Advertisement

ಅನಧಿಕೃತ ಅಚ್ಚುಕಟ್ಟು ಪ್ರದೇಶ ತೆರವಿನ ಸವಾಲು!

01:05 PM Jan 17, 2022 | Team Udayavani |

ಮಸ್ಕಿ: ತಾಲೂಕಿನ 55ನೇ ವಿತರಣಾ ಕಾಲುವೆಯ ಮೇಲ್ಭಾಗದಲ್ಲಿ ಅನಧಿಕೃತ ಅಚ್ಚುಕಟ್ಟು ಪ್ರದೇಶ ದುಪ್ಪಟ್ಟಾಗಿದ್ದು, ಕೆಳಭಾಗದ ರೈತರ ನಿದ್ದೆಗೆಡಸಿದೆ. ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ ಮಸ್ಕಿಯ 69 ಮೈಲ್‌ ಬಳಿ ಆರಂಭವಾಗುವ 55ನೇ ವಿತರಣಾ ಕಾಲುವೆಯು ಸಿಂಧನೂರು ತಾಲೂಕಿನ ವಲ್ಕಂದಿನ್ನಿ ಬಳಿ ಅಂತ್ಯವಾಗಲಿದೆ.

Advertisement

ಒಟ್ಟು 31.5 ಕಿ.ಮೀ. ಉದ್ದವಿರುವ ಈ ಕಾಲುವೆಗೆ 81 ಕ್ಯೂಸೆಕ್‌ ನೀರು ಹಂಚಿಕೆಯಾಗಿದ್ದು, 17,000 ಎಕರೆ ಜಮೀನು ಅಧಿಕೃತ ಅಚ್ಚುಕಟ್ಟು ಪ್ರದೇಶವಿದೆ. ಮಸ್ಕಿ, ಸಿಂಧನೂರು ಎರಡು ತಾಲೂಕಿನ ಹಲವು ಹಳ್ಳಿಗಳು ಈ ಕಾಲುವೆಯಿಂದ ನೀರಾವರಿ ಭಾಗ್ಯ ಕಂಡಿವೆ. ಆದರೆ, ಈಗ ನೀರು ಬಳಕೆಯ ಪ್ರಮಾಣವೇ ಮೇಲ್ಭಾಗ ಮತ್ತು ಕೆಳಭಾಗದ ರೈತರ ನಡುವೆ ಸಂಘರ್ಷ ಉಂಟು ಮಾಡಿದ್ದು, ತಮ್ಮ ಪಾಲಿನ ಹಕ್ಕಿಗಾಗಿ ಅಚ್ಚುಕಟ್ಟು ಪ್ರದೇಶದ ಕೆಳಭಾಗದ ರೈತರು ಕರ್ನಾಟಕ ಲೋಕಾಯುಕ್ತ ಬಾಗಿಲು ತಟ್ಟಿದ್ದಾರೆ. ದೂರು ಪರಿಶೀಲಿಸಿದ ಲೋಕಾಯುಕ್ತ ಇಲಾಖೆ ಅಧಿಕಾರಿಗಳು, ಅನಧಿಕೃತ ನೀರಾವರಿ ತೆರವು ಮಾಡಿ ಕೆಳಭಾಗದ ರೈತರಿಗೆ ನ್ಯಾಯ ಕೊಡಿಸುವಂತೆ ಆದೇಶ ಮಾಡಿದ್ದಾರೆ.

31.5 ಕಿ.ಮೀ. ಉದ್ದವಿರುವ 55ನೇ ವಿತರಣಾ ಕಾಲುವೆಯನ್ನು ಸರಾಗ ನೀರು ಹಂಚಿಕೆಗಾಗಿ ಎರಡು ಭಾಗ ಮಾಡಲಾಗಿದೆ. 0 ಕಿ.ಮೀ. 16 ಕಿ.ಮೀ. ವರೆಗೆ ಮೊದಲ ಭಾಗ ಮತ್ತು 16-31.5 ಕಿ.ಮೀ. ವರೆಗೆ ಎರಡನೇ ಭಾಗವಾಗಿದೆ. ಮಸ್ಕಿಯಿಂದ ಆರಂಭವಾಗಿ ಸಾಗರ ಕ್ಯಾಂಪ್‌ ಬಳಿ ಅಂತ್ಯವಾಗುವ ಮೊದಲ ಭಾಗದಲ್ಲಿ ಕಾಲುವೆ ಎಡ ಭಾಗಕ್ಕೆ ಮಾತ್ರ ಅಚ್ಚುಕಟ್ಟು ಪ್ರದೇಶವಿದೆ. ಆದರೆ ಇಲ್ಲಿ ಅಕ್ರಮವಾಗಿ ನೀರು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಮಸ್ಕಿ, ಕ್ಯಾತ್ನಟ್ಟಿ, ಉದ್ನಾಳ, ಹುಲ್ಲೂರು, ಸುಂಕನೂರು, ಗೌಡನಬಾವಿ, ಸಾಗರ ಕ್ಯಾಂಪ್‌ ಸೇರಿ ಹಲವು ಹಳ್ಳಿಗಳಲ್ಲಿ ಕಾಲುವೆಯ ಬಲಭಾಗದಲ್ಲೂ ನೀರಾವರಿ ಮಾಡಿಕೊಳ್ಳಲಾಗಿದೆ. ಅಕ್ರಮವಾಗಿ ಪಂಪ್‌ಸೆಟ್‌ ಗಳ ಮೂಲಕ ನೀರು ಬಳಸಿಕೊಳ್ಳುತ್ತಿರುವುದರಿಂದ ಕೆಳಭಾಗಕ್ಕೆ ಸಮರ್ಪಕವಾಗಿ ನೀರು ತಲುಪುತ್ತಿಲ್ಲ ಎನ್ನುವುದು ಸ್ವತಃ ನೀರಾವರಿ ಇಲಾಖೆ ಅಧಿಕಾರಿಗಳ ಸರ್ವೇಯಿಂದಲೇ ಬಯಲಾಗಿದೆ.

ತೆರವಿಗೆ ಅಡ್ಡಿ

ಲೋಕಾಯುಕ್ತ ನ್ಯಾಯಾಲಯ ಆದೇಶದ ಮೇರೆಗೆ ನೀರಾವರಿ ಇಲಾಖೆ ಅಧಿಕಾರಿಗಳು ಪೊಲೀಸ್‌ ಬಂದೋಬಸ್ತ್ ಸಹಿತ ಇತ್ತೀಚೆಗೆ ಮೇಲ್ಭಾಗದಲ್ಲಿನ ಅಕ್ರಮ ನೀರಾವರಿ ವಿರುದ್ಧ ಕಾರ್ಯಾಚರಣೆಗೆ ಇಳಿದಿದ್ದರು. ಆದರೆ ಮೇಲ್ಭಾಗದ ಅಧಿಕಾರಿಗಳು ದಿಢೀರ್‌ ಪ್ರತ್ಯಕ್ಷರಾಗಿ ತೆರವು ಕಾರ್ಯಕ್ಕೆ ಅಡ್ಡಿಪಡಿಸಿದರು. ಅಧಿಕಾರಿಗಳು ಮತ್ತು ರೈತರ ನಡುವೆ ಮಾತಿನ ಚಕಮಕಿ ಪರಿಣಾಮ ತೆರವು ಕಾರ್ಯ ಅರ್ಧಕ್ಕೆ ಸ್ಥಗಿತಗೊಂಡಿದೆ.

Advertisement

4000 ಎಕರೆ ಅನಧಿಕೃತ

ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಯ 55ನೇ ವಿತರಣೆ ಕಾಲುವೆ ಮೇಲ್ಭಾಗದಲ್ಲಿ ಬರೋಬ್ಬರು 4 ಸಾವಿರ ಎಕರೆ ಜಮೀನು ಅನಧಿಕೃತ ಅಚ್ಚುಕಟ್ಟು ಪ್ರದೇಶವಿದೆ. ಪ್ರಭಾವಿಗಳಿಗೆ ಸೇರಿದ ಜಮೀನು ಇದರಲ್ಲಿ ಸಿಂಹಪಾಲಿದ್ದು, ಅಕ್ರಮ ನೀರು ಬಳಕೆಗೆ ಅಧಿಕಾರಿಗಳ ಕುಮ್ಮಕ್ಕು ಇದೆ ಎನ್ನುವ ಆರೋಪಗಳು ಬಲವಾಗಿವೆ.

ಹೋರಾಟಕ್ಕೆ ಹೆಜ್ಜೆ

ಮೇಲ್ಭಾಗದಲ್ಲಿನ ಅನಧಿಕೃತ ನೀರಾವರಿ ತೆರವು ಕಾರ್ಯ ವಿಳಂಬಕ್ಕೆ ಬೇಸರತ್ತ ರೈತರು ಪುನಃ ಹೋರಾಟಕ್ಕೆ ಇಳಿದಿದ್ದಾರೆ. ಭಾನುವಾರ ಸಾಗರ ಕ್ಯಾಂಪ್‌ನಲ್ಲಿ ಸಭೆ ಸೇರಿ ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಹೋರಾಟಕ್ಕೆ ಸಜ್ಜಾಗಿದ್ದಾರೆ. ಕೆಳಭಾಗದ ರಾಮತ್ನಾಳ, ದಿದ್ದಿಗಿ, ಜಾಲವಾಡಗಿ, ಸಾಗರ ಕ್ಯಾಂಪ್‌, ಬೆಳ್ಳಿಗನೂರು ಸೇರಿ ಹಲವು ಹಳ್ಳಿಯ ರೈತರು ಸಭೆಯಲ್ಲಿ ಪಾಲ್ಗೊಂಡಿದ್ದು, ಹೋರಾಟದ ಕುರಿತು ಚರ್ಚೆ ನಡೆಸಿದರು.

ಮೇಲ್ಭಾಗದಲ್ಲಿ ಅಕ್ರಮವಾಗಿ ನೀರು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈ ಬಗ್ಗೆ ತೆರವು ಕಾರ್ಯಕ್ಕೆ ಮುಂದಾಗಿದ್ದೇವು. ಆದರೆ ಅಲ್ಲಿನ ರೈತರು ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಕೈ ಬಿಟ್ಟಿದ್ದೇವೆ. -ದಾವೂದ್‌, ಎಇಇ ನೀರಾವರಿ ಇಲಾಖೆ

ಮೇಲ್ಭಾಗದಲ್ಲಿ ಪ್ರಭಾವಿ ರೈತರು ನೀರು ಬಳಕೆಯ ಹಿಂದೆ ಅಧಿಕಾರಿಗಳ ಕೈ ವಾಡವಿದೆ. ತೆರವು ಕಾರ್ಯಾಚರಣೆಗೆ ಆದೇಶವಿದ್ದರೂ ಅಧಿಕಾರಿಗಳೇ ನಾಟಕವಾಡುತ್ತಿದ್ದಾರೆ. ಕೆಳಭಾಗದ ರೈತರಿಗೆ ಅನ್ಯಾಯವಾಗಲು ಅಧಿಕಾರಿಗಳೇ ಕಾರಣ. ನ್ಯಾಯ ಸಿಗುವವರೆಗೂ ಹೋರಾಡುತ್ತೇವೆ. -ಅಮೀನ್‌ ಪಾಷ ದಿದ್ದಿಗಿ, ರೈತ ಮುಖಂಡರು

ಮಲ್ಲಿಕಾರ್ಜುನ ಚಿಲ್ಕರಾಗಿ

Advertisement

Udayavani is now on Telegram. Click here to join our channel and stay updated with the latest news.

Next