ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಕಾಶ್ಮೀರ ವಿಷಯವನ್ನು ಕೆದಕಿ ಭಾರತದ ವಿರುದ್ಧ ತೊಡೆತಟ್ಟುವ ಚಾಳಿಯನ್ನು ಮುಂದುವರಿಸಿರುವ ಪಾಕಿಸ್ಥಾನ ಈಗ ಮತ್ತದೇ ಪ್ರಯತ್ನ ನಡೆಸಿ, ವಿಶ್ವ ಸಮುದಾಯದ ಮುಂದೆ ಬೆತ್ತಲಾಗಿದೆ. ಭಾರತವನ್ನು ಗುರಿ ಯಾಗಿಸಿ ಹೂಡಿದ ಬಾಣ ಪಾಕಿಸ್ಥಾನದ ಪಾಲಿಗೆ ತಿರುಗುಬಾಣವಾಗಿ ಪರಿಣಮಿ ಸಿದ್ದು, ಪಾಕಿಸ್ಥಾನದ ಆರೋಪ, ಆಗ್ರಹಕ್ಕೆ ಭಾರತ ಸೂಕ್ತ ಪ್ರತ್ಯುತ್ತರ ನೀಡಿ, ಅಲ್ಲಿನ ಹಾಲಿ ಪರಿಸ್ಥಿತಿ ಮತ್ತು ತನ್ನ ತಪ್ಪುಗಳನ್ನು ಸರಿಪಡಿಸಿಕೊಳ್ಳದೇ ಹೋದಲ್ಲಿ ಪಾಕ್‌ನ ಭವಿಷ್ಯವೇ ಅಪಾಯದಲ್ಲಿ ಸಿಲುಕಲಿದೆ ಎಂದು ಎಚ್ಚರಿಕೆ ನೀಡಿದೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 79ನೇ ಅಧಿವೇಶನದಲ್ಲಿ ಪಾಲ್ಗೊಂಡಿದ್ದ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಶರೀಫ್ ಅವರು, ಜಮ್ಮು-ಕಾಶ್ಮೀರ ವಿಷಯವನ್ನು ಪ್ರಸ್ತಾವಿಸಿ, ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಮತ್ತೆ ನೀಡಬೇಕು ಎಂದು ಆಗ್ರಹಿಸಿದ್ದರು. ಅಷ್ಟು ಮಾತ್ರವಲ್ಲದೆ ಜಮ್ಮು-ಕಾಶ್ಮೀರದ ಜನತೆ ಪಾಲೆಸ್ತೀನ್ ನಾಗರಿ ಕರಂತೆ ಕಳೆದ ಹಲವಾರು ವರ್ಷಗಳಿಂದ ಸ್ವಾತಂತ್ರ್ಯ ಮತ್ತು ನಾಗರಿಕ ಹಕ್ಕುಗಳಿಗೆ ಹೋರಾಟ ನಡೆಸುತ್ತಿದ್ದಾರೆ ಎನ್ನುವ ಮೂಲಕ ದಾಷ್ಟ್ಯತನ ಮೆರೆದಿದ್ದರು.
ಪಾಕ್‌ನ ಈ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ವಿಶ್ವಸಂಸ್ಥೆಯಲ್ಲಿನ ಭಾರತದ ಖಾಯಂ ನಿಯೋಗದ ಕಾರ್ಯದರ್ಶಿ ಭವಿಕಾ ಮಂಗಳಾನಂದನ್ ಅವರು, ಭಯೋ ತ್ಪಾದನೆ, ಮಾದಕ ವಸ್ತುಗಳ ಕಳ್ಳಸಾಗಣೆ ಸಹಿತ ಅಂತಾರಾಷ್ಟ್ರೀಯ ಮಟ್ಟದ ಅಪರಾಧಗಳಿಗೆ ಕುಖ್ಯಾತಿ ಹೊಂದಿರುವ ಪಾಕಿಸ್ಥಾನ, ವಿಶ್ವದಲ್ಲಿಯೇ ಅತೀದೊಡ್ಡ ಪ್ರಜಾಪ್ರಭುತ್ವ ದೇಶವಾಗಿರುವ ಭಾರತದ ವಿರುದ್ಧ ವಾಗ್ಧಾಳಿ ನಡೆಸಲು ಮುಂದಾಗಿರುವುದು ತೀರಾ ಹಾಸ್ಯಾಸ್ಪದ ಎಂದು ಚುಚ್ಚಿದರು. ಇಂತಹ ದೇಶದಿಂದ ಸ್ವಾತಂತ್ರ್ಯ, ನಾಗರಿಕ ಹಕ್ಕು, ಶಾಂತಿಯ ಕುರಿತಂತೆ ಪಾಠ ಕೇಳುವಂತಹ ಅನಿವಾರ್ಯತೆ ನಮಗೆ ಎದುರಾಗಿಲ್ಲ ಎನ್ನುವ ಮೂಲಕ ಪಾಕಿಸ್ಥಾನದ ಸದ್ಯದ ಪರಿಸ್ಥಿತಿಯ ಮೇಲೆ ಬೆಳಕು ಚೆಲ್ಲಿದ್ದರು.
ಶನಿವಾರ ವಿಶ್ವಸಂಸ್ಥೆ ಅಧಿವೇಶನದಲ್ಲಿ ಮಾತನಾಡಿದ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು, ಭಾರತ ಸಹಿತ ನೆರೆ ದೇಶಗಳ ವಿರುದ್ಧ ದಾಳಿ ನಡೆಸಲು ಉಗ್ರರನ್ನು ಸದಾ ಪೋಷಿಸುತ್ತಲೇ ಬಂದಿದ್ದ ಪಾಕಿಸ್ಥಾನ, ಈಗ ತನ್ನದೇ ಸಮಾಜವನ್ನು ಬಲಿ ಪಡೆಯುವ ಸ್ಥಿತಿಗೆ ಬಂದು ತಲುಪಿರುವುದು ಅದರ ಕರ್ಮದ ಫಲ ಎಂದು ಜರೆದರು. ಇದೇ ವೇಳೆ ಪಾಕಿಸ್ಥಾನ ಭಯೋತ್ಪಾದಕರೊಂದಿಗೆ ಹೊಂದಿರುವ ನಂಟನ್ನು ಕಡಿದುಕೊಂಡಲ್ಲಿ ಮತ್ತು ಅತಿಕ್ರಮಿಸಿಕೊಂಡಿರುವ ಭಾರತದ ಭೂಭಾಗವನ್ನು ತೊರೆದಲ್ಲಿ ಮಾತ್ರವೇ ಉಭಯ ದೇಶಗಳ ನಡುವಣ ಬಿಕ್ಕಟ್ಟು ಶಮನಗೊಳ್ಳಲು ಸಾಧ್ಯ ಎಂದು ಜಾಗತಿಕ ನಾಯಕರ ಮುಂದೆ ಸಾರಿ ಹೇಳಿದರು.
ಪಾಕಿಸ್ಥಾನದ ಬೊಕ್ಕಸ ಬರಿದಾಗಿರುವ ಪರಿಣಾಮ ದೇಶದ ಜನರು ಒಂದು ಹೊತ್ತಿನ ತುತ್ತಿಗೂ ಇನ್ನಿಲ್ಲದ ಪಡಿಪಾಟಲು ಅನುಭವಿಸುತ್ತಿದ್ದಾರೆ. ಇನ್ನು ದೇಶದ ಗಡಿ ಭಾಗದ ಪ್ರಾಂತಗಳಲ್ಲಿ ಪ್ರತ್ಯೇಕತಾವಾದದ ಕೂಗು ಕೇಳಿಬರತೊಡಗಿದ್ದರೆ, ಪಾಕಿಸ್ಥಾನ ಅತಿಕ್ರಮಿಸಿಕೊಂಡ ಪ್ರದೇಶದ ಜನರು ಭಾರತಕ್ಕೆ ಸೇರ್ಪಡೆಗೊಳ್ಳಲು ಒಲವು ತೋರುತ್ತಿದ್ದಾರೆ. ಮತ್ತೂಂದೆಡೆ ಕಳೆದ ಹಲವು ದಶಕಗಳಿಂದ ತಾನೇ ಪೋಷಿಸಿ ಕೊಂಡು ಬಂದಿರುವ ಉಗ್ರರು ಪಾಕಿಸ್ಥಾನಕ್ಕೀಗ ಶಾಪವಾಗಿ ಪರಿಣಮಿಸಿದ್ದಾರೆ.
ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ನಲುಗುತ್ತಿದ್ದರೂ ಸುಖಾಸುಮ್ಮನೆ ಕಾಶ್ಮೀರ ಸಹಿತ ಭಾರತದ ಆಂತರಿಕ ವಿಷಯಗಳನ್ನು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಸ್ತಾವಿಸಿ ತನ್ನ ಹುಳುಕು ಮುಚ್ಚಿಡಲೆತ್ನಿಸುತ್ತಿರುವ ಪಾಕ್‌ಗೆ ಭಾರತ ಮತ್ತೂಮ್ಮೆ ಸರಿಯಾದ ತಪರಾಕಿ ನೀಡಿದೆ. ಪಾಕಿಸ್ಥಾನದ ನಾಯಕರಿಗೆ ಇನ್ನಾದರೂ ತಮ್ಮ ದೇಶದ ಅಸ್ತಿತ್ವವನ್ನು ಉಳಿಸಿಕೊಳ್ಳುವ ಕಿಂಚಿತ್ ಅಪೇಕ್ಷೆ ಇದ್ದರೂ ಭಯೋತ್ಪಾದನೆಯನ್ನು ಮೂಲೋ ತ್ಪಾಟನೆ ಮಾಡುವ ನಿಟ್ಟಿನಲ್ಲಿ ವಿಶ್ವ ಸಮುದಾಯದೊಂದಿಗೆ ಕೈಜೋಡಿಸಬೇಕು. ಇನ್ನೂ ಎಚ್ಚೆತ್ತುಕೊಳ್ಳದೆ ಹೋದಲ್ಲಿ ಈಗಾಗಲೇ ಭಾರತ ಎಚ್ಚರಿಕೆ ನೀಡಿರುವಂತೆ ಪಾಕಿಸ್ಥಾನ ಜಾಗತಿಕ ಭೂಪಟದಿಂದ ಮಾಯವಾದಲ್ಲಿ ಅಚ್ಚರಿ ಏನೂ ಇಲ್ಲ.