Advertisement

ಉಮ್ರ ಡೆವಲಪರ್ಸ್‌ ಮಾಲೀಕ ಯೂಸುಫ್ ಸೆರೆ

10:01 AM Apr 26, 2019 | Lakshmi GovindaRaju |

ಬೆಂಗಳೂರು: ಇಂದ್ರಪ್ರಸ್ಥ ಶೆಲ್ಟರ್ಸ್‌ ಪ್ರೈ.ಲಿ. ಕಂಪನಿಗೆ ಏಳು ಕೋಟಿ ರೂ. ವಂಚನೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಿಂಗ್‌ಹ್ಯಾಮ್‌ ರಸ್ತೆಯಲ್ಲಿರುವ ಉಮ್ರ ಡೆವಲಪರ್ಸ್‌ ಮಾಲೀಕ ಯೂಸೂಫ್ ಷರೀಫ್ ಅಲಿಯಾಸ್‌ ಡಿ. ಬಾಬುನನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.

Advertisement

ವಂಚನೆ ಪ್ರಕರಣ ಸಂಬಂಧ ಯೂಸೂಫ್ ಷರೀಫ್ ಕಚೇರಿ ಹಾಗೂ ಮನೆ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು, ಕೋಟ್ಯಂತರ ರೂ. ಮೌಲ್ಯದ ಸರ್ಕಾರಿ ಜಮೀನುಗಳ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿ ಯೂಸೂಫ್ ಷರೀಫ್ ಕೆಲ ವರ್ಷಗಳ ಹಿಂದೆ ಸರ್ಕಾರಿ ಸ್ವಾಮ್ಯದ ಹತ್ತಾರು ಎಕರೆ ಜಮೀನುಗಳನ್ನು ಖರೀದಿಸಿದ್ದ. ಈ ಸಂಬಂಧ 2011ರಲ್ಲಿ ಇಂದ್ರಪ್ರಸ್ಥ ಶೆಲ್ಟರ್‌ ಪ್ರೈ.ಲಿ ಕಂಪನಿಗೆ ಭೇಟಿ ನೀಡಿ, ಬೆಂಗಳೂರು, ಬಿದರಹಳ್ಳಿ ಹೋಬಳಿಯ ಕಿತ್ತಗನೂರು ಗ್ರಾಮದ ಸರ್ವೆ ನಂ 80ರ ಆರು ಎಕರೆ ಜಾಗವನ್ನು ಖರೀದಿಸಿದ್ದು, ಶೇ.25ರಷ್ಟು ಹಣವನ್ನು ಈಗಾಗಲೇ ಸರ್ಕಾರಕ್ಕೆ ಪಾವತಿ ಮಾಡಿದ್ದು, ಬಾಕಿ ಶೇ.75ರಷ್ಟು ಹಣವನ್ನು ಕಟ್ಟಬೇಕಿದೆ.

ಹೀಗಾಗಿ ಈ ಜಾಗವನ್ನು ಅಭಿವೃದ್ಧಿ ಪಡಿಸಲು ತಮಗೆ ನೀಡುವುದಾಗಿ ಕೇಳಿಕೊಂಡಿದ್ದ. ಆತನ ಮಾತು ನಂಬಿದ ಕಂಪನಿ ಅಭಿವೃದ್ಧಿ ಪಡಿಸಿ ನೀಡಲು ಪರಸ್ಪರ ಮಾತುಕತೆ ಮೂಲಕ ವಿವಿಧ ಹಂತದಲ್ಲಿ ಚೆಕ್‌ಗಳ ಮೂಲಕ ಏಳು ಕೋಟಿ ರೂ. ಹಣವನ್ನು ಆರೋಪಿಗೆ ನೀಡಿ ಒಪ್ಪಂದ ಕೂಡ ಮಾಡಿಕೊಂಡಿತ್ತು.

ಆದರೆ, ಈ ವಿಚಾರವನ್ನು ಮರೆಮಾಚಿದ ಆರೋಪಿ ಆ ಜಾಗದ ದಾಖಲೆಗಳನ್ನು ನಾಗರಾಜ್‌ ಎಂಬುವರ ಬಳಿ ಅಡಮಾನ ಇಟ್ಟು ಮೂರು ಕೋಟಿ ರೂ. ಸಾಲ ಪಡೆದುಕೊಂಡಿದ್ದ. ಅಲ್ಲದೆ, ಈ ಸಂಬಂಧ ಮಹಾದೇವಪುರ ಉಪನೊಂದಣಾಧಿಕಾರಿಗಳ ಕಚೇರಿಯಲ್ಲಿ ಅಡಮಾನ ಡೀಡ್‌ ಪ್ರಕ್ರಿಯೆ ಕೂಡ ಮಾಡಿಕೊಟ್ಟಿದ್ದ.

Advertisement

ಈ ವಿಚಾರ ತಿಳಿದ ಇಂದ್ರಪ್ರಸ್ಥ ಶೆಲ್ಟರ್‌ ಪ್ರೈ ಲಿ. ಕಂಪನಿ ಮಾಲೀಕ ಪ್ರಜ್ವಲ್‌ ಶನೇವಾ ಕೆಲ ದಿನಗಳ ಹಿಂದೆ ಅಶೋಕನಗರ ಪೊಲೀಸ್‌ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದರು. ಪ್ರಕರಣದ ಗಂಭೀರತೆ ಅರಿತ ನಗರ ಪೊಲೀಸ್‌ ಆಯುಕ್ತ ಟಿ.ಸುನಿಲ್‌ ಕುಮಾರ್‌ ಹೆಚ್ಚಿನ ತನಿಖೆಗಾಗಿ ಸಿಸಿಬಿಗೆ ಹಸ್ತಾಂತರಿಸಿದ್ದರು.

ಈ ಸಂಬಂಧ ಕ್ಷೀಪ್ರ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ನ್ಯಾಯಾಲದ ಅನುಮತಿ ಪಡೆದು ಆರೋಪಿ ಕಚೇರಿ ಹಾಗೂ ಮನೆ ಮೇಲೆ ದಾಳಿ ನಡೆಸಿದ್ದಾರೆ. ದಾಳಿ ಸಂದರ್ಭದಲ್ಲಿ ಆರೋಪಿ ಅದೇ ರೀತಿ ನಗರದಲ್ಲಿರುವ ಇತರೆ ಕಂಪನಿಗಳಿಗೂ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ನಗರದ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಹತ್ತಾರು ಪ್ರಕರಣಗಳು ಕೂಡ ದಾಖಲಾಗಿರುವುದು ತಿಳಿದು ಬಂದಿರುವುದಾಗಿ ಸಿಸಿಬಿ ಪೊಲೀಸರು ಹೇಳಿದರು.

400 ಕೋಟಿ ರೂ. ಹೆಚ್ಚು!: ಆರೋಪಿ ಕಚೇರಿಯಲ್ಲಿ ಕೋಟ್ಯಂತರ ರೂ. ಮೌಲ್ಯದ ಸರ್ಕಾರಿ ಜಮೀನುಗಳಿಗೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿವೆ. ಪ್ರಾಥಮಿಕ ಮಾಹಿತಿ ಪ್ರಕಾರ ಅವುಗಳ ಮೌಲ್ಯ 400 ಕೋಟಿ ರೂ. ಅಧಿಕ ಎಂದು ಅಂದಾಜಿಸಲಾಗಿದೆ. ಪರಿಶೀಲನೆ ಬಳಿಕ ಸ್ಪಷ್ಟತೆ ತಿಳಿಯಲಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next