ಬೆಳಗಾವಿ: ಹಿರಿಯರಾಗಿರುವ ಉಮೇಶ ಕತ್ತಿ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಬೇಕೆಂಬ ಒತ್ತಾಯ ನಮ್ಮದು ಮೊದಲಿನಿಂದಲೂ ಇದೆ. ಜತೆಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರನ್ನಾಗಿ ರಮೇಶ ಕತ್ತಿಯನ್ನೇ ಮಾಡಬೇಕು ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು ಕತ್ತಿ ಸಹೋದರರ ಪರ ಬ್ಯಾಟಿಂಗ್ ಮಾಡಿದರು.
ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉಮೇಶ ಕತ್ತಿ ಅವರನ್ನು ಸಚಿವರನ್ನಾಗಿ ಮಾಡಿದರೆ ಒಳ್ಳೆಯದು ಅಂತ ಹೇಳಿದ್ದೇನೆ. ಜತೆಗೆ ಮಾತು ಕೊಟ್ಟಂತೆ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರನ್ನಾಗಿ ರಮೇಶ ಕತ್ತಿ ಅವರನ್ನು ಮಾಡಬೇಕೆಂಬ ಅಭಿಲಾಷೆ ಇದೆ. ಇದಕ್ಕೆ ನಾನು ಈಗಲೂ ಬದ್ಧ ಎಂದರು.
ಸಂಪುಟ ಪುನಾರಚನೆಯಲ್ಲಿ ಮುಖ್ಯಮಂತ್ರಿಗಳಿಗೆ ಪರಮಾಧಿಕಾರವಿದೆ ಈ ಬಗ್ಗೆ ಮುಖ್ಯಮಂತ್ರಿಗಳು ನಿರ್ಧಾರ ತೆಗೆದುಕೊಳ್ಳುತ್ತಾರೆ. ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧ. ಸಂಪುಟ ಸಭೆ ಇದ್ದಿದ್ದರಿಂದ ಕೆಲವು ಶಾಸಕರು ನನ್ನ ಭೇಟಿಗೆ ಬಂದಿದ್ದರು. ಇಲಾಖೆಯ ಕಾಮಗಾರಿ ಕುರಿತು ಚರ್ಚಿಸಿದ್ದಾರೆ. ಮೊದಲಿನಿಂದಲೂ ನಮ್ಮ ನಿವಾಸಕ್ಕೆ ಅನೇಕ ಶಾಸಕರು ಬಂದು ಚಹಾ ಕುಟಿದು, ಊಟ ಮಾಡಿ ಹೋಗುವುದು ಸಾಮಾನ್ಯ. ಈಗಾಲೇ ನಾನು ದೊಡ್ಡ ಇಲಾಖೆಯ ಜವಾಬ್ದಾರಿ ಹೊಂದಿದ್ದೇನೆ. ಬೇರೆಯವರಿಗೆ ಸಚಿವ ಸ್ಥಾನ ಕೊಡಿಸುವ ಜವಾಬ್ದಾರಿ ತೆಗೆದುಕೊಳ್ಳುತ್ತಿಲ್ಲ ಎಂದರು.
ಇದನ್ನೂ ಓದಿ:ರಾಜ್ಯದಲ್ಲಿ ಪ್ರಾಥಮಿಕ ಅರೋಗ್ಯ ಕೇಂದ್ರಗಳು 24 ಗಂಟೆಯೂ ಕಾರ್ಯ ನಿರ್ವಹಿಸಲಿವೆ :ಸಚಿವ ಸುಧಾಕರ್
ನನ್ನ ಮೇಲೆ ಗೌರವ ಇರುವುದಕ್ಕೆ ಕೆಲವರು ನನ್ನ ಬಳಿ ಬರುತ್ತಿರುತ್ತಾರೆ. ಎಲ್ಲದರಲ್ಲೂ ಭಾಗಿಯಾಗಬಾರದು. ಇತಿಮಿತಿಯಲ್ಲಿ ಕೆಲಸ ಮಾಡಬೇಕು. ಸಚಿವ ಸಂಪುಟ ವಿಸ್ತರಣೆಯಲ್ಲಿ ಯಾರ ಪರವಾಗಿಯೂ ವಕಾಲತ್ತು ವಹಿಸುವುದಿಲ್ಲ ಎಂದು ರಮೇಶ ಜಾರಕಿಹೊಳಿ ಸ್ಪಷ್ಟಪಡಿಸಿದರು.
ಶಿರಾ, ಆರ್‌ಆರ್ ನಗರ ಚುನಾವಣೆಯಲ್ಲಿ ಬಿಜೆಪಿ ಹಣದ ಹೊಳೆಯನ್ನು ಹರಿಸಿರುವ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಆರೋಪಕ್ಕೆ ಪ್ರಿತಿಕ್ರಿಯಿಸಿದ ರಮೇಶ ಜಾರಕಿಹೊಳಿ, ಈ ಬಗ್ಗೆ ಕಮೆಂಟ್ ಮಾಡುವುದು ಬೇಡ. ದೇವರು ಒಳ್ಳೆಯದು ಮಾಡಲಿ. ನಮ್ಮ ಪಕ್ಷ ದೇಶದೆಲ್ಲೆಡೆ ಯಶಸ್ವಿಯಾಗಿ ಬೆಳೆಯುತ್ತಿದೆ. ಇವಿಎಂ ತಪ್ಪಾಗಿದ್ದಿದ್ದರೆ ಕಳೆದ ಸಲ ಕಾಂಗ್ರೆಸ್ ನಲ್ಲಿದ್ದಾಗ ನಾನು ಗೋಕಾಕ ಕ್ಷೇತ್ರದಿಂದ ಸೋತು ಮಾಜಿ ಶಾಸಕ ಆಗುತ್ತಿದ್ದೆ ಎಂದರು.