Advertisement

Poll: ಸಚಿವ ಆಗಬೇಕೆಂದಿದ್ದ ಉಮೇಶ ಜಾಧವ್‌ ಖರ್ಗೆ ವಿರುದ್ದ ಗೆದ್ದು ಎಂಪಿ ಆದದ್ದೇ ರೋಚಕ

03:36 PM Apr 03, 2024 | Team Udayavani |

ಉದಯವಾಣಿ ಸಮಾಚಾರ
ಕಲಬುರಗಿ: ಅದೃಷ್ಟ ಮತ್ತು ಸಮಯ ಯಾರನ್ನು ಹೇಗೆ ಬದಲಿಸುತ್ತವೆ ಎನ್ನುವುದು ಲೆಕ್ಕಾಚಾರಕ್ಕೆ ಸಿಗಲ್ಲ. ಅಚಾನಕ್‌ ಆಗಿ ಜಾತಿ ಬಲದಿಂದ ಚಿಂಚೋಳಿ ಶಾಸಕರಾಗಿದ್ದ ಡಾ|ಉಮೇಶ ಜಾಧವ್‌, ತಮ್ಮ ರಾಜಕೀಯ ಗುರು ಡಾ|ಮಲ್ಲಿಕಾರ್ಜುನ ಖರ್ಗೆ ಅವರಿಗೆ ತಿರುಗೇಟು ಕೊಡುವಷ್ಟು ಬೆಳೆದು ನಿಂತದ್ದೇ ರೋಚಕ ಕಹಾನಿ.

Advertisement

ಇದಕ್ಕೇ ಸಮಯ ಎನ್ನುವುದು. ಸಿದ್ದರಾಮಯ್ಯ ಸರ್ಕಾರದಲ್ಲಿ ಮಂತ್ರಿಯಾಗಬೇಕೆಂದು ಓಡಾಡಿಕೊಂಡು ಅಗಷ್ಟೇ ಖರ್ಗೆ ಅಖಾಡದಿಂದ ಸಿದ್ದು ಅಖಾಡದಲ್ಲಿ ಸಣ್ಣಗೆ ಗುರುತು ಮಾಡಿಕೊಳ್ಳುತ್ತಿದ್ದ ಕಾಲವದು. ಇನ್ನೊಂದೆಡೆ ರಾಜ್ಯದಲ್ಲಿ ಆಪರೇಷನ್‌ ಕಮಲ ದಾಂಗುಡಿ ಶುರುವಾಗಿತ್ತು. ಇದಕ್ಕೇನಾದರೂ ಜಾಧವ್‌ ಸಿಕ್ಕಿಕೊಂಡಾರು ಎನ್ನುವ ಕಾರಣಕ್ಕಾಗಿಯೇ ಸಿದ್ದರಾಮಯ್ಯ ರಾಜಕೀಯ ಕಾರ್ಯದರ್ಶಿ ಹುದ್ದೆ ಕೊಟ್ಟು ತಣ್ಣಗೆ ಮಾಡಿದ್ದರು. ಆದರೆ, ಸಿದ್ದರಾಮಯ್ಯ ಲೆಕ್ಕಾಚಾರವೂ ತಲೆಕೆಳಗಾಗಿತ್ತು.

ಜಾಧವ್‌ ಬಾಂಬೆ ಸೇರಿಕೊಂಡಿದ್ದರು. 17 ಜನ ಸಿಡಿದೆದ್ದ ಶಾಸಕರ ಗುಂಪಿನಲ್ಲಿ ಕಲಬುರಗಿಯ ಚಿಂಚೋಳಿ ಶಾಸಕ ಜಾಧವ್‌ ಗುರುತಿಸಿಕೊಂಡು ಮೊಟ್ಟ ಮೊದಲ ಬಾರಿಗೆ ಆಪರೇಷನ್‌ ಕಮಲದ ಸದ್ದು ಕಲ್ಯಾಣದಲ್ಲಿ ಕೇಳಿಸುವಂತೆ ಮಾಡಿದ್ದರು.

ಗುರುಪುತ್ರನ ಆರೋಪದ ಕಿಚ್ಚು: 17 ಶಾಸಕರು ಬಂಡೇಳುತ್ತಿದ್ದಂತೆ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರ್ಕಾರ ಆಪರೇಷನ್‌ ಕಮಲದ ಹೊಡೆತಕ್ಕೆ ಅಲುಗಾಡಿತು. ಈ ವೇಳೆ ಗುರುವಿನ ಪುತ್ರ ಪ್ರಿಯಾಂಕ್‌ ಖರ್ಗೆ ಜಾಧವ್‌ ವಿರುದ್ಧ ಗಂಭೀರ ಆರೋಪ ಮಾಡಿದರು. ಚಿಂಚೋಳಿ ಶಾಸಕರು ಮಾರಾಟವಾಗಿದ್ದಾರೆ, 50 ಕೋಟಿ ರೂ. ಸಂದಾಯವಾಗಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ ಎಂದೂ ಆರೋಪಿಸಿದರು.

ಇದು ಜಾಧವ್‌ ಅವರನ್ನು ತುಂಬಾ ಗೀಳಿಗೆ ಕೆಡವಿತು. ತಮ್ಮನ್ನು ವಿರೋಧಿಸುವವರಿಗೆ ಪೆಟ್ಟು ಕೊಡಬೇಕು ಎನ್ನುವ ಕಾರಣಕ್ಕೆ ಬಿಜೆಪಿ ಗುಂಪಿನಲ್ಲಿ ಕಾಣಿಸಿಕೊಂಡಿದ್ದ ಜಾಧವ್‌, ತಮಗೇ ಆರಿವಿಲ್ಲದಂತೆ ನಡೆಯುತ್ತಿರುವ ಘಟನಾವಳಿಗಳ ಸಮೇತ ಜಾರಿ ಹೋದರು. ಹಾಗೆ ಜಾರಿದ್ದರ ಫಲವೇ ಕಾಲಡಿಯಲ್ಲೇ ಇದ್ದ ಲೋಕಸಭೆ ಚುನಾವಣೆಯಲ್ಲಿ ಗುರುವಿಗೆ ಎದುರಾಳಿಯಾಗಿ ನಿಲ್ಲುವಂತೆ ಬಿಜೆಪಿ ಆಫರ್‌ ಕೊಟ್ಟಿತು. ಚಿಂಚೋಳಿ ಬಿಟ್ಟು ಕೊಡದ, ಲೋಕಸಭೆಯಲ್ಲಿ ಖರ್ಗೆಯನ್ನು ಕೆಡವಿ ತಮ್ಮ ವಿರುದ್ಧ ಮಾಡಿದ್ದ ಆರೋಪಗಳಿಗೆ ಉತ್ತರ ಕೊಡಬೇಕು ಎನ್ನುವ ಆಲೋಚನೆಯಲ್ಲಿದ್ದ ಜಾಧವ್‌ ಆಫರ್‌ ಸ್ವೀಕರಿಸಿದರು. ಅದೃಷ್ಟ ಎನ್ನುವಂತೆ ಘಟಾನುಘಟಿ ಖರ್ಗೆ ಎದುರು ಲಂಬಾಣಿ ಜಾತಿ ಬಲದಿಂದ, ದಲಿತರ ಮೌನದಿಂದ ಗೆದ್ದು ಬಂದದ್ದು ಈಗ ಇತಿಹಾಸ.

Advertisement

ಅದೃಷ್ಟ ಜಾಧವ್‌ ಕಡೆ-ಓವರ್‌ ಕಾನ್ಫಿಡೆನ್ಸ್‌ ಖರ್ಗೆ ಕಡೆ
ಜಾಧವ್‌ ಎದುರು ನಮ್ಮ ಖರ್ಗೆ ಸಾಹೇಬರು ಮನೆಯಲ್ಲಿ ಕುಳಿತೇ ಗೆದ್ದು ಬರುತ್ತಾರೆ ಎನ್ನುವ ಕಾಂಗ್ರೆಸ್‌ ಎಲ್ಲ ನಾಯಕರ ಓವರ್‌ ಕಾನ್ಫಿಡೆನ್ಸೇ ಸೋಲಿಗೆ ಕಾರಣವಾದರೆ, ಸಮಯ ತಂದು ಕೊಟ್ಟ ಅವಕಾಶಕ್ಕೆ ಅದೃಷ್ಟ ಕೈ ಹಿಡಿದ ಪರಿಣಾಮ ರಾಜ್ಯದಲ್ಲಿ ಮಿನಿಸ್ಟರ್‌ ಆಗಬೇಕೆಂದು ಕನಸು ಕಂಡಿದ್ದ ಡಾ|ಉಮೇಶ ಜಾಧವ್‌ ಸಂಸದರಾಗಿ ದೇಶದಲ್ಲಿ ಹೆಸರು ಮಾಡಿದರು. ಆಗ
ಗುರುವನ್ನು ಸೋಲಿಸಿದ್ದ ಜಾಧವ್‌ಗೆ ಈಗ ಗುರುವಿನ ಅಳಿಯ ರಾಧಾಕೃಷ್ಣ ದೊಡ್ಡಮನಿ ಎದುರಾಳಿ. ಈಗಂತೂ ಕಾಂಗ್ರೆಸ್‌
ರಾಧಾಕೃಷ್ಣರನ್ನು ಶತಾಯ ಗತಾಯ ಗೆಲ್ಲಿಸಲು ಪಣ ತೊಟ್ಟು ನಿಂತಿದೆ.

ಪ್ರಿಯಾಂಕ್‌ ಬೆಂಕಿ ಉಗುಳುತ್ತಾ, ಸರ್ಕಾರದ ಸಾಧನೆಗಳನ್ನು ಹೇಳುತ್ತಾ ಮತ ಕೇಳುತ್ತಿದ್ದರೆ, ಇನ್ನೊಬ್ಬ ಸಚಿವ ಹಾಗೂ ಅಪ್ಪಟ ಶಿಷ್ಯ ಡಾ|ಶರಣಪ್ರಕಾಶ ಪಾಟೀಲ, ಅಭ್ಯರ್ಥಿಯ ಸರಳ ಜೀವನ, ವಿಧೇಯತೆ ಮತ್ತು ಕೆಲಸದ ನಿಷ್ಠೆ, ದೊಡ್ಡ ಖರ್ಗೆ ಅವರ ಕೆಲಸಗಳನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿದ್ದಾರೆ. ಉಳಿದೆಲ್ಲ ಶಾಸಕರು, ವಿಧಾನ ಪರಿಷತ್‌ ಸದಸ್ಯರು ಥರೇವಾರಿಯಾಗಿ ಮತ ಕೇಳುತ್ತಿದ್ದಾರೆ. ಈ ಕಡೆ ಬಿಜೆಪಿಯ ಜಾಧವ್‌ ಮಾತ್ರ ಬಿಟ್ಟು ಬಿಡದೆ ಮೇಲ್ವರ್ಗದ ಎಲ್ಲ ಮಠ, ದೇವಸ್ಥಾನ, ಸ್ವಾಮೀಜಿಗಳ ಬಳಿ ಹೋಗಿ ಆಶೀರ್ವಾದ ಕೇಳುತ್ತಿದ್ದಾರೆ. ಬಿಜೆಪಿಯಲ್ಲಿ ಬೇಗುದಿಯೂ ಇದೆ. ಅದರ ಕಾವು ಎಷ್ಟು ನುಂಗಿ ಮತಗಳಾಗಿಸಿಕೊಳ್ಳುತ್ತವೋ ಕಾಯ್ದು ನೋಡಬೇಕು. ಏಕೆಂದರೆ ಮೋದಿ ಗಾಳಿ ಬಿಸಿಗಾಳಿಯಾಗಿ ಪರಿವರ್ತನೆಯಾದ ಕಾಲವಿದು.

*ಸೂರ್ಯಕಾಂತ್‌ ಎಂ.ಜಮಾದಾರ

Advertisement

Udayavani is now on Telegram. Click here to join our channel and stay updated with the latest news.

Next