ನಾಗ್ಪುರ: ಭಾರತ ತಂಡದ ಪೇಸ್ ಬೌಲರ್ ಉಮೇಶ್ ಯಾದವ್ ಅವರ ಸರಕಾರಿ ನೌಕರಿಯ ಕನಸು ನನಸಾಗಿದೆ. ಅವರು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನಾಗ್ಪುರ ಶಾಖೆಯಲ್ಲಿ ಸಹಾಯಕ ಮ್ಯಾನೇಜರ್ ಆಗಿ ನೇಮಕಗೊಂಡಿದ್ದಾರೆ. ನ್ಪೋರ್ಟ್ಸ್ ಕೋಟಾದಡಿ ಈ ಉದ್ಯೋಗ ಲಭಿಸಿದೆ.
ಕಳೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗೂ ಮುನ್ನ ಉಮೇಶ್ ಯಾದವ್ ಆವರು ರಿಸರ್ವ್ ಬ್ಯಾಂಕ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಸೋಮವಾರ ಕೆಲಸದ ಆದೇಶ ಕೈಸೇರಿದೆ. ಆದರೆ ಆವರು ಶ್ರೀಲಂಕಾ ಪ್ರವಾಸಕ್ಕೆ ತೆರಳುವ ಗಡಿಬಿಡಿಯಲ್ಲಿದ್ದುದರಿಂದ ಹುದ್ದೆಗೆ ಸಂಬಂಧಿಸಿದ ವಿಧಿವಿಧಾನಗಳನ್ನು ಪೂರ್ತಿಗೊಳಿಸಿಲ್ಲ ಎಂದು ಬ್ಯಾಂಕಿನ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಉಮೇಶ್ ಯಾದವ್‌ಗೆ ಸರಕಾರಿ ಕೆಲಸ ಸಿಕ್ಕಿರುವುದು ಅವರ ತಂದೆ ತಿಲಕ್ ಯಾದವ್‌ಗೆ ಅತೀವ ಸಂತೋಷ ತಂದಿದೆ. ಮಗನಿಗೆ ಸರಕಾರಿ ಕೆಲಸ ಸಿಗಬೇಕೆಂಬುದು ಅವರ ದೀರ್ಘ ಕಾಲದ ಕನಸಾಗಿತ್ತು. ಕೆಲವು ವರ್ಷಗಳ ಹಿಂದೆ ಉಮೇಶ್ ಯಾದವ್ ಪೊಲೀಸ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಆದರೆ ಈ ಕೆಲಸ ಅವರಿಗೆ ಲಭಿಸಲಿಲ್ಲ.
ಯಾದವ್ ನಿವಾಸದಲ್ಲಿ ಕಳ್ಳತನ!
ರಿಸರ್ವ್ ಬ್ಯಾಂಕ್ ಉದ್ಯೋಗದ ಆದೇಶದ ಪ್ರತಿ ಉಮೇಶ್ ಯಾದವ್ ಕೈಸೇರಿದ ಕೆಲವೇ ಗಂಟೆಗಳಲ್ಲಿ ಅವರ ಕುಟುಂಬಕ್ಕೆ ಆಘಾತಕಾರಿ ಸುದ್ದಿಯೊಂದು ಬಂದೆರಗಿದೆ. ಅವರ ನಾಗ್ಪುರ ನಿವಾಸದಲ್ಲಿ (ಫ್ಲ್ಯಾಟ್)ಸೋಮವಾರ ರಾತ್ರಿ ಕಳ್ಳತನ ಸಂಭವಿಸಿದೆ!
45 ಸಾವಿರ ರೂ.ಗಳಷ್ಟು ನಗದು ಹಾಗೂ 2 ಮೊಬೈಲ್ ಫೋನ್‌ಗಳನ್ನು ಕಳ್ಳರು ಹೊತ್ತೂಯ್ದಿದ್ದಾರೆ. ಎರಡೂ ಫೋನ್‌ಗಳು ಯಾದವ್ ಅವರ ತಾಯಿಯದ್ದಾಗಿದೆ. ಕಳ್ಳತನ ನಡೆದ ವೇಳೆ ಉಮೇಶ್ ಯಾದವ್ ಮನೆಯಲ್ಲಿ ಯಾರೂ ಇರಲಿಲ್ಲ. ಸಂಜೆ 7ರ ವೇಳೆ ಹೊರಗೆ ಹೋದ ಕುಟುಂಬದ ಸದಸ್ಯರು ಬೆಳಗಿನ ಜಾವ 3 ಗಂಟೆಗೆ ವಾಪಸಾದಾಗ ಘಟನೆ ಅರಿವಿಗೆ ಬಂದಿದೆ. ಅಂಬಾಝರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಶಂಕಿತ ಇಬ್ಬರನ್ನು ವಶಕ್ಕೆ ತೆಗೆದು ಕೊಳ್ಳಲಾಗಿದೆ. ಲಕ್ಷ್ಮೀನಗರ ವಠಾರದ ಫ್ಲ್ಯಾಟ್‌ನ 9ನೇ ಮಹಡಿಯಲ್ಲಿ ಯಾದವ್ ಕುಟುಂಬ ವಾಸಿಸುತ್ತಿತ್ತು.