ಬೆಂಗಳೂರು: ಕರ್ನಾಟಕದ ಏಕೈಕ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಅವರು ಗುರುವಾರ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಇನ್ನೂ ಅದರ ಬಗ್ಗೆ ನಿರ್ಧರಿಸಿಲ್ಲ ಎಂದು ಹೇಳಿ ಅಚ್ಚರಿ ಮೂಡಿಸಿ ರಾಜಕೀಯ ವಲಯದಲ್ಲಿ ಹೊಸ ಚರ್ಚೆ ಹುಟ್ಟು ಹಾಕಿದ್ದಾರೆ.
ಈಗಾಗಲೇ ಡಿ.ಕೆ.ಸುರೇಶ್ ಅವರನ್ನು ಲೋಕಸಭಾ ಚುನಾವಣೆಯಲ್ಲಿ ಕಟ್ಟಿ ಹಾಕುವ ಕುರಿತು ಸಿದ್ದತೆಗಳನ್ನು ವಿಪಕ್ಷಗಳು ತೆರೆಮರೆಯಲ್ಲಿ ನಡೆಸುತ್ತಿದ್ದು, ಇದೆ ವೇಳೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಪಕ್ಷದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ”ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಆರು ತಿಂಗಳಲ್ಲಿ ಬರಲಿದೆ, ಹೆಚ್ಚು ಸಮಯವಿಲ್ಲ, ಅದಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು. ಲೋಕಸಭೆ ಚುನಾವಣೆ ಬಗ್ಗೆ ಕೆಲವರು ಮಾತನಾಡುತ್ತಿದ್ದಾರೆ. ನಾನು ಸ್ಪರ್ಧಿಸಬೇಕೇ ಅಥವಾ ಬೇಡವೇ ಎಂದು ನಾನು ಇನ್ನೂ ನಿರ್ಧರಿಸಿಲ್ಲ, ನಾನು ಇನ್ನೂ ಗೊಂದಲದಲ್ಲಿದ್ದೇನೆ, ಏಕೆಂದರೆ ನನಗೆ ರಾಜಕೀಯ ಸಾಕೆನಿಸಿದೆ” ಎಂದು ಸುರೇಶ್ ಹೇಳಿದ್ದಾರೆ.
“ಮುಂದಿನ ದಿನಗಳಲ್ಲಿ ನಿಮ್ಮ ಸಲಹೆಯನ್ನು ಆಧರಿಸಿ ನಾನು ನಿರ್ಧರಿಸುತ್ತೇನೆ. ನನ್ನ ಮುಂದಿನ ಗುರಿ ಜನರ ಸೇವೆ ಮತ್ತು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವುದಾಗಿದೆ. ಇತ್ತೀಚೆಗಷ್ಟೇ ವಿಧಾನಸಭೆ ಚುನಾವಣೆಗೆ ರಾಮನಗರ ಕ್ಷೇತ್ರದಿಂದ ಕಣಕ್ಕಿಳಿಯುವ ಮಾತುಕತೆಯ ನಡುವೆಯೇ ಸುರೇಶ್ ಅವರು ರಾಜ್ಯ ರಾಜಕಾರಣಕ್ಕೆ ಬರುವ ಆಸಕ್ತಿ ಇಲ್ಲ ಎಂದು ಹೇಳಿದ್ದರು.
2019ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 28 ಸ್ಥಾನಗಳ ಪೈಕಿ ಕೇವಲ ಒಂದನ್ನು ಗೆದ್ದಿದ್ದ ಕಾಂಗ್ರೆಸ್ ಇದೀಗ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವಿನ ಬಳಿಕ 2024ರ ಚುನಾವಣೆಯಲ್ಲಿ 20 ಕ್ಷೇತ್ರಗಳನ್ನು ಗೆಲ್ಲುವ ಗುರಿ ಹೊಂದಿದೆ.