ವಾಡಿ: ಪಟ್ಟಣದಲ್ಲಿ ಕಳೆದ ಒಂದು ತಿಂಗಳಿಂದ ಉಲ್ಬಣಗೊಂಡಿರುವ ಡೆಂಘೀ, ಮಲೇರಿಯಾ, ವಾಂತಿ-ಭೇದಿ ಪ್ರಕರಣಗಳು ನಿಯಂತ್ರಣಕ್ಕೆ ಬಾರದಂತಾಗಿದ್ದು, ಜನರು ತತ್ತರಿಸಿ ಹೋಗಿದ್ದಾರೆ.
ಸ್ಥಳೀಯ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ದಿನದಿನವೂ ಹೆಚ್ಚುತ್ತಿದೆ. ಇತ್ತೀಚೆಗೆ ಸುರಿದ ನಿರಂತರ ಮಳೆಯಿಂದ ನಗರದ ವಿವಿಧ ಬಡಾವಣೆಗಳಲ್ಲಿ ನೈರ್ಮಲ್ಯ ವ್ಯವಸ್ಥೆ ಹದಗೆಟ್ಟಿದ್ದು, ಗಬ್ಬೆದ್ದ ಚರಂಡಿಗಳ ವ್ಯವಸ್ಥೆಯಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದೆ.
ಪುರಸಭೆ ಅಧಿಕಾರಿಗಳು ಫಾಗಿಂಗ್ ಸಿಂಪರಣೆ ಕೈಗೊಂಡರೂ ಸೊಳ್ಳೆಗಳ ಹಾವಳಿ ನಿಯಂತ್ರಣಕ್ಕೆ ಬಂದಿಲ್ಲ. ಸೊಳ್ಳೆ ಕಡಿತದಿಂದಾಗಿ ಸ್ಲಂ ಬಡಾವಣೆ ಜನರು ಮಲೇರಿಯಾ ರೋಗಕ್ಕೆ ತುತ್ತಾಗುತ್ತಿದ್ದಾರೆ. ಮಕ್ಕಳಲ್ಲಿ ಹೆಚ್ಚಿನ ಪ್ರಮಾಣದ ಜ್ವರ ಉಲ್ಬಣಗೊಂಡಿದೆ. ಸ್ಥಳೀಯ ಸರ್ಕಾರಿ ಆಸ್ಪತ್ರೆಗಳು ಸೇರಿದಂತೆ ಖಾಸಗಿ ಕ್ಲಿನಿಕ್‌ಗಳಲ್ಲಿ ರೋಗಿಗಳ ದಂಡೇ ಕಂಡು ಬರುತ್ತಿದೆ.
ಸೊಳ್ಳೆಗಳ ಮೇಲೆ ಫಾಗಿಂಗ್ ಮಾಡಿದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಸರ್ಕಾರಿ ಆಸ್ಪತ್ರೆಗೆ ದಾಖಲಾದ ರೋಗಿಗಳ ಡೆಂಘೀ, ಮಲೇರಿಯಾ ಮಾಹಿತಿ ಮಾತ್ರ ಆರೋಗ್ಯ ಇಲಾಖೆ ಕಡತಗಳಲ್ಲಿ ದಾಖಲಾಗಿದೆ. ಆದರೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ಡೆಂಘೀ ಪೀಡಿತ ರೋಗಿಗಳ ಅಧಿಕೃತ ಮಾಹಿತಿ ಇಲ್ಲವಾಗಿದೆ. ವಾರದ ಹಿಂದೆಯೇ ನಗರದಲ್ಲಿ ಇಬ್ಬರು ಯುವಕರು ವಿಪರೀತ ಜ್ವರದಿಂದ ಮೃತಪಟ್ಟಿದ್ದಾರೆ. ಈ ಕುರಿತು ಆರೋಗ್ಯ ಇಲಾಖೆ ಅಥವಾ ಸಂಬಂಧಿಕರು ಸೂಕ್ತ ಮಾಹಿತಿಯನ್ನು ನೀಡುತ್ತಿಲ್ಲ. ಈಗ ಎಚ್ಚೆತ್ತುಕೊಂಡಿರುವ ಆರೋಗ್ಯ ಇಲಾಖೆ ಆಶಾ ಮತ್ತು ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಮೂಲಕ ಪಟ್ಟಣದ 23 ವಾರ್ಡ್‌ಗಳಲ್ಲಿ ಲಾರ್ವಾ ಸರ್ವೇ ಕಾರ್ಯಕ್ಕೆ ಮುಂದಾಗಿದೆ.
ನೇತಾಜಿ ನಗರ, ಪಿಲಕಮ್ಮಾ ದೇವಿ ಬಡಾವಣೆ, ಮಲ್ಲಿಕಾರ್ಜುನ ಗುಡಿ ಏರಿಯಾ, ಜಾಂಬವೀರ ಕಾಲೋನಿ, ಹನುಮಾನ ನಗರ, ರೆಸ್ಟ್‌ಕ್ಯಾಂಪ್ ತಾಂಡಾ, ಬಿಯ್ನಾಬಾನಿ ಏರಿಯಾ, ಅಂಬೇಡ್ಕರ್ ಕಾಲೋನಿ, ಭೀಮನಗರ, ಶಿವರಾಯ ಚೌಕಿ ಸೇರಿದಂತೆ ಇತರ ಬಡಾವಣೆಗಳ ಜನರ ನೆಮ್ಮದಿ ಕಸಿದಿರುವ ಸೊಳ್ಳೆ ಕಾಟ ನಿಯಂತ್ರಣಕ್ಕೆ ಪುರಸಭೆ ಆಡಳಿತ ಆದ್ಯತೆ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.