Advertisement
ಅಪೂರ್ಣ ಕಾಮಗಾರಿನಗರದ ಸನಿಹದಲ್ಲಿರುವ ಕುರುಂಜಿ ಗುಡ್ಡೆಯ ಎತ್ತರದ ಪ್ರದೇಶದಲ್ಲಿ ಸಿ.ಎಂ.ಎಸ್.ಎಂ.ಟಿ.ಡಿ.ಪಿ. ಯೋಜನೆಯಡಿ 50 ಲಕ್ಷ ರೂ. ಅಂದಾಜಿನ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ 2010 ಜೂ. 29ರಂದು ಕರ್ನಾಟಕ ಸರಕಾರದ ಹೊಸದಿಲ್ಲಿ ಪ್ರತಿನಿಧಿ ಆಗಿದ್ದ ಧನಂಜಯ ಕುಮಾರ್ ಶಿಲಾನ್ಯಾಸ ನೆರವೇರಿಸಿದ್ದರು. ಆ ಅನುದಾನದಲ್ಲಿ ಕಾಮಗಾರಿ ಪೂರ್ಣಗೊಳ್ಳದ ಕಾರಣ ಮತ್ತೆ ನಿರ್ಮಿತಿ ಕೇಂದ್ರದ ನಿರ್ವಹಣೆ ಅಡಿ ಎರಡು ಬಾರಿ 15.57 ಲಕ್ಷ ರೂ. ಮತ್ತು 9.40 ಲಕ್ಷ ರೂ. ಅನ್ನು ಮಂಜೂರು ಮಾಡಲಾಗಿತ್ತು. ಇದರಿಂದ ಉದ್ದೇಶಿತ ಒಳಾಂಗಣ ಕ್ರೀಡಾಂಗಣದ ವೆಚ್ಚ 50 ಲಕ್ಷದಿಂದ 74.97 ಲಕ್ಷ ರೂ.ಗೆ ಏರಿಕೆ ಕಂಡಿದೆ. ಅದಾಗ್ಯೂ ಕಾಮಗಾರಿ ಪೂರ್ಣವಾಗದೆ ನ.ಪಂ. ಸಭೆಗಳಲ್ಲಿ ಚರ್ಚಾ ವಸ್ತುವಾಗಿತ್ತು.
ಒಟ್ಟು 50 ಲಕ್ಷ ರೂ. ವೆಚ್ಚದಲ್ಲಿ ಅಂದಾಜುಪಟ್ಟಿ ತಯಾರಿಸಿ ಆರಂಭಗೊಂಡ ಒಳಾಂಗಣ ಕ್ರೀಡಾಂಗಣಕ್ಕೆ ಈ ತನಕ ಮೂರು ಬಾರಿ ಅನುದಾನ ಕಾದಿರಿಸಲಾಯಿತು. ಮೊದಲ ಹಂತದ 50 ಲಕ್ಷ ರೂ. ಕಾಮಗಾರಿ ಪೂರ್ಣಗೊಂಡು ಗುತ್ತಿಗೆ ಸಂಸ್ಥೆಗೆ ಹಣ ಪಾವತಿಸಲಾಗಿದೆ ಅನ್ನುತ್ತಿದೆ ನ.ಪಂ. ಎರಡನೆ ಹಂತದಲ್ಲಿ 2013-14 ನೇ ಸಾಲಿನ ಎಸ್.ಎಫ್.ಸಿ. ಯೋಜನೆಯಡಿ 15.57 ಲಕ್ಷ ರೂ. ವೆಚ್ಚದಲ್ಲಿ ಹೆಚ್ಚುವರಿ ನೆಲಹಾಸು ಕೆಡಹುವುದು, ಅಂಗಣದ ಸುತ್ತ ಗ್ರಾನೈಟ್ ನೆಲಹಾಸು ಅಳವಡಿಸುವುದು, ಮರದ ನೆಲಹಾಸು ನಿರ್ಮಾಣ ಮೊದಲಾದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಆ ಅನುದಾನವು ಸಂದಾಯ ಆಗಿದೆ ಅನ್ನುವುದು ನ.ಪಂ.ಮಾಹಿತಿ. ಮೂರನೆ ಹಂತದಲ್ಲಿ 2016-17 ನೇ ಸಾಲಿನ ಯೋಜನೆಯಡಿ 9.40 ಲ.ರೂ.ವೆಚ್ಚದಲ್ಲಿ ಅಳವಡಿಸಿದ ಎ.ಸಿ. ಶೀಟು ತೆಗೆಯುವುದು, ಹೆಚ್ಚುವರಿ ಜಿ.ಐ. ರಿಪೀಸು ಒದಗಿಸುವುದು, ಗ್ಯಾಲೋಲಿಯಂ ಶೀಟು ಅಳವಡಿಕೆ, ದುರಸ್ತಿ ಕಾಮಗಾರಿಗೆ ಅಂದಾಜು ಪಟ್ಟಿ ತಯಾರಿಸಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈ ಅನುದಾನ ಪಾವತಿಸಲು 9 ಪಾವತಿಸಲು ಬಾಕಿ ಇದೆ ಅನ್ನುತ್ತದೆ ನ.ಪಂ.ನೀಡಿದ ಮಾಹಿತಿ.
Related Articles
ಕಟ್ಟಡದ ಸುತ್ತಲೂ ಪೊದೆಗಳು ಬೆಳೆದಿವೆ. ಕಿಟಕಿ ಗಾಜುಗಳು ಒಡೆದಿವೆ. ಸಿಮೆಂಟ್ ಶೀಟುಗಳು ಹಾಳಾಗುತ್ತಿದೆ. ರಸ್ತೆ ನಿರ್ಮಾಣದ ಸ್ಥಳ ಮಳೆ ನೀರು ಹರಿದು ಹೋಗುವ ತೋಡಿನಂತಾಗಿದೆ. ಒಳಭಾಗದಲ್ಲಿ ಕೆಲ ದಿನಗಳ ಹಿಂದೆಯಷ್ಟೆ ಬಣ್ಣ ಬಳಿದಂತಿದೆ. ಬುಧವಾರದ ತನಕವೂ ಇದೇ ಸ್ಥಿತಿ ಅಲ್ಲಿತ್ತು. ಹಾಗಾಗಿ ಒಳಭಾಗದ ದುರಸ್ತಿಯ ಜತೆಗೆ ಹೊರಭಾಗದಲ್ಲಿ ಹಾಳಾದ ಪರಿಕರಗಳ ಜೋಡಣೆ ಆಗಬೇಕಿದೆ. ಕಾವಲುಗಾರನ ಕಟ್ಟಡ, ಶೌಚಾಲಯ ಸ್ಲ್ಯಾಬ್ ಕಾಮಗಾರಿ ಕಡೆ ಗಮನ ಹರಿಸಬೇಕಿದೆ. ಇಲ್ಲದಿದ್ದರೆ ಉದ್ಘಾಟನೆಗಷ್ಟೇ ಸೀಮಿತವಾಗಿ ಬಿಡಬಹುದು ಅನ್ನುತ್ತಾರೆ ಮಾಹಿತಿ ಹಕ್ಕು ಹೋರಾಟಗಾರ ಡಿ.ಎಂ. ಶಾರೀಕ್.
Advertisement
ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ!ಒಳಾಂಗಣ ಕ್ರೀಡಾಂಗಣದ ಪ್ಲಾನ್ ಗಮನಿಸಿದರೆ 1.5 ಕೋಟಿ ರೂ. ಮಿಕ್ಕಿದ ಯೋಜನೆಯದು. ಆದರೆ ಆರಂಭದಲ್ಲಿ ಮೀಸಲಿಟ್ಟ ಅನುದಾನ ಅರ್ಧ ಕೋಟಿ. ಹೀಗಾಗಿ ಉದ್ದೇಶಿತ ಕಾಮಗಾರಿ ಕೈಗೆತ್ತಿ ಕೊಳ್ಳಲು ಪೂರ್ವಸಿದ್ಧತೆ ಇಲ್ಲದಿದ್ದ ಕಾರಣ ಬಹು ನಿರೀಕ್ಷಿತ ಯೋಜನೆಗೆ ಹಲವು ಅಡ್ಡಿ ಎದುರಾಯಿತು. ಎಂಟು ವರ್ಷ ಸಂದರೂ ಗುರು ಮುಟ್ಟುವಲ್ಲಿ ವೈಫಲ್ಯ ಕಂಡಿತ್ತು. ಮೀಸಲಿಟ್ಟ ಅನುದಾನಕ್ಕೆ ತಕ್ಕಂತೆ ಯೋಜನೆ ಕೈಗೆತ್ತಿಕೊಂಡಿದ್ದರೆ, ಒಳಾಂಗಣ ಕ್ರೀಡಾಂಗಣ ಸಾರ್ವಜನಿಕರ ಬಳಕೆಗೆ ದೊರೆಯುತಿತ್ತು. ತ್ವರಿತ ಪೂರ್ಣಕ್ಕೆ ಸೂಚನೆ
ಒಳಾಂಗಣ ಕ್ರೀಡಾಂಗಣದ ಬಾಕಿ ಉಳಿದಿರುವ ಕಾಮಗಾರಿ ಹಾಗೂ ದುರಸ್ತಿ ಕಾರ್ಯ ತತ್ ಕ್ಷಣ ಪೂರ್ಣಗೊಳಿಸುವಂತೆ ಗುತ್ತಿಗೆ ಸಂಸ್ಥೆಗೆ ಸೂಚಿಸಲಾಗಿದೆ. ಅಲ್ಲಿ ಕಾಮಗಾರಿ ಆರಂಭಗೊಂಡಿದೆ. ಎಲ್ಲ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಉದ್ಘಾಟನೆ ಕುರಿತು ನಿರ್ಧರಿಸಲಾಗುವುದು.
– ಚಂದ್ರಕುಮಾರ್, ಮುಖ್ಯಾಧಿಕಾರಿ, ನ.ಪಂ., ಸುಳ್ಯ ಪರಿಶೀಲಿಸುತ್ತೇವೆ
ಮೂರು ಹಂತದಲ್ಲಿ ಇದಕ್ಕೆ ಅನುದಾನ ಬಿಡುಗಡೆ ಆಗಿದೆ. ಮೊದಲ ಹಂತದಲ್ಲಿನ 50 ಲಕ್ಷ ರೂ ಹಾಗೂ ಎರಡನೆ ಹಂತದ 15.57 ಲ.ರೂ.ಪಾವತಿಸಲಾಗಿದೆ. ಕೊನೆ ಹಂತದ 9.40 ಲ.ರೂ. ಅನುದಾನದ ಕಾಮಗಾರಿ ಪರಿಶೀಲನೆ ನಡೆದು ಪಾವತಿಸುವ ಬಗ್ಗೆ ತೀರ್ಮಾನಿಸಲಾಗುತ್ತದೆ.
– ಶಿವಕುಮಾರ್, ಎಂಜಿನಿಯರ್, ನ.ಪಂ. ಸುಳ್ಯ — ಕಿರಣ್ ಪ್ರಸಾದ್ ಕುಂಡಡ್ಕ