Advertisement
ಇತ್ತೀಚೆಗೆ ಪ್ರತಿಬಾರಿ ಬ್ಯಾಟ್ಸ್‌ಮನ್ ಔಟಾದಾಗ ಬೌಲರ್ ಎಸೆತ ಸರಿಯಾಗಿದೆಯೇ, ನೋಬಾಲ್ ಆಗಿದೆಯೇ ಎಂದು ಪರಿಶೀಲಿಸಲು ತೃತೀಯ ಅಂಪಾಯರ್‌ಗೆ ಮೈದಾನದ ಅಂಪಾಯರ್ ಸನ್ನೆ ಮಾಡುತ್ತಾರೆ. ಆರ್‌ಸಿಬಿ ಇನಿಂಗ್ಸ್‌ನ 18ನೇ ಓವರ್‌ನಲ್ಲಿ ಉಮೇಶ್ ಯಾದವ್ ಔಟಾದಾಗ ಬೌಲರ್ ಬುಮ್ರಾ ಪಾದಚಲನೆ ಸರಿಯಾಗಿದೆಯೇ ಎಂದು ತಿಳಿಯಲು ಅಂಪಾಯರ್ ಅದನ್ನು ತೃತೀಯ ಅಂಪಾಯರ್‌ಗೆ ಶಿಫಾರಸು ಮಾಡಿದ್ದರು. ಆದರೆ ತೃತೀಯ ಅಂಪಾಯರ್‌ಗೆ ಸಿಕ್ಕ ದೃಶ್ಯಾವಳಿಯೇ ಬೇರೆ. ಇದೀಗ ಐಪಿಎಲ್ ಸಂಘಟಕರ ಗಮನಕ್ಕೆ ಬಂದಿದ್ದು ಚರ್ಚೆಗೆ ಕಾರಣವಾಗಿದೆ.
ಮುಂಬೈ ನೀಡಿದ 214 ರನ್ ಗುರಿ ಬೆನ್ನತ್ತುವಾಗ ಆರ್‌ಸಿಬಿ ಕುಸಿತ ಅನುಭವಿಸಿತ್ತು. ಅದಕ್ಕೆ 13 ಎಸೆತದಲ್ಲಿ 77 ರನ್ ಬೇಕಿತ್ತು. ಆಗ ವೇಗಿ ಜಸ್‌ಪ್ರೀತ್ ಬುಮ್ರಾ ಎಸೆತದಲ್ಲಿ ಉಮೇಶ್ ಯಾದವ್ ರೋಹಿತ್ ಶರ್ಮಾಗೆ ಕ್ಯಾಚ್ ನೀಡಿದರು. ಈ ವೇಳೆ ಬುಮ್ರಾ ಬೌಲ್ ಮಾಡುವಾಗ ಪಾದ ಗೆರೆ ದಾಟಿದೆಯೇ ಎಂದು ಅಂಪಾಯರ್ ಪರಿಶೀಲಿಸಲು ಬಯಸಿದರು. ಅಲ್ಲಿ ಸಂಭವಿಸಿದ್ದು ಮಾತ್ರ ವಿಚಿತ್ರ. ದೃಶ್ಯಾವಳಿಯಲ್ಲಿ ಬುಮ್ರಾ ಬೌಲಿಂಗ್ ಮಾಡುವ ತುದಿಯಲ್ಲಿ ಬ್ಯಾಟ್ಸ್‌ಮನ್ ಉಮೇಶ್ ಯಾದವ್ ಕಾಣಿಸಿದ್ದಾರೆ. ವಾಸ್ತವವಾಗಿ ಉಮೇಶ್ ಇರಬೇಕಾಗಿದ್ದು ಬ್ಯಾಟಿಂಗ್ ತುದಿಯಲ್ಲಿ. ಅವರು ಬೌಲಿಂಗ್ ತುದಿಯಲ್ಲಿ ಕಂಡಿದ್ದು ಹೇಗೆ ಎನ್ನುವುದು ಎಲ್ಲರ ಪ್ರಶ್ನೆಯಾಗಿತ್ತು. ಈ ತಪ್ಪಿಗೆ ಕಾರಣವೇನು?
ಇಲ್ಲಿ ಈ ದೃಶ್ಯಾವಳಿಯನ್ನು ತೃತೀಯ ಅಂಪಾಯರ್‌ಗೆ ಪೂರೈಸಿದ ವ್ಯಕ್ತಿಯದ್ದೇ ತಪ್ಪು ಎಂದು ತಿಳಿದುಬಂದಿದೆ. ಈ ವೀಡಿಯೋ ಪೂರೈಸುವ ಕಂಪ್ಯೂಟರ್ ಟಚ್‌ಪ್ಯಾಡ್ ಅತ್ಯಂತ ಸೂಕ್ಷ್ಮವಾಗಿರುತ್ತದೆ. ಒಂದು ವೇಳೆ ತಪ್ಪಿ 2 ಬಾರಿ ಪ್ಯಾಡ್ ಒತ್ತಿದರೆ ದೃಶ್ಯಾವಳಿ ಒಂದು ಎಸೆತ ಹಿಂದಕ್ಕೆ ಎಗರುತ್ತದೆ. ಇಲ್ಲೂ ಹಾಗೆಯೇ ಆಗಿದೆ. ಉಮೇಶ್ ಬ್ಯಾಟಿಂಗ್ ಮಾಡುವಾಗ ಬೌಲರ್ ಬುಮ್ರಾ ಪಾದಚಲನೆ ಕಾಣಿಸಿಬೇಕಾಗಿದ್ದರ ಬದಲು, ಕೊಹ್ಲಿ ಬ್ಯಾಟಿಂಗ್ ಮಾಡುವಾಗ, ಉಮೇಶ್ ಬೌಲಿಂಗ್ ತುದಿಯಲ್ಲಿರುವಾಗಿನ ಬುಮ್ರಾ ಪಾದಚಲನೆ ಕಾಣಿಸಿದೆ!
Related Articles
Advertisement
ಹಿಂದೆಯೂ ಇಂಥ ಘಟನೆ ನಡೆದಿದೆ!2011ರ ಐಪಿಎಲ್‌ನಲ್ಲಿ ಅಮಿತ್ ಮಿಶ್ರಾ ಎಸೆತದಲ್ಲಿ ಸಚಿನ್ ತೆಂಡುಲ್ಕರ್ ಔಟಾಗಿದ್ದರು. ಆಗ ಅಮಿತ್ ಮಿಶ್ರಾ ಪಾದಚಲನೆ ಪತ್ತೆ ಹಚ್ಚಲು ತೃತೀಯ ಅಂಪಾಯರ್‌ಗೆ ಶಿಫಾರಸು ಮಾಡಲಾಗಿತ್ತು. ಆಗಿನ ಟೀವಿ ರಿಪ್ಲೇ ವೀಡಿಯೋದಲ್ಲಿ ಬ್ಯಾಟಿಂಗ್ ತುದಿಯಲ್ಲಿರಬೇಕಾಗಿದ್ದ ತೆಂಡುಲ್ಕರ್, ಬೌಲಿಂಗ್ ತುದಿಯಲ್ಲಿ ಅಮಿತ್ ಮಿಶ್ರಾ ಜತೆ ಕಾಣಿಸಿಕೊಂಡಿದ್ದರು. ಅದೇ ವರ್ಷ ಒಂದು ತಿಂಗಳ ಅನಂತರ ವೆಸ್ಟ್ ಇಂಡೀಸ್‌ನಲ್ಲಿ ಕ್ರಿಕೆಟ್ ಸರಣಿ ನಡೆದಿತ್ತು. ಆಗ ವಿಂಡೀಸ್‌ನ ಫಿಡೆಲ್ ಎಡ್ವರ್ಡ್ಸ್ ಎಸೆತದಲ್ಲಿ ಧೋನಿ ಔಟಾಗಿದ್ದರು. ಆಗಲೂ ಧೋನಿ ಬೌಲಿಂಗ್ ತುದಿಯಲ್ಲಿದ್ದ ವೀಡಿಯೋ ಪತ್ತೆಯಾಗಿತ್ತು.