ನವದೆಹಲಿ : ಭಾರತದ ವೇಗಿ ಜಯದೇವ್ ಉನಾದ್ಕತ್ ಅವರು ಭಾರತದ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಮಿಸ್ ಮಾಡಿಕೊಂಡ ದೇಶದ ಮೊದಲ ಕ್ರಿಕೆಟಿಗ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ.
2010ರಲ್ಲಿ ಪದಾರ್ಪಣೆ ಮಾಡಿದ್ದ ಉನಾದ್ಕತ್ ಢಾಕಾದಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ತಮ್ಮ ವೃತ್ತಿಜೀವನದ ಎರಡನೇ ಟೆಸ್ಟ್ ಪಂದ್ಯವನ್ನಷ್ಟೇ ಆಡುತ್ತಿದ್ದಾರೆ. ಅವರು ಸ್ಪಿನ್ನರ್ ಕುಲದೀಪ್ ಯಾದವ್ ಅವರ ಬದಲಿ ಆಟಗಾರನಾಗಿ ಆಡುತ್ತಿದ್ದಾರೆ.
ಕುಲದೀಪ್ ಯಾದವ್ ಚಟ್ಟೋಗ್ರಾಮ್‌ನಲ್ಲಿ ನಡೆದ ಸರಣಿಯ ಆರಂಭಿಕ ಪಂದ್ಯದಲ್ಲಿ ಭಾರತವು 188 ರನ್‌ಗಳ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು. 8 ವಿಕೆಟ್ ಕಬಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಅವರ ಬದಲಿಗೆ 31 ರ ಹರೆಯದ ಉನಾದ್ಕತ್ ತಂಡದಲ್ಲಿ ಸ್ಥಾನ ಪಡೆದಿರುವುದು ಅಚ್ಚರಿಗೆ ಕಾರಣವಾಗಿದೆ.
ಬಾಂಗ್ಲಾ ವಿರುದ್ದ ದ ಪಂದ್ಯದಲ್ಲಿ 16 ಓವರ್ ಗಳಲ್ಲಿ 2 ಮೇಡನ್ ಎಸೆದು 50 ರನ್ ನೀಡಿ 2 ವಿಕೆಟ್ ಪಡೆದಿದ್ದಾರೆ.
ಉನದ್ಕತ್ ಬರೋಬ್ಬರಿ 12 ವರ್ಷ ಮತ್ತು ಎರಡು ದಿನಗಳ ಹಿಂದೆ ಡಿಸೆಂಬರ್ 16, 2020 ರಂದು ಸೆಂಚೂರಿಯನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದ್ದರು. ಈ ನಡುವೆ, ಅವರು 118 ಟೆಸ್ಟ್ ಪಂದ್ಯಗಳನ್ನು ತಪ್ಪಿಸಿಕೊಂಡಿದ್ದಾರೆ. ಇದು ಭಾರತೀಯ ಆಟಗಾರನೊಬ್ಬ ಮಿಸ್ ಮಾಡಿಕೊಂಡ ಅತ್ಯಧಿಕ ಮತ್ತು ವಿಶ್ವ ಕ್ರಿಕೆಟ್‌ನಲ್ಲಿ ಎರಡನೇ ಅತಿ ಹೆಚ್ಚು ಪಂದ್ಯದ ದಾಖಲೆಯಾಗಿದೆ.
ಇಂಗ್ಲೆಂಡ್‌ನ ಗರೆಥ್ ಬ್ಯಾಟಿ (142 ಪಂದ್ಯ) ಮಾತ್ರ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಉನಾದ್ಕತ್‌ಗಿಂತ ಹೆಚ್ಚು ಪಂದ್ಯಗಳನ್ನು ಮಿಸ್ ಮಾಡಿಕೊಂಡಿದ್ದಾರೆ.