Advertisement
60 ವರ್ಷದ ಆಕ್ಸೆನ್‌ಫೋರ್ಡ್ 2006 ರಿಂದ ಮೂರೂ ಮಾದರಿಗಳ ಕ್ರಿಕೆಟ್‌ನಲ್ಲಿ ಕರ್ತವ್ಯ ನಿಭಾಯಿಸುತ್ತ ಬಂದಿದ್ದರು. 2012ರಲ್ಲಿ ಐಸಿಸಿ ಎಲೈಟ್ ಪ್ಯಾನೆಲ್‌ಗೆ ಸೇರ್ಪಡೆಗೊಂಡಿದ್ದರು. ಇವರ ವೃತ್ತಿ ಬದುಕಿನ ಕೊನೆಯ ಪಂದ್ಯಕ್ಕೆ ಸಾಕ್ಷಿಯಾದದ್ದು ಭಾರತ-ಆಸ್ಟ್ರೇಲಿಯ ನಡುವೆ ಇತ್ತೀಚೆಗಷ್ಟೇ ಮುಗಿದ ಬ್ರಿಸ್ಬೇನ್ ಟೆಸ್ಟ್. ಆಸ್ಟ್ರೇಲಿಯ-ದಕ್ಷಿಣ ಆಫ್ರಿಕಾ ನಡುವೆ ಬ್ರಿಸ್ಬೇನ್‌ನಲ್ಲೇ ನಡೆದ 2006ರ ಟಿ20 ಪಂದ್ಯದಲ್ಲಿ ಮೊದಲ ಸಲ ತೀರ್ಪುಗಾರನಾಗಿ ಕಾಣಿಸಿಕೊಂಡಿದ್ದರು.
“ನನ್ನ ಅಂತಾರಾಷ್ಟ್ರೀಯ ಅಂಪಾಯರಿಂಗ್ ಬದುಕಿನತ್ತ ಹಿನ್ನೋಟ ಹರಿಸತೊಡಗಿದಾಗ ಅತ್ಯಂತ ಹೆಮ್ಮೆಯಾಗುತ್ತದೆ. 180ರಷ್ಟು ಪಂದ್ಯಗಳಲ್ಲಿ ಕರ್ತವ್ಯ ನಿಭಾಯಿಸಿದ್ದನ್ನು ನನ್ನಿಂದ ಇನ್ನೂ ನಂಬಲಾಗುತ್ತಿಲ್ಲ. ಇದೊಂದು ಸ್ಮರಣೀಯ ಹಾಗೂ ಸುದೀರ್ಘ ಪಯಣ ಎಂದೇ ಭಾವಿಸುತ್ತೇನೆ’ ಎಂದು ಆಕ್ಸೆನ್‌ಫೋರ್ಡ್ ಹೇಳಿದರು. ಕಳೆದ 3 ಏಕದಿನ ವಿಶ್ವಕಪ್ ಹಾಗೂ 3 ಟಿ20 ವಿಶ್ವಕಪ್ ಪಂದ್ಯಾವಳಿಗಳಲ್ಲಿ ಅಂಪಾಯರಿಂಗ್ ನಡೆಸಿದ್ದು ಆಕ್ಸೆನ್‌ಫೋರ್ಡ್ ಹೆಗ್ಗಳಿಕೆ. ಜತೆಗೆ 2012 ಮತ್ತು 2014ರ ವನಿತಾ ಟಿ20 ವಿಶ್ವಕಪ್ ಕೂಟಗಳಲ್ಲೂ ಇವರಿಗೆ ಅವಕಾಶ ಒದಗಿ ಬಂದಿತ್ತು. ಲೆಗ್ ಸ್ಪಿನ್ ಬೌಲರ್ ಆಗಿದ್ದ ಆಕ್ಸೆನ್‌ಫೋರ್ಡ್ ಅಂಪಾಯರಿಂಗ್ ಕ್ಷೇತ್ರಕ್ಕೆ ಕಾಲಿಡುವ ಮುನ್ನ ಕ್ವೀನ್ಸ್‌ಲ್ಯಾಂಡ್ ಪರ 8 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದರು.
Related Articles
Advertisement
ಅಂಪಾಯರ್ ವೃತ್ತಿಯಿಂದ ದೂರ ಸರಿದರೂ ಕ್ರಿಕೆಟ್ ಸೇವೆಯನ್ನು ಮುಂದುವರಿಸುವುದು ಆಕ್ಸೆನ್‌ಫೋರ್ಡ್ ಯೋಜನೆಯಾಗಿದೆ.