ಮದುವೆಯಾಗಿ ಮೊದಲ ರಾತ್ರಿಯ ಸುಖ ಅನುಭವಿಸಬೇಕೆಂಬ ಉತ್ಕಟ ಬಯಕೆ ವೆಂಕಟೇಶ ಅಲಿಯಾಸ್ ವೆಂಕಿಯದ್ದು. ಆದರೆ ಮದುವೆ ಮಾಡಿಸಲು ವೆಂಕಿಗೆ ಹುಡುಗಿಯನ್ನು ಹುಡುಕುವುದೇ ಅವನ ತಂದೆ-ತಾಯಿಗೊಂದು ದೊಡ್ಡ ಸವಾಲು. ಇನ್ನೇನು ಹುಡುಗಿ ಒಪ್ಪಿಕೊಂಡು, ಮದುವೆ ಮಾಡಿಸಬೇಕು ಎನಿಸುವಷ್ಟರಲ್ಲಿ ಆ ಮದುವೆಯೂ ಕ್ಯಾನ್ಸಲ್! ಹೀಗೆ ಹತ್ತಾರು ಹುಡುಗಿಯರನ್ನು ನೋಡುವುದು, ಮದುವೆ ಕ್ಯಾನ್ಸಲ್ ಆಗುವುದನ್ನು ನೋಡಿ ಬೇಸತ್ತ ವೆಂಕಿ, ಅದಕ್ಕಾಗಿ “ಅಡ್ಡದಾರಿ’ಯೊಂದನ್ನು ಕಂಡು ಕೊಳ್ಳುತ್ತಾನೆ. ಇನ್ನೇನು ಆ “ದಾರಿ’ಯಲ್ಲಿ “ಸವಾರಿ’ ಹೋಗಬೇಕು ಎನ್ನುವಷ್ಟರಲ್ಲಿ, ಅಲ್ಲಿ ನಡೆಯಬಾರದ ಘಟನೆಯೊಂದು ನಡೆದು ಹೋಗುತ್ತದೆ. ಅದೇ ವೇಳೆಗೆ ಕೋವಿಡ್ ಲಾಕ್‌ಡೌನ್ ಕೂಡ ಜಾರಿಯಾಗುತ್ತದೆ. ಹೀಗೆ ಮನೆಯೊಳಗೆ ಲಾಕ್ ಆಗುವ ವೆಂಕಿ ಏನೇನು ಪರಿಪಾಟಲುಗಳನ್ನು ಅನುಭವಿಸುತ್ತಾನೆ ಎಂಬುದೇ ಈ ವಾರ ತೆರೆಗೆ ಬಂದಿರುವ “ಉಂಡೆನಾಮ’ ಸಿನಿಮಾದ ಕಥೆಯ ಒಂದು ಎಳೆ.
ಈ ಕಥೆಯ ಎಳೆಯನ್ನು ವಿವರವಾಗಿ ಕಣ್ತುಂಬಿಕೊಳ್ಳಬೇಕಿದ್ದರೆ, ನೀವೊಮ್ಮೆ “ಉಂಡೆನಾಮ’ದ ಕಡೆಗೆ ಮುಖ ಮಾಡಬಹುದು. ಸಿನಿಮಾದ ಟೈಟಲ್ಲೇ ಹೇಳುವಂತೆ, “ಉಂಡೆನಾಮ’ ಒಂದು ಔಟ್ ಆ್ಯಂಡ್ ಔಟ್ ಕಾಮಿಡಿ ಶೈಲಿಯ ಸಿನಿಮಾ. ಕಾಮಿಡಿಯ ಜೊತೆಗೆ ಸಣ್ಣದೊಂದು ಸಸ್ಪೆನ್ಸ್- ಥ್ರಿಲ್ಲರ್ ಅಂಶವನ್ನು ಇಟ್ಟುಕೊಂಡು ಕಥೆಯನ್ನು ತೆರೆಮೇಲೆ ಹೇಳಿದ್ದಾರೆ ನಿರ್ದೇಶಕ ರಾಜಶೇಖರ್. ಸಿನಿಮಾದ ಮೊದಲರ್ಧದಲ್ಲಿ ಸರಾಗವಾಗಿ ಸಾಗುವ ಕಥೆ, ದ್ವಿತೀಯರ್ಧದಲ್ಲಿ ಒಂದಷ್ಟು ಟ್ವಿಸ್ಟ್, ಟರ್ನ್ ತೆಗೆದುಕೊಂಡು ಮತ್ತೂಂದು ಆಯಾಮಕ್ಕೆ ತೆರೆದುಕೊಳ್ಳುತ್ತದೆ. ಸುಮಾರು ಐದಾರು ವರ್ಷಗಳ ಬಳಿಕ ನಟ ಕೋಮಲ್ ಮತ್ತೂಮ್ಮೆ “ಉಂಡೆನಾಮ’ ಸಿನಿಮಾದಲ್ಲಿ ಸಂಪೂರ್ಣ ಕಾಮಿಡಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಮದುವೆಯಾಗಲು ಹಂಬಲಿಸುವ ಹುಡುಗನಾಗಿ, ಪೇಚಿಗೆ ಸಿಲುಕಿ ನಲುಗುವ “ವೆಂಕಿ’ಯಾಗಿ ಕೋಮಲ್ ಪ್ರೇಕ್ಷಕರನ್ನು ಎಂದಿನಂತೆ ನಗಿಸಲು ಯಶಸ್ವಿಯಾಗಿದ್ದಾರೆ. ಕೋಮಲ್ ಕಾಮಿಡಿಗೆ ನಟ ಹರೀಶ್ ರಾಜ್ ಕೂಡ ಸ್ನೇಹಿತನಾಗಿ ಸಾಥ್ ನೀಡಿದ್ದಾರೆ. ಇನ್ನು ನಾಯಕಿ ಧನ್ಯಾ ತೆರೆಮೇಲೆ ಇರುವಷ್ಟು ಹೊತ್ತು ಲವಲವಿಕೆಯ ಅಭಿನಯ ನೀಡಿದ್ದಾರೆ. ಉಳಿದಂತೆ ತಬಲನಾಣಿ, ಅಪೂರ್ವಾ, ತನಿಷಾ ಕುಪ್ಪಂಡ, ವೈಷ್ಣವಿ, ಬ್ಯಾಂಕ್ ಜನಾರ್ಧನ್, ಸಂಪತ್ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ಸಿನಿಮಾದ ಹಾಡುಗಳು ಮತ್ತು ಹಿನ್ನೆಲೆ ಸಂಗೀತದ ಕಡೆಗೆ ಇನ್ನಷ್ಟು ಗಮನ ನೀಡಬಹುದಿತ್ತು. ಅದನ್ನು ಹೊರತುಪಡಿಸಿದರೆ, ಸಿನಿಮಾದ ಛಾಯಾ ಗ್ರಹಣ ಮತ್ತು ಸಂಕಲನ “ಉಂಡೆನಾಮ’ವನ್ನು ಚೆನ್ನಾಗಿ ಕಾಣುವಂತೆ ಮಾಡಿದೆ.
–ಜಿ. ಎಸ್. ಕಾರ್ತಿಕ ಸುಧನ್