ಇಸ್ಲಾಮಾಬಾದ್ : ನಿಕಟ ಮಿತ್ರರಾಗಿರುವ ಸೌದಿ ಅರೇಬಿಯ ಮತ್ತು ಪಾಕಿಸ್ಥಾನ ವಿಶ್ವಸಂಸ್ಥೆಯ ಉಗ್ರ ನಿಷೇಧ ಪಟ್ಟಿಯ ರಾಜಕೀಕರರಣವನ್ನು ವಿರೋಧಿಸಿದ್ದು ಇದು ಭಾರತಕ್ಕೆ ಅಪಥ್ಯವೆನಿಸಿದೆ.
ಪಾಕ್ ಮೂಲದ ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ನನ್ನು ವಿಶ್ವ ಸಂಸ್ಥೆಯು ಜಾಗತಿಕ ಉಗ್ರನೆಂದು ಘೋಷಿಸಬೇಕೆಂದು ಪಟ್ಟು ಹಿಡಿಯುತ್ತಿರುವ ಭಾರತದ ಯತ್ನವನ್ನು ಸೌದಿ ಅರೇಬಿಯ ಮತ್ತು ಪಾಕಿಸ್ಥಾನ ಈ ಮೂಲಕ ಪರೋಕ್ಷವಾಗಿ ವಿರೋಧಿಸಿವೆ.
ಸೌದಿ ಅರೇಬಿಯ ಮತ್ತು ಪಾಕಿಸ್ಥಾನ ಹೊರಡಿಸಿರುವ ಜಂಟಿ ಹೇಳಿಕೆಯಲ್ಲಿ ಭಾರತ ತನ್ನೆಲ್ಲ ಸಂಘರ್ಷದ ವಿಷಯಗಳನ್ನು ಬಗೆಹರಿಸಿಕೊಳ್ಳಲು ಮಾತುಕತೆಗೆ ಮುಂದಾಗಬೇಕು ಎಂದು ಕರೆ ನೀಡಿವೆ.
ಪುಲ್ವಾಮಾ ಉಗ್ರ ದಾಳಿಯ ಹಿನ್ನೆಲೆಯಲ್ಲಿ ಪಾಕಿಸ್ಥಾನದೊಂದಿಗಿನ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೇ ಭಾರತ ಭೇಟಿಗೆ ಬರುತ್ತಿರುವ ಸೌದಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅವರು “ಭಾರತ-ಪಾಕ್ ಸಂಬಂಧ ಸುಧಾರಣೆಗೆ ಮಾತುಕತೆಯೊಂದೇ ಪರಿಹಾರ’ ಎಂದು ಹೇಳಿದರು.
ಪಾಕ್ ಜತೆಗೆ ಇತ್ಯರ್ಥಕ್ಕೆ ಬಾಕಿ ಇರುವ ಯಾವುದೇ ವಿಷಯವನ್ನು ಭಾರತ ಮಾತುಕತೆ ಮೂಲಕವೇ ಬಗೆಹರಿಸಿಕೊಳ್ಳಲು ಮುಂದಾಗಬೇಕು ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಿದರು.
ಸೌದಿ ಕ್ರೌನ್ ಪ್ರಿನ್ಸ್ ಸಲ್ಮಾನ್ ಅವರು ಇಂದು ಫೆ.19 ಮತ್ತು ನಾಳೆ 20ರಂದು ಭಾರತ ಭೇಟಿ ಕೈಗೊಳ್ಳುತ್ತಿದ್ದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಪ್ರಧಾನಿ ಮೋದಿ ಮಾತುಕತೆ ನಡೆಸಲಿದ್ದಾರೆ. ಪಾಕ್ ಪ್ರೇರಿತ ಭಯೋತ್ಪಾದನೆಯ ವಿಷಯವೇ ಸೌದಿ ಪ್ರಿನ್ಸ್ ಜತೆಗಿನ ಮಾತುಕತೆಯಲ್ಲಿ ಮುಖ್ಯವಾಗುವ ಸಕಲ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.