Advertisement

ಅಂಡರ್‌-19 ಏಶ್ಯ ಕಪ್‌ ಕ್ರಿಕೆಟ್‌ : ಅಫ್ಘಾನ್‌ ಸವಾಲು ಗೆದ್ದ ಭಾರತ ಸೆಮಿಗೆ

11:32 PM Dec 27, 2021 | Team Udayavani |

ದುಬಾೖ : ಅಂಡರ್‌- 19 ಏಶ್ಯ ಕಪ್‌ ಕ್ರಿಕೆಟ್‌ ಪಂದ್ಯಾವಳಿಯ ಸೋಮವಾರದ ಮುಖಾ ಮುಖೀಯಲ್ಲಿ ಭಾರತ 4 ವಿಕೆಟ್‌ಗಳಿಂದ ಅಫ್ಘಾನಿಸ್ಥಾನವನ್ನು ಮಣಿಸಿ ಸೆಮಿಫೈನಲ್‌ ಪ್ರವೇಶಿಸಿದೆ.

Advertisement

ಬ್ಯಾಟಿಂಗಿಗೆ ಇಳಿಸಲ್ಪಟ್ಟ ಅಫ್ಘಾನಿ ಸ್ಥಾನ 4 ವಿಕೆಟಿಗೆ 259 ರನ್‌ ಪೇರಿಸಿದರೆ, ಭಾರತ 48.2 ಓವರ್‌ಗಳಲ್ಲಿ 6 ವಿಕೆಟಿಗೆ 262 ರನ್‌ ಬಾರಿಸಿತು. ಇದು ಕೂಟದಲ್ಲಿ ಭಾರತಕ್ಕೆ ಒಲಿದ ಎರಡನೇ ಗೆಲುವು. “ಎ’ ವಿಭಾಗದಲ್ಲಿ ಭಾರತ ದ್ವಿತೀಯ ಸ್ಥಾನಿಯಾಯಿತು (4 ಅಂಕ). ಮೂರನ್ನೂ ಗೆದ್ದ ಪಾಕಿಸ್ಥಾನ ಅಗ್ರಸ್ಥಾನ ಅಲಂಕರಿಸಿತು. ಮಂಗಳವಾರ “ಬಿ’ ವಿಭಾಗದ 2 ಲೀಗ್‌ ಪಂದ್ಯಗಳ ಬಳಿಕ ಸೆಮಿಫೈನಲ್‌ ಎದುರಾಳಿ ಯಾರೆಂಬುದು ತಿಳಿಯಲಿದೆ.

ಹರ್ನೂರ್‌ ಅಮೋಘ ಆಟ
ಚೇಸಿಂಗ್‌ ವೇಳೆ ಆರಂಭಕಾರ ಹರ್ನೂರ್‌ ಸಿಂಗ್‌ 65 ರನ್‌ ಬಾರಿಸಿ (74 ಎಸೆತ, 9 ಬೌಂಡರಿ) ಮತ್ತೆ ಆಪತ್ಭಾಂಧವರೆನಿಸಿದರು. ಜತೆಗಾರ ಅಂಗ್‌ಕೃಷ್‌ ರಘುವಂಶಿ 35, ನಾಯಕ ಯಶ್‌ ಧುಲ್‌ 26, ರಾಜ್‌ ಬಾವಾ ಅಜೇಯ 35 ಮತ್ತು ಕೌಶಲ್‌ ತಾಂಬೆ ಅಜೇಯ 35 ರನ್‌ ಹೊಡೆದರು. ಬಾವಾ-ತಾಂಬೆ ಮುರಿಯದ 7ನೇ ವಿಕೆಟಿಗೆ 65 ರನ್‌ ಬಾರಿಸಿ ಭಾರತವನ್ನು ದಡ ಸೇರಿಸಿದರು.

ಅಫ್ಘಾನ್‌ ದೊಡ್ಡ ಮೊತ್ತ
ಅಫ್ಘಾನಿಸ್ಥಾನ ಮೊದಲ 10 ಓವರ್‌ಗಳಲ್ಲಿ ಕುಂಟುತ್ತ ಸಾಗಿತ್ತು. 10.3 ಓವರ್‌ಗಳಲ್ಲಿ ಬಂದದ್ದು 38 ರನ್‌ ಮಾತ್ರ. 19 ಓವರ್‌ ಮುಕ್ತಾಯಕ್ಕೆ ಸ್ಕೋರ್‌ 63ಕ್ಕೆ ತಲುಪಿತ್ತಷ್ಟೇ. 29ನೇ ಓವರ್‌ನಲ್ಲಿ ನೂರರ ಗಡಿ ಮುಟ್ಟಿತು. ಆಗ ಭಾರತದ ನಿರ್ಧಾರ ಯಶಸ್ವಿಯಾಯಿತು ಎಂದೇ ಭಾವಿಸ ಲಾಯಿತು. ಆದರೆ ಕೊನೆಯ 20 ಓವರ್‌ಗಳಲ್ಲಿ ಅಫ್ಘಾನ್‌ ಬಿರುಸಿನ ಆಟಕ್ಕೆ ಇಳಿಯಿತು. ಭಾರತದ ಬೌಲರ್‌ಗಳು ಕಡಿವಾಣ ಹಾಕಲು ವಿಫ‌ಲರಾದರು. ಸ್ಕೋರ್‌ 250ರ ಗಡಿ ದಾಟಿತು.

ಮಧ್ಯಮ ಕ್ರಮಾಂಕದಲ್ಲಿ ಆಡಲಿಳಿದ ನಾಯಕ ಸುಲಿಮಾನ್‌ ಸಫಿ ಮತ್ತು ಇಜಾಜ್‌ ಅಹ್ಮದ್‌ ಅಹ್ಮದ್‌ಜಾಯ್‌ ದೊಟ್ಟ ಬ್ಯಾಟಿಂಗ್‌ ಪ್ರದರ್ಶನ ನೀಡಿದರು. ಅಹ್ಮದ್‌ಜಾಯ್‌ ಅವರಂತೂ ಅತ್ಯಂತ ಆಕ್ರಮಣಕಾರಿಯಾಗಿ ಬ್ಯಾಟಿಂಗ್‌ ನಡೆಸಿ ಭಾರತದ ಬೌಲರ್‌ಗಳ ಮೇಲೆರಗಿದರು. ಬರೀ ಸಿಕ್ಸರ್‌ಗಳನ್ನೇ ಬಡಿದಟ್ಟುತ್ತ ಹೋದರು. ಅವರ ಅಜೇಯ 86 ರನ್ನುಗಳ ಆಟದಲ್ಲಿ 7 ಸಿಕ್ಸರ್‌ ಸಿಡಿಯಲ್ಪಟ್ಟಿತು. ಬೌಂಡರಿ ಕೇವಲ ಒಂದೇ. 68 ಎಸೆತಗಳಿಂದ ಈ ಸ್ಫೋಟಕ ಇನ್ನಿಂಗ್ಸ್‌ ಕಟ್ಟಿದರು.

Advertisement

ನಾಯಕ ಸಫಿ 86 ಎಸೆತ ಎದುರಿಸಿ 73 ರನ್‌ ಹೊಡೆದರು. ಒಂದು ಸಿಕ್ಸರ್‌ ಹಾಗೂ 7 ಬೌಂಡರಿಗಳನ್ನು ಇದು ಒಳಗೊಂಡಿತ್ತು.

ಸಂಕ್ಷಿಪ್ತ ಸ್ಕೋರ್‌
ಅಫ್ಘಾನಿಸ್ಥಾನ-4 ವಿಕೆಟಿಗೆ 259 (ಅಹ್ಮದ್‌ಜಾಯ್‌ ಔಟಾಗದೆ 86, ಸಫಿ 73, ಅಲ್ಲಾಹ್‌ ನೂರ್‌ 26, ತಾಂಬೆ 25ಕ್ಕೆ 1, ಓಸ್ವಾಲ್‌
35ಕ್ಕೆ 1).

ಭಾರತ-48.2 ಓವರ್‌ಗಳಲ್ಲಿ 6 ವಿಕೆಟಿಗೆ 262 (ಹರ್ನೂರ್‌ 65, ಬಾವಾ ಅಜೇಯ 43, ತಾಂಬೆ ಅಜೇಯ 35, ರಘುವಂಶಿ 35, ನೂರ್‌ ಅಹ್ಮದ್‌ 43ಕ್ಕೆ 4).

Advertisement

Udayavani is now on Telegram. Click here to join our channel and stay updated with the latest news.

Next