವಾಬ್ದಾರಿಯುತ ನಿರ್ವಹಣೆ ನೀಡಬೇಕಾದ ಅಗತ್ಯವಿದೆ.

Advertisement

ವೈವಿಧ್ಯಮಯ ಬೌಲಿಂಗ್‌
ಭಾರತದ ಬೌಲಿಂಗ್‌ ಹೆಚ್ಚು ವೈವಿಧ್ಯಮಯ. ಬಾಂಗ್ಲಾವನ್ನು ಕಾಡಿದ ಎಡಗೈ ಮಧ್ಯಮ ವೇಗಿ ರವಿಕುಮಾರ್‌, ಸೀಮರ್‌ ರಾಜ್ಯವರ್ಧನ್‌, ಆಲ್‌ರೌಂಡರ್‌ ಬಾವಾ, ಸ್ಪಿನ್ನರ್‌ಗಳಾದ ಓಸ್ವಾಲ್‌ ಮತ್ತು ತಾಂಬೆ ಮೇಲೆ ತಂಡ ಭಾರೀ ನಿರೀಕ್ಷೆ ಇರಿಸಿದೆ.

ಈ ಕೂಟದಲ್ಲೇ ಭಾರತಕ್ಕೆ ಎದುರಾಗಲಿರುವ ನೈಜ ಅಗ್ನಿಪರೀಕ್ಷೆ ಇದಾಗಿದೆ. ದಕ್ಷಿಣ ಆಫ್ರಿಕಾ, ಐರ್ಲೆಂಡ್‌, ಉಗಾಂಡ, ಬಾಂಗ್ಲಾದೇಶ ಎದುರು ಗೆಲುವಿನ ನಿರ್ವಹಣೆ ನೀಡಿದರೂ ಆಸೀಸ್‌ ವಿರುದ್ಧ ಸಾಮರ್ಥ್ಯಕ್ಕೂ ಮಿಗಿಲಾದ ಪ್ರದರ್ಶನ ನೀಡಬೇಕಾದುದು ಅತ್ಯಗತ್ಯ.

ಸವಾಲು ಸುಲಭದ್ದಲ್ಲ
ಕ್ವಾರ್ಟರ್‌ ಫೈನಲ್‌ನಲ್ಲಿ ಪಾಕಿಸ್ಥಾನವನ್ನು ಕೆಡವಿ ಬಂದಿರುವ ಆಸ್ಟ್ರೇಲಿಯ ಈಗಿನ ಸೀನಿಯರ್‌ ತಂಡದಷ್ಟೇ ಬಲಿಷ್ಠ. 17ರ ಹರೆಯದ ಆರಂಭಕಾರ ಟೀಗ್‌ ವಿಲ್ಲಿ ಈ ಕೂಟದದಲ್ಲಿ ಅಮೋಘ ಪ್ರದರ್ಶನ ನೀಡುತ್ತ ಬಂದಿದ್ದಾರೆ. ಪಾಕ್‌ ವಿರುದ್ಧ 97 ಎಸೆತಗಳಿಂದ 71 ರನ್‌ ಸಿಡಿಸಿರುವ ವಿಲ್ಲಿ ವಿಕೆಟ್‌ ಭಾರತದ ಪಾಲಿಗೆ ನಿರ್ಣಾಯಕ. ಹಾಗೆಯೇ ಬೌಲಿಂಗ್‌ನಲ್ಲಿ ವಿಟ್ನಿ ಮತ್ತು ಸಾಲ್ಜ್ಮನ್‌ ದಾಳಿಯನ್ನು ನಿಭಾಯಿಸಿ ನಿಲ್ಲುವುದರಲ್ಲಿ ಭಾರತದ ಯಶಸ್ಸು ಅಡಗಿದೆ. ಒಟ್ಟಾರೆ ಹೇಳುವುದಾದರೆ, ಕಾಂಗರೂ ಸವಾಲು ಸುಲಭದ್ದಲ್ಲ.

ಸಂಭಾವ್ಯ ತಂಡಗಳು
ಭಾರತ: ಅಂಗ್‌ಕೃಶ್‌ ರಘುವಂಶಿ, ಹರ್ನೂರ್‌ ಸಿಂಗ್‌, ರಾಜ್‌ ಬಾವಾ, ಯಶ್‌ ಧುಲ್‌ (ನಾಯಕ), ನಿಶಾಂತ್‌ ಸಿಂಧು, ಕೌಶಲ್‌ ತಾಂಬೆ, ದಿನೇಶ್‌ ಬಾನಾ, ವಿಕ್ಕಿ ಓಸ್ವಾಲ್‌, ರಾಜ್ಯವರ್ಧನ್‌ ಹಂಗರ್ಕೇಕರ್‌, ವಾಸು ವತ್ಸ್, ರವಿ ಕುಮಾರ್‌.
ಆಸ್ಟ್ರೇಲಿಯ: ಕೂಪರ್‌ ಕೊನೋಲಿ (ನಾಯಕ), ಕ್ಯಾಂಬೆಲ್‌ ಕೆಲ್ಲವೇ, ಟೀಗ್‌ ವಿಲ್ಲಿ, ಐಡನ್‌ ಕಾಹಿಲ್‌, ಕೋರಿ ಮಿಲ್ಲರ್‌, ಜಾಕ್‌ ಸಿನ್‌ಫೀಲ್ಡ್‌, ಟೋಬಿಯಸ್‌ ಸ್ನೆಲ್‌, ವಿಲಿಯಂ ಸಾಲ್ಜ್ಮ್ಯಾನ್‌, ಜಾಕ್‌ ನಿಸ್ಬೆಲ್‌, ಲಾಕ್ಲಾನ್‌ ಶಾ, ಟಾಮ್‌ ವೈಟ್ನಿ.
ಆರಂಭ: ಸಂಜೆ 6.30 ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

Advertisement

Udayavani is now on Telegram. Click here to join our channel and stay updated with the latest news.

Next