Advertisement

ಟ್ರಾಫಿಕ್‌ ಜಾಮ್‌ : ಮಳೆಗಾಲ ಶುರುವಾದರೆ ಸವಾರರ ಪರದಾಟ

05:05 AM May 29, 2018 | Karthik A |

ವಿಶೇಷ ವರದಿ
ಮಹಾನಗರ:
ರಾಷ್ಟ್ರೀಯ ಹೆದ್ದಾರಿ 66ರ ತಲಪಾಡಿ -ನಂತೂರು ಚತುಷ್ಪಥ ಕಾಮಗಾರಿ ಆರಂಭವಾಗಿ 8 ವರ್ಷ ಕಳೆದರೂ ಇನ್ನೂ ಪೂರ್ತಿಗೊಂಡಿಲ್ಲ. ಅದರಲ್ಲಿಯೂ ಈ ಹೆದ್ದಾರಿಯಲ್ಲಿರುವ ಪ್ರಮುಖ ಜಂಕ್ಷನ್‌ ಗಳಾದ ಪಂಪ್‌ ವೆಲ್‌ ಮತ್ತು ತೊಕ್ಕೊಟ್ಟಿನಲ್ಲಿ ಫ್ಲೈಓವರ್‌ ನಿರ್ಮಾಣ ಕಾಮಗಾರಿ 6 ವರ್ಷಗಳ ಹಿಂದೆ ಆರಂಭವಾಗಿದ್ದು, ಆಮೆಗತಿಯಲ್ಲಿ ನಡೆಯುತ್ತಿದೆ. ಇನ್ನು ಮಳೆಗಾಲ ಶುರು ವಾದರೆ, ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರ ಪರದಾಟ ಹೇಳತೀರದು. ಕಾಮಗಾರಿ ಕುಂಟುತ್ತಾ ಸಾಗುತ್ತಿದ್ದು, ಇನ್ನೂ ಶೇ. 80ರಷ್ಟು ಬಾಕಿ ಇದೆ. ಎರಡೂ ಕಡೆ ಕಾಂಕ್ರೀಟ್‌ ಪಿಲ್ಲರ್‌ ಗಳ ನಿರ್ಮಾಣವೇ ಇನ್ನೂ ಪೂರ್ತಿಗೊಂಡಿಲ್ಲ. ತೊಕ್ಕೊಟ್ಟಿನಲ್ಲಿ ಎರಡೂ ಬದಿ ಸರ್ವೀಸ್‌ ರಸ್ತೆ ನಿರ್ಮಾಣ ಮಾಡಲಾಗಿದ್ದು, ವಾಹನ ಸಂಚಾರಕ್ಕೇ ವ್ಯವಸ್ಥೆ ಮಾಡಿ ಕೊಡಲಾಗಿದೆ. ಆದರೆ ಪಂಪ್‌ ವೆಲ್‌ ನಲ್ಲಿ ಸರ್ವೀಸ್‌ ರಸ್ತೆ ನಿರ್ಮಾಣದ ಕೆಲಸ ಶೇ.50ರಷ್ಟು ಕೂಡ ಮುಗಿದಿಲ್ಲ.

Advertisement

ಪರಿಸ್ಥಿತಿ ಆಯೋಮಯ
ಧಾರಾಕಾರ ಮಳೆ ಬಂದರೆ ಪಂಪ್‌ ವೆಲ್‌ ಮತ್ತು ತೊಕ್ಕೊಟ್ಟು ಜಂಕ್ಷನ್‌ ಗಳೆರಡರಲ್ಲಿ ಯೂ ಪರಿಸ್ಥಿತಿ ಆಯೋಮಯ. ಫ್ಲೈಓವರ್‌ ನ ರ್‍ಯಾಂಪ್‌ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಇದಕ್ಕಾಗಿ ಮುಖ್ಯ ರಸ್ತೆಯ ಭಾಗವನ್ನು ಅಗೆದು ಎರಡೂ ಬದಿ ಸಿಮೆಂಟ್‌ ಕಾಂಕ್ರೀಟ್‌ ಸ್ಲ್ಯಾಬ್‌ ಗಳನ್ನು ತಡೆಗೋಡೆಗಳನ್ನಾಗಿ ಉಪಯೋಗಿಸಿ ಮಧ್ಯಭಾಗದಲ್ಲಿ ಮಣ್ಣು ತುಂಬಿಸುವ ಕೆಲಸ ಪ್ರಗತಿಯಲ್ಲಿದೆ.

ಆದರೆ ಇದೀಗ ಮಳೆ ಆರಂಭವಾಗಿದ್ದು, ಒಂದು ದಿನ ಸಾಮಾನ್ಯ ಮಳೆ ಬಂದರೆ ಮೂರು ದಿನ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ದಿನಂಪ್ರತಿ ಮಳೆ ಬಂದರೆ ಕೆಲಸ ಮಾಡುವಂತೆಯೇ ಇಲ್ಲ. ಧಾರಾಕಾರ ಮಳೆ ಬಂದರೆ ರ್‍ಯಾಂಪ್‌ ನಿರ್ಮಾಣಕ್ಕಾಗಿ ಅಗೆದ ಜಾಗದಲ್ಲಿ ನೀರು ತುಂಬಿ ರಸ್ತೆ ಯಾವುದು? ಹೊಂಡ ಯಾವುದು ಎಂದು ತಿಳಿಯದಂತಾಗುವುದು. ಇದರಿಂದ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚು. ಅಲ್ಲದೆ ನಿರಂತರವಾಗಿ ದಿನವಿಡೀ ಮಳೆ ಸುರಿದರೆ ಈ ಪ್ರದೇಶಗಳಲ್ಲಿ ಸಂಚಾರವನ್ನು ನಿಷೇಧಿಸ ಬೇಕಾಗಿಯೂ ಬರಬಹುದು!

ಚರಂಡಿ ವ್ಯವಸ್ಥೆ ಇಲ್ಲ
ಎರಡೂ ಜಕ್ಷನ್‌ ಗಳಲ್ಲಿ ಮಳೆ ನೀರು ಹರಿದು ಹೋಗಲು ಸೂಕ್ತವಾದ ಚರಂಡಿ ವ್ಯವಸ್ಥೆಯೂ ಇಲ್ಲ. ಇರುವ ಚರಂಡಿಯ ದುರಸ್ತಿ ಕೂಡ ಆಗಿಲ್ಲ. ಪಂಪ್‌ ವೆಲ್‌ ಜಂಕ್ಷನ್‌ ನಲ್ಲಿ ಉಜ್ಜ್ಯೋಡಿಯಿಂದ ಪಂಪ್‌ ವೆಲ್‌ ತನಕ‌ ಸರ್ವೀಸ್‌ ರಸ್ತೆ ಭಾಗಶಃ ನಿರ್ಮಾಣವಾಗಿದ್ದು, ಉಳಿದರ್ಧ ಭಾಗ ನಿರ್ಮಾಣ ಹಂತದಲ್ಲಿದೆ. ಇಲ್ಲಿ ನೀರು ಹರಿದು ಹೋಗಲು ವ್ಯವಸ್ಥಿತ ಚರಂಡಿ ವ್ಯವಸ್ಥೆ ಇಲ್ಲ. ರಸ್ತೆ ಬದಿ ಬಹು ಮಹಡಿ ಕಟ್ಟಡ ನಿರ್ಮಾಣ ಹಂತದಲ್ಲಿದ್ದು, ಅದರ ಎದುರು ಚರಂಡಿಯ ಭಾಗದಲ್ಲಿ ಮಣ್ಣಿನ ರಾಶಿ ಇದೆ. ಧಾರಾಕಾರ ಮಳೆ ಸುರಿದರೆ ಮಣ್ಣೆಲ್ಲವೂ ಚರಂಡಿಯ ಪಾಲಾಗಲಿದ್ದು, ನೀರು ಹರಿಯಲು ಕಷ್ಟಕರವಾಗಬಹುದು.

ಯಾವುದೇ ಕ್ರಮಕೈಗೊಂಡಿಲ್ಲ
ಪಂಪ್‌ ವೆಲ್‌ ವೃತ್ತದಲ್ಲಿ ಬಿ.ಸಿ.ರೋಡ್‌ ಭಾಗದಿಂದ ಬರುವ ವಾಹನಗಳು ಸ್ವಲ್ಪ ಎಡ ಭಾಗಕ್ಕೆ ಹೋಗಿ ಬಳಿಕ ಬಲಕ್ಕೆ ತಿರುಗುವಲ್ಲಿ ರಸ್ತೆಯಲ್ಲಿ ಹೊಂಡ ನಿರ್ಮಾಣವಾಗಿದ್ದು, ಅದನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಟ್ರಾಫಿಕ್‌ ಪೊಲೀಸರು ಸುಮಾರು ಒಂದು ತಿಂಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮ ಆಗಿಲ್ಲ.

Advertisement

ಸಂಭಾವ್ಯ ದುರಂತ ತಪ್ಪಿಸಿ
ಇಲ್ಲಿನ ಫಾದರ್‌ ಮುಲ್ಲರ್‌ ಕನ್ವೆನ್ಶನ್‌ ಹಾಲ್‌ ದ್ವಾರದ ಎದುರು ಸರ್ವೀಸ್‌ ರಸ್ತೆಯಲ್ಲಿ ನಿರ್ಮಾಣವಾಗಿದ್ದ ಹೊಂಡದ ಬಳಿ ಕಳೆದ ಎಪ್ರಿಲ್‌ 29ರಂದು ಸಂಭವಿಸಿದ ಅಪಘಾತದಲ್ಲಿ ಸ್ಕೂಟರ್‌ ಸವಾರರೊಬ್ಬರು ಸಾವನ್ನಪ್ಪಿದ್ದು, ಈ ಘಟನೆ ಇನ್ನೂ ಜನಮಾನಸದಿಂದ ಮಾಸಿಲ್ಲ. ರಸ್ತೆಯ ಗುಂಡಿಗಳನ್ನು ಮುಚ್ಚಿ, ಚರಂಡಿಗಳಲ್ಲಿ ಸರಾಗವಾಗಿ ನೀರು ಹರಿದು ಹೋಗುವಂತೆ ವ್ಯವಸ್ಥೆ ಮಾಡಿದರೆ ಮಳೆಗಾಲದ ಸಂಭಾವ್ಯ ದುರಂತಗಳನ್ನು ತಪಿಸಲು ಸಾಧ್ಯವಿದೆ. 

ಭಯ ಪಡಬೇಕಿಲ್ಲ
ದಿನದ 24 ಗಂಟೆ ಕಾಲವೂ ನಮ್ಮ ಜನರು ಸೂಕ್ತ ಯಂತ್ರೋಪಕರಣಗಳೊಂದಿಗೆ (ಜೇಸಿಬಿ, ಜೀಪ್‌ ಇತ್ಯಾದಿ) ಪಂಪ್‌ ವೆಲ್‌ ಜಂಕ್ಷನ್‌ ನಲ್ಲಿ ಸನ್ನದ್ಧರಾಗಿ ಇರುತ್ತಾರೆ. ಯಾವುದೇ ಸನ್ನಿವೇಶವನ್ನು ಎದುರಿಸಲು ಇಲಾಖೆ ಸಿದ್ಧವಾಗಿದೆ. ಜನರು ಭಯ ಪಡುವ ಆವಶ್ಯಕತೆ ಇಲ್ಲ. 
– ಸ್ಯಾಮ್ಸನ್‌ ವಿಜಯ ಕುಮಾರ್‌, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನ ನಿರ್ದೇಶಕರು.

ಮನವಿ ನೀಡಿದರೂ ಸ್ಪಂದಿಸಿಲ್ಲ
ಪಂಪ್‌ ವೆಲ್‌ ಜಂಕ್ಷನ್‌ ನ ವೃತ್ತದಲ್ಲಿರುವ ರಸ್ತೆ ಹೊಂಡಗಳನ್ನು ಮುಚ್ಚುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಒಂದು ತಿಂಗಳಾದರೂ ಇನ್ನೂ ಯಾವುದೇ ಕ್ರಮ ಆಗಿಲ್ಲ. ಅದೇನು ದೊಡ್ಡ ಕೆಲಸವಲ್ಲ. ಅರ್ಧ ಲೋಡು ಡಾಮರು ಇದ್ದರೆ ಸಾಕು. 
– ಮಂಜುನಾಥ ಶೆಟ್ಟಿ,ಟ್ರಾಫಿಕ್‌ ವಿಭಾಗದ ಎ.ಸಿ.ಪಿ., ಮಂಗಳೂರು.

Advertisement

Udayavani is now on Telegram. Click here to join our channel and stay updated with the latest news.

Next