Advertisement

ಅನಧಿಕೃತ ಲೇಔಟ್‌ ತೆರವು ಕಾರ್ಯಾಚರಣೆ

05:57 PM Jan 29, 2022 | Team Udayavani |

ಧಾರವಾಡ: ಹೊಸಯಲ್ಲಾಪುರ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಅನಧಿಕೃತ ಲೇಔಟ್‌ಗಳ ತೆರವು ಕಾರ್ಯಾಚರಣೆಗೆ ಹುಡಾದಿಂದ ಶುಕ್ರವಾರ ಚಾಲನೆ ನೀಡಲಾಯಿತು. ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ ನೇತೃತ್ವದ ಹುಡಾ ಅಧಿಕಾರಿಗಳ ತಂಡ ಪೊಲೀಸ್‌ ಭದ್ರತೆಯಲ್ಲಿ ಜೆಸಿಬಿ ಮೂಲಕ ಅನಧಿಕೃತ ಲೇಔಟ್‌ಗಳನ್ನು ತೆರವುಗೊಳಿತು.

Advertisement

ನಿವೇಶನಗಳಲ್ಲಿ ಅಳವಡಿಸಿದ್ದ ಗುರುತು ಕಲ್ಲು, ರಸ್ತೆ, ಚರಂಡಿ, ವಿದ್ಯುತ್‌ ಕಂಬ, ಸೇರಿ ಇತರ ಸೌಲಭ್ಯಗಳನ್ನು ಜೆಸಿಬಿ ಮೂಲಕ ಧ್ವಂಸಗೊಳಿಸಲಾಯಿತು. ಹುಡಾ ಸರ್ವೇ ಪ್ರಕಾರ ಹೊಸಯಲ್ಲಾಪುರ ವ್ಯಾಪ್ತಿಯಲ್ಲಿ ನವಲಗುಂದಕ್ಕೆ ಹೋಗುವ ಮಾರ್ಗದ ಮಧ್ಯೆ ಒಟ್ಟು 37 ಅನಧಿಕೃತ ಲೇಔಟ್‌ ಪತ್ತೆಯಾ ಗಿದ್ದು, ಈ ಲೇಔಟ್‌ಗಳ ತೆರವು ಕಾರ್ಯಾಚರಣೆಗೆ ಚಾಲನೆ ನೀಡಲಾಗಿದ್ದು, ಶನಿವಾರವೂ ಕಾರ್ಯಾಚರಣೆ ನಡೆಯಲಿದೆ.

ಕಾರ್ಯಾಚರಣೆಗೆ ಆಕ್ಷೇಪ: ತೆರವು ಕಾರ್ಯದ ಮಾಹಿತಿ ಅರಿತು ಸ್ಥಳಕ್ಕೆ ಆಗಮಿಸಿದ ಲೇಔಟ್‌ ಮಾಲೀಕರು ಅಧಿ ಕಾರಿಗಳೊಂದಿಗೆ ವಾಗ್ವಾದ ನಡೆಸಿ ತೆರವು ಕಾರ್ಯ ಮಾಡದಂತೆ ಆಗ್ರಹಿಸಿದರು. ಇದಕ್ಕೆ ಧ್ವನಿಗೂಡಿಸಿದ ಪಾಲಿಕೆ ಸದಸ್ಯ ಶಂಭುಗೌಡ ಸಾಲಮನಿ, ಹೋರಾಟಗಾರ ಬಸವರಾಜ ಜಾಧವ, ಯಾವುದೇ ಕಾರಣಕ್ಕೆ ತೆರವಿಗೆ ಅವಕಾಶ ನೀಡುವುದಿಲ್ಲ ಎಂದು ಜೆಸಿಬಿ ಎದುರು ನಿಂತು ಪ್ರತಿಭಟನೆಗೆ ಮುಂದಾದರು. ಆದರೆ ಅಧಿಕಾರಿಗಳು ಮಾತ್ರ ಅಕ್ರಮ ತೆರವು ನಿಲ್ಲಿಸಲಾಗುವುದು ಎಂದು ಖಡಕ್‌ ಎಚ್ಚರಿಕೆ ನೀಡಿದರು.

ಮಾಲೀಕರು ಹಾಗೂ ಜನರು ತೆರವಿಗೆ ವಿರೋಧ ವ್ಯಕ್ತಪಡಿಸಲು ಮುಂದಾದಾಗ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ನಡೆಸಿದರು. ಇಷ್ಟಾದರೂ ಮಾಲೀಕರು ಮಾತ್ರ ಜೆಸಿಬಿ ಎದುರು ನಿಂತು ತೆರವು ತಡೆಗೆ ಆಗ್ರಹಿಸಿದರು. ಈ ಎಲ್ಲ ವಿರೋಧಗಳ ಮಧ್ಯೆ ಅಧಿಕಾರಿಗಳು ತೆರವು ಕಾರ್ಯ ನಡೆಸಿದರು. ಹುಡಾ ಸದಸ್ಯರಾದ ಚಂದ್ರಶೇಖರ ಗೋಕಾಕ, ಆಯುಕ್ತ ನಿಂಗಪ್ಪ ಕುಮ್ಮಣ್ಣವರ, ಟಿಪಿಎಂ ವಿವೇಕ ಕಾರೇಕರ, ಬಸವರಾಜ ದೇವಗಿರಿ, ಮುಕುಂದ ಜೋಶಿ ಸೇರಿದಂತೆ ಸಿಬ್ಬಂದಿ ಇದ್ದರು.

ಒಂದೂವರೆ ವರ್ಷದಲ್ಲಿ 177 ಅಕ್ರಮ ಲೇಔಟ್‌ ತೆರವು
ಕಳೆದ ಒಂದೂವರೆ ವರ್ಷದಿಂದ ಹುಡಾದಿಂದ ಹು-ಧಾ ಅವಳಿನಗರದಲ್ಲಿನ ಅನಧಿಕೃತ ಲೇಔಟ್‌ ತೆರವು ಕಾರ್ಯಾಚರಣೆ ಸಾಗಿದ್ದು, ಈಗಾಗಲೇ 177 ಅಕ್ರಮ ಲೇಔಟ್‌ ತೆರವು ಮಾಡಲಾಗಿದೆ. ಇದೀಗ ಮೂರನೇ ಹಂತದ ಸರ್ವೇ ಕಾರ್ಯ ಕೈಗೊಂಡಾಗ 97 ಅನಧಿಕೃತ ಲೇಔಟ್‌ ಪತ್ತೆಯಾಗಿದ್ದು, ತೆರವುಗೊಳಿಸಲು ನಿರ್ಧರಿಸಿದ್ದೇವೆ. ಈಗ ಹೊಸಯಲ್ಲಾಪುರದಲ್ಲಿ 37 ಅನಧಿಕೃತ ಲೇಔಟ್‌ ಕಂಡು ಬಂದಿದ್ದು, ತೆರವು ಕಾರ್ಯಕ್ಕೆ ಶುಕ್ರವಾರ ಚಾಲನೆ ನೀಡಿದ್ದು, ಶನಿವಾರವೂ ನಡೆಯಲಿದೆ. ಅನಧಿಕೃತ ಲೇಔಟ್‌ಗಳಿಂದ ಸರಕಾರಕ್ಕೆ ನಷ್ಟ ಉಂಟಾಗುತ್ತಿದ್ದು, ಲೇಔಟ್‌ ತೆರವು ಬಗ್ಗೆ ಮಾಲೀಕರಿಗೆ ನೋಟಿಸ್‌ ಕೊಡಲಾಗಿದೆ ಎಂದು ಹುಢಾ ಅಧ್ಯಕ್ಷ ನಾಗೇಶ ಕಲಬುರ್ಗಿ ಸ್ಪಷ್ಟಪಡಿಸಿದರು.

Advertisement

ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸುಮಾರು 45 ಎಕರೆ ಜಮೀನು ಮಾತ್ರ ಲೇಔಟ್‌ಗೆ ಬರುತ್ತಿದ್ದವು. ಆದರೆ ಬಿಗಿಕ್ರಮ ಕೈಗೊಂಡ ಬಳಿಕ ಕೆಲ ದಿನಗಳ ಹಿಂದೆ ಸುಮಾರು 90 ಎಕರೆ ಜಮೀನು ಬಂದಿದೆ. ಭೂಮಿ ಪರಿವರ್ತನೆಗೆ ಅರ್ಜಿ ಸಲ್ಲಿಸಿದರೆ ಪರಿವರ್ತನೆ ಮಾಡಿಕೊಡಲಾಗುವುದು. ಈ ಕಾರ್ಯಕ್ಕೆ ಕಚೇರಿಗೆ ಬರುವ ಅಗತ್ಯವೂ ಇಲ್ಲ. ಎಲ್ಲವೂ ಆನ್‌ಲೈನ್‌ ಮೂಲಕವೇ ಇದೆ. ಅನಧಿಕೃತ ಲೇಔಟ್‌ ಬದಲು ಅಧಿಕೃತ ಲೇಔಟ್‌ ನಿರ್ಮಾಣ ಮಾಡಿದರೆ ಎಲ್ಲರಿಗೂ ಒಳಿತು.
ನಾಗೇಶ ಕಲಬುರ್ಗಿ, ಹುಡಾ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next