Advertisement

ಅನಧಿಕೃತ ಬಟ್ಟೆ ಡೈಯಿಂಗ್‌ ಕಾರ್ಖಾನೆಗಳಿಗೆ ಬೀಗ

11:56 AM Jul 06, 2018 | Team Udayavani |

ಮೈಸೂರು: ನಗರದಲ್ಲಿ ನಡೆಯುತ್ತಿದ್ದ ಬಟ್ಟೆಗಳಿಗೆ ಬಣ್ಣ ಹಾಕುವ ಅನಧಿಕೃತ ಕಾರ್ಖಾನೆಗಳ ಮೇಲೆ ದಾಳಿ ನಡೆಸಿ ಕಾರ್ಖಾನೆಗಳಿಗೆ ಬೀಗಮುದ್ರೆ ಹಾಕಿರುವ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು, ಆರು ಮಂದಿಯ ವಿರುದ್ಧ ಎಫ್ಐಆರ್‌ ದಾಖಲಿಸಿದ್ದಾರೆ. 

Advertisement

ಎಫ್ಐಆರ್‌ ದಾಖಲು: ಸ್ಥಳೀಯ ಪೊಲೀಸರು, ತಹಶೀಲ್ದಾರರ ಸಮ್ಮುಖದಲ್ಲಿ ಗುರುವಾರ ಜಂಟಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು, ಮೈಸೂರಿನ ಎನ್‌.ಆರ್‌.ಮೊಹಲ್ಲಾದ ಬನ್ನಿಮಂಟದ ಮುಖ್ಯದ್ವಾರದ ಸಿ.ವಿ.ರಸ್ತೆಯಲ್ಲಿ ನಡೆಸುತ್ತಿದ್ದ ಅನಧಿಕೃತ ಎರಡು ಕಾರ್ಖಾನೆಗಳಿಗೆ ಬೀಗ ಜಡಿದರು. ಅಲ್ಲದೆ ಅನುಮತಿ ಇಲ್ಲದೆ ಕಾರ್ಖಾನೆ ನಡೆಸುತ್ತಿದ್ದ ಆರು ಮಂದಿ ವಿರುದ್ಧ ವಿರುದ್ಧ ಎಫ್ಐಆರ್‌ ದಾಖಲು ಮಾಡಿದ್ದಾರೆ. 

ಎರಡು ಕಾರ್ಖಾನೆ ಬಂದ್‌: ತಹಶೀಲ್ದಾರ್‌ ರಮೇಶ್‌ ಬಾಬು ಮಾತನಾಡಿ, ಅಧಿಕೃತ ಆದೇಶ ಹಾಗೂ ಲೈಸೆನ್ಸ್‌ ಇಲ್ಲದೆ ಅನಧಿಕೃತವಾಗಿ ಬಟ್ಟೆಗಳಿಗೆ ಡೈಯಿಂಗ್‌ ಮಾಡಲಾಗುತ್ತಿದೆ. ಹೀಗಾಗಿ ನಗರದಲ್ಲಿರುವ ಅನಧಿಕೃತ ಕಾರ್ಖಾನೆಗಳನ್ನು ಸೀಜ್‌ ಮಾಡುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದು, ಅದರಂತೆ ಪೊಲೀಸರು ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಒಟ್ಟಾಗಿ ಕಾರ್ಯಾಚರಣೆ ನಡೆಸಿ, ಅನಧಿಕೃತ ಎರಡು ಕಾರ್ಖಾನೆಗಳನ್ನು ಬಂದ್‌ ಮಾಡಲಾಗಿದೆ. 

ಕೋಟ್‌ ಅನುಮತಿ ಅಗತ್ಯ: ನಗರದಲ್ಲಿ ಅಂದಾಜು 8 ಡೈಯಿಂಗ್‌ ಯುನಿಟ್‌ಗಳಿದ್ದು, ತುಮಿಳುನಾಡು ಮೂಲದವರು ಲೈಸೆನ್ಸ್‌ ಇಲ್ಲದೆ ಅನಧಿಕೃತ ಕಾರ್ಖಾನೆಗಳನ್ನು ನಡೆಸುತ್ತಿದ್ದಾರೆ. ಮೊದಲ ದಿನದ ಕಾರ್ಯಾಚರಣೆಯಲ್ಲಿ ಎರಡು ಕಾರ್ಖಾನೆಗಳನ್ನು ಸೀಜ್‌ ಮಾಡಲಾಗಿದೆ.

ಕಾರ್ಯಾಚರಣೆ ಮುಂದುವರಿಸುವ ಮೂಲಕ ಬಾಕಿಯಿರುವ ಕಾರ್ಖಾನೆಗಳನ್ನು ಬಂದ್‌ ಮಾಡುತ್ತೇವೆ. ಇದೀಗ ಕಾರ್ಖಾನೆಗಳಿಗೆ ಬೀಗ ಹಾಕಿರುವ ಪರಿಣಾಮ ಜಿಲ್ಲಾಧಿಕಾರಿಗಳ ಅನುಮತಿ ಇಲ್ಲದೆ ಯಾರು ಪ್ರವೇಶಿಸುವಂತಿಲ್ಲ. ಮುಂದೆ ಕಾರ್ಖಾನೆಗಳನ್ನು ತೆರೆಯಬೇಕಾದರೆ ಕೋರ್ಟ್‌ನಿಂದ ಅನುಮತಿ ತರಬೇಕಿದೆ ಎಂದರು. 

Advertisement

ಪರಿಸರ ನಿಯಂತ್ರಣಾಧಿಕಾರಿ ಬಿ.ಎಂ.ಪ್ರಕಾಶ್‌ ಮಾತನಾಡಿ, ಸ್ಥಳೀಯರಿಂದ ಬಾಡಿಗೆಗೆ ಜಾಗ ಪಡೆದು ಕಾರ್ಖಾನೆ ನಡೆಸುತ್ತಿರುವವರು ಯುಜಿಡಿ ಮೂಲಕ ಬಣ್ಣವನ್ನು ಬಿಡಲಿದ್ದು, ಈ ನೀರಿನಿಂದ ಚರ್ಮರೋಗ ಹಾಗೂ  ಪ್ರಾಣಿ ಪಕ್ಷಿಗಳಿಗೂ ಅಪಾಯಕಾರಿಯಾಗಿದೆ. ಹೆಚ್ಚಾಗಿ ರಾತ್ರಿ ವೇಳೆಯಲ್ಲಿ ಕಾರ್ಖಾನೆಯಲ್ಲಿ ಕೆಲಸ ನಡೆಯಲಿದ್ದು, ಸ್ಥಳೀಯರು ಈ ಬಗ್ಗೆ ಪ್ರಶ್ನಿಸಿದರೆ ಹಾರಿಕೆ ಉತ್ತರ ನೀಡುತ್ತಾರೆ. ಅಧಿಕಾರಿಗಳನ್ನು ಕಂಡರೆ ಓಡಿ ಹೋಗುತ್ತಾರೆ ಎಂಬ ದೂರುಗಳು ಕೇಳಿ ಬಂದಿದ್ದು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. 

ಪ್ರಸ್ತುತ 6 ಮಂದಿ ಮೇಲೆ ಎಫ್ಐಆರ್‌ ದಾಖಲಿಸಿದ್ದೇವೆ. ಸ್ಥಳ ಬಾಡಿಗೆಗೆ ನೀಡಿರುವ ಮಾಲಿಕ, ಕಾರ್ಖಾನೆ ಮಾಲಿಕ ಮತ್ತು ಸಂಬಂಧಪಟ್ಟವರ ವಿರುದ್ಧ ಕ್ರಿಮಿನಲ್‌ ಕೇಸ್‌ಗಳನ್ನು ದಾಖಲಿಸಲಾಗುವುದು.
-ಪ್ರಕಾಶ್‌, ಪರಿಸರ ನಿಯಂತ್ರಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next