ಬೆಂಗಳೂರು: ರಾಜಧಾನಿಯಲ್ಲಿ ಅನಧಿಕೃತ ಜಾಹಿರಾತು ಫಲಕಗಳ ಹಾವಳಿಗೆ ಕಡಿವಾಣ ಹಾಕಲು ವಿಫಲವಾಗಿರುವ ಪಾಲಿಕೆಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್, “ಬಿಬಿಎಂಪಿ ಬೆಂಗಳೂರಿಗೆ ಮೊದಲ ಶತ್ರುವಾಗಿ ಪರಿಣಮಿಸಿದೆ’ ಎಂದು ಕಟು ಮಾತುಗಳನ್ನು ಹೇಳಿದೆ.
ನಗರದಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್ ಮತ್ತು ಹೋರ್ಡಿಂಗ್ ಹಾವಳಿ ತಡೆಗಟ್ಟಲು ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಗೆ ನಿರ್ದೇಶನ ನೀಡುವಂತೆ ಕೋರಿ ಮಾಯಿಗೇಗೌಡ ಹಾಗೂ ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಲೆ ಹಾಗೂ ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂದಿತ್ತು.
ಅಧಿಕಾರಿಗಳ ವಿರುದ್ಧ ಕ್ರಮ: ಬಿಬಿಎಂಪಿ ಪರ ವಕೀಲರು ವಾದ ಮಂಡಿಸಿ ನಗರದಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್ ಮತ್ತು ಹೋರ್ಡಿಂಗ್ ಹಾವಳಿ ತಡೆಯಲು ಕ್ರಮ ಕೈಗೊಳ್ಳಲು ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾ ಗು ವುದು. ಈಗಾಗಲೇ ಅಂತಹ ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ. ಈ ವಿಚಾರವನ್ನು ಪಾಲಿಕೆ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಲಿದೆ ಎಂದು ಹೇಳಿದರು.
ನಿಖರ ಮಾಹಿತಿ ಇಲ್ಲ: ಈ ವೇಳೆ ಅರ್ಜಿದಾರರೊಬ್ಬರ ಪರ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್ ವಾದ ಮಂಡಿಸಿ, ನಗರ ದಲ್ಲಿ ವಾಣಿಜ್ಯ ಜಾಹಿರಾತು ಫಲಕಗಳು ಅಳವಡಿಸ ಬೇಕಾದರೆ ನಿರ್ದಿಷ್ಟ ಶುಲ್ಕ ಪಾವತಿಸಿ ಆಯುಕ್ತ ರಿಂದ ಅನುಮತಿ ಪಡೆದುಕೊಳ್ಳಬೇಕು. ಆದರೆ, ಈ ರೀತಿ ಎಷ್ಟು ಅನುಮತಿಗಳನ್ನು ನೀಡಲಾಗಿದೆ, ಅದರಿಂದ ಶುಲ್ಕದ ರೂಪದಲ್ಲಿ ಎಷ್ಟು ಹಣ ಪಾಲಿಕೆ ಗೆ ಬಂದಿದೆ ಎಂಬ ಬಗ್ಗೆ ನಿಖರ ಮಾಹಿತಿ ಇಲ್ಲ ಎಂದು ನ್ಯಾಯಪೀಠದ ಗಮನಕ್ಕೆ ತಂದರು.
ತೆರಿಗೆ ಸಂಗ್ರಹಿಸಲು ವಿಫಲ: ಅದಕ್ಕೆ ಪ್ರತಿಕ್ರಿಯೆ ನೀಡಿದ ನ್ಯಾಯಪೀಠ, ಅನಧಿಕೃತ ಜಾಹಿರಾತು ಫಲಕಗಳಿಗೆ ಅವಕಾಶ ಮಾಡಿಕೊಡುವುದು ಪಾಲಿಕೆಗೆ ಕೋಟ್ಯಂತರ ರೂಪಾಯಿ ಆದಾಯ ಖೋತಾ ಆಗುವುದರ ಜೊತೆಗೆ ನಗರದ ಸೌಂದರ್ಯ ವಿಕಾರಗೊಳ್ಳುವುದಕ್ಕೂ ದಾರಿ ಆಗುತ್ತದೆ. ಅಕ್ರಮ ಜಾಹಿರಾತು ಫಲಕಗಳಿಂದ ಪಾಲಿಕೆಗೆ ಸಾವಿರಾರು ಕೋಟಿ ರೂ. ನಷ್ಟವಾಗಿದೆ. ಶುಲ್ಕ ಪಡೆದುಕೊಳ್ಳಲು ಅವಕಾಶವಿದ್ದರೂ ಅದನ್ನು ಪಾಲಿಕೆ ಕೈಚೆಲ್ಲಿದಂತಿದೆ. ಒಂದು ಕಡೆ ಆದಾಯ ಬರುವುದನ್ನು ತಪ್ಪಿಸಿಕೊಳ್ಳುವ ಪಾಲಿಕೆ, ಮತ್ತೂಂದೆಡೆ ನಗರದ ಮೂಲಸೌಕರ್ಯಗಳ ಅಭಿವೃದ್ಧಿ ವಿಚಾರ ಬಂದಾಗ ಹಣ ಇಲ್ಲವೆಂದು ಬೆನ್ನು ತಿರುಗಿಸುತ್ತದೆ, ಕೈ ಎತ್ತುತ್ತದೆ. ತೆರಿಗೆ ಸಂಗ್ರಹಿಸಲು ವಿಫಲವಾಗಿರುವ ಪಾಲಿಕೆ, ಅದರ ಹೊರೆಯನ್ನು ನಾಗರಿಕರ ಮೇಲೆ ಹೊರಿಸುತ್ತಿದೆ. ಈ ರೀತಿ “ಬಿಬಿಎಂಪಿ ನಗರಕ್ಕೆ ಮೊದಲ ಶತ್ರುವಾಗಿ ಪರಿಣಮಿಸಿದೆ’ ಎಂದು ಖಾರವಾಗಿ ನುಡಿಯಿತು.
ಮೂರು ವರ್ಷದ ವರದಿ ಕೊಡಿ: ಕಳೆದ ಮೂರು ವರ್ಷಗಳಲ್ಲಿ ವಾಣಿಜ್ಯ ಜಾಹಿರಾತು ಫಲಕಗಳ ಅಳವಡಿಕೆಗೆ ಅನುಮತಿ ಕೋರಿ ಆಯುಕ್ತರಿಗೆ ಎಷ್ಟು ಪ್ರಸ್ತಾವನೆಗಳು ಬಂದಿವೆ. ಅವುಗಳನ್ನು ಎಷ್ಟು ಪ್ರಸ್ತಾವನೆಗಳಿಗೆ ಅನುಮತಿ ನೀಡಲಾಗಿದೆ. ಅನುಮತಿ ನೀಡಲಾದ ಪ್ರಸ್ತಾವನೆಗಳಿಂದ ಕಟ್ಟಿಸಿಕೊಳ್ಳಲಾದ ಒಟ್ಟು ಶುಲ್ಕದ ಮೊತ್ತವೆಷ್ಟು. ಅವಧಿ ಮುಗಿದ ಬಳಿಕವೂ ಎಷ್ಟು ಜಾಹಿರಾತು ಫಲಕಗಳನ್ನು ಮುಂದುವರಿ ಸಲಾಗಿದೆ. ಅದರ ವಿರುದ್ಧ ಕೈಗೊಂಡ ಕ್ರಮ ಗಳೇನು, ಅನುಮತಿ ಪಡೆದು ಶುಲ್ಕ ಕಟ್ಟದವರ ವಿರುದ್ಧ ಯಾವ ಕ್ರಮ ಜರುಗಿಸಲಾಗಿದೆ. ತಪ್ಪಿತಸ್ಥ ಅಧಿಕಾರಿಗಳ ಮೇಲೆ ಏನು ಕ್ರಮ ಕೈಗೊಳ್ಳಲಾಗಿದೆ ಎಂಬ ಸಮಗ್ರ ವರದಿ ಸಲ್ಲಿಸಬೇಕು ಎಂದು ಪಾಲಿಕೆಗೆ ನಿರ್ದೇಶನ ನೀಡಿದ ಹೈಕೋರ್ಟ್ ವಿಚಾರಣೆಯನ್ನು ನವೆಂಬರ್ 28ಕ್ಕೆ ಮುಂದೂಡಿತು.