ದುಬೈ: ಐಪಿಎಲ್ ಲೀಗ್ ಹಂತದ ಕೊನೆಯ ಕೆಲವು ಪಂದ್ಯಗಳಲ್ಲಿ ತನ್ನ ವೇಗದ ಬೌಲಿಂಗ್ ನಿಂದ ಗಮನ ಸೆಳೆದ ಜಮ್ಮು ಕಾಶ್ಮೀರದ ಯುವ ಬೌಲರ್ ಉಮ್ರಾನ್ ಮಲಿಕ್ ಈಗ ಟಿ20 ವಿಶ್ವಕಪ್ ಗೆ ನೆಟ್ ಬೌಲರ್ ಆಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ಅವರಿಗೆ ದುಬೈ ನಲ್ಲೇ ಉಳಿಯುವಂತೆ ಬಿಸಿಸಿಐ ಸೂಚಿಸಿದೆ.
ಸನ್ ರೈಸರ್ಸ್ ಹೈದರಾಬಾದ್ ಪರ ಮೂರು ಪಂದ್ಯ ಆಡಿರುವ ಉಮ್ರಾನ್ ಮಲಿಕ್ ಎರಡು ವಿಕೆಟ್ ಕಿತ್ತಿದ್ದಾರೆ. ಇದಕ್ಕಿಂತ ಹೆಚ್ಚಾಗಿ ತನ್ನ ಮಾರಕ ವೇಗದಿಂದಲೇ ಮಲಿಕ್ ಗಮನ ಸೆಳೆದಿದ್ದಾರೆ.
ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಕೂಡಾ ಉಮ್ರಾನ್ ಮಲಿಕ್ ವೇಗದಿಂದ ಪ್ರಭಾವಿತರಾಗಿದ್ದರು. ಹೈದರಾಬಾದ್ ವಿರುದ್ಧದ ಪಂದ್ಯದ ಬಳಿಕ ಮಾತನಾಡಿದ ವಿರಾಟ್, ಐಪಿಎಲ್ ನಲ್ಲಿ ಪ್ರತಿ ವರ್ಷ ಹಲವು ಪ್ರತಿಭೆಗಳು ಬೆಳಕಿಗೆ ಬರುತ್ತದೆ. 150 ಕಿ.ಮೀ ಪ್ರತಿ ಗಂಟೆಗೆ ಬಾಲ್ ಹಾಕುವುದನ್ನು ನೋಡಿದಾಗ ಸಂತಸವಾಯಿತು ಎಂದಿದ್ದಾರೆ.
ಇದನ್ನೂ ಓದಿ:ಇಂದು ಮೊದಲ ಕ್ವಾಲಿಫೈಯರ್ ಪಂದ್ಯ: ಧೋನಿ-ಪಂತ್ ಪಡೆಗಳ “ಫೈನಲ್ ರೇಸ್’
ವೇಗದ ಬೌಲರ್ ಗಳ ಈ ಕೂಡವಿಕೆ ಭಾರತ ತಂಡದ ದೃಷ್ಟಿಯಿಂದ ಉತ್ತಮ ಸೂಚನೆ. ಇಂತಹ ಪ್ರತಿಭೆಗಳು ಕಂಡಾಗ ನಾವು ಅವರ ಮೇಲೊಂದು ಕಣ್ಣಿಟ್ಟಿರುತ್ತೇವೆ ಎಂದು ವಿರಾಟ್ ಹೇಳಿದ್ದರು.
21 ವರ್ಷದ ಉಮ್ರಾನ್ ಮಲಿಕ್ ಐಪಿಎಲ್ ಗೂ ಮೊದಲು ಕೇವಲ ಎರಡು ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯವಾಡಿದ್ದರು. ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೂ ನೆಟ್ ಬೌಲರ್ ಆಗಿ ಸೇರಿದ್ದ ಉಮ್ರಾನ್ ಮಲಿಕ್ ನಂತರ ತಂಡಲ್ಲಿ ಸ್ಥಾನ ಪಡೆದಿದ್ದರು. ಈ ಬಾರಿಯ ಐಪಿಎಲ್ ನಲ್ಲಿ ಅತೀ ವೇಗದ ಬಾಲ್ ಎಸೆದ ದಾಖಲೆ ಉಮ್ರಾನ್ ಹೆಸರಲ್ಲಿದೆ.