Advertisement

ಉಮೇಶ ಜಾಧವ ಬಿಜೆಪಿ ಸೇರ್ಪಡೆಗೆ ಸಿದ್ಧತೆ?

07:02 AM Jan 14, 2019 | |

ಚಿಂಚೋಳಿ: ಸಚಿವ ಸ್ಥಾನ ಸಿಗಲಿಲ್ಲವೆಂದು ನಿರಾಶರಾಗಿ ಕಾಂಗ್ರೆಸ್‌ ಹೈಕಮಾಂಡ್‌ ವಿರುದ್ಧ ಮುನಿಸಿಕೊಂಡು ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಸ್ಥಾನದ ಅಧಿಕಾರ ವಹಿಸಿಕೊಳ್ಳದೆ ದೂರವುಳಿದಿರುವ ಶಾಸಕ ಡಾ| ಉಮೇಶ ಜಾಧವ, ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿದ್ದಾರೆ ಎನ್ನುವ ಮಾತು ಬಲವಾಗಿ ಕೇಳಿ ಬರುತ್ತಿದೆ.

Advertisement

ಮೀಸಲು ಚಿಂಚೋಳಿ ವಿಧಾನಸಭೆ ಕ್ಷೇತ್ರದಿಂದ ಎರಡು ಸಲ ಶಾಸಕರಾಗಿ ಆಯ್ಕೆಯಾದರೂ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟದಲ್ಲಿ ತಮ್ಮನ್ನು ಕಡೆಗಣಿಸಲಾಗಿದೆ ಎನ್ನುವ ಅಸಮಧಾನ ಉಮೇಶ ಜಾಧವ ಅವರಲ್ಲಿದೆ.

ಹಿಂದುಳಿದ ಮೀಸಲು ಚಿಂಚೋಳಿ ವಿಧಾನಸಭೆ ಕ್ಷೇತ್ರದಿಂದ 2013ರಲ್ಲಿ ಕಾಂಗ್ರೆಸ್‌ನಿಂದ ಮೊದಲ ಬಾರಿಗೆ ಟಿಕೆಟ್ ಪಡೆದುಕೊಂಡು 26,060 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿ, ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಸದೀಯ ಕಾರ್ಯದರ್ಶಿಯಾಗಿದ್ದರು.

2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು 19,212 ಮತಗಳ ಅಂತರದಿಂದ ಸೋಲಿಸುವ ಮೂಲಕ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಗೊಂಡಿದ್ದರು. ಹೀಗಾಗಿ, ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗಲಿದೆ ಎನ್ನುವ ವಿಶ್ವಾಸ ಶಾಸಕರಿಗೆ ಹಾಗೂ ಅವರ ಬೆಂಬಲಿಗರಿಗಿತ್ತು.

ಸೆಪ್ಟೆಂಬರ್‌ನಲ್ಲಿ ದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಅಮಿತ್‌ ಶಾ, ರಾಜನಾಥ ಸಿಂಗ್‌, ಬಸವರಾಜ ಪಾಟೀಲ ಸೇಡಂ, ಭಗವಂತ ಖೂಬಾ, ವೆಂಕಯ್ಯ ನಾಯ್ದು, ದಿ| ಅನಂತಕುಮಾರ, ಕೇಂದ್ರ ಸಚಿವರಾದ ಸದಾನಂದಗೌಡ ಇನ್ನಿತರರನ್ನು ರಹಸ್ಯವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಆಗಲು ಸಮಯಾವಕಾಶ ಸಿಗದ ಕಾರಣ ಬೆಂಗಳೂರಿಗೆ ಮರಳಿದ್ದರು ಎಂದು ಪಕ್ಷದ ಕೆಲವು ಮುಖಂಡರಲ್ಲಿ ಚರ್ಚೆ ನಡೆದಿತ್ತು.

Advertisement

ನಂತರ ಸಚಿವ ಸ್ಥಾನ ಸಿಗದೆ ಅತೃಪ್ತರಾಗಿರುವ ಉಮೇಶ ಜಾಧವರನ್ನು ರಾಜ್ಯ ಉಗ್ರಾಣ ನಿಗಮಕ್ಕೆ ಅಧ್ಯಕ್ಷರನ್ನಾಗಿ ನೇಮಕಗೊಳಿಸಲಾಗಿತ್ತು. ಈ ಸ್ಥಾನಕ್ಕೆ ಅಧಿಕಾರ ವಹಿಸಿಕೊಳ್ಳುವುದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಬಹಿರಂಗ ಹೇಳಿಕೆಯನ್ನೂ ನೀಡಿದ್ದರು.

ಮಲ್ಲಿಕಾರ್ಜುನ ಖರ್ಗೆ ಮನಸ್ಸು ಮಾಡಿದರೆ ಸಚಿವ ಸ್ಥಾನ ಸಿಗುತ್ತಿತ್ತು. ಅವರು ಈ ಕುರಿತಂತೆ ರಾಹುಲ್‌ ಗಾಂಧಿ, ಪರಮೇಶ್ವರ, ವೇಣುಗೋಪಾಲ ಅವರ ಮೇಲೆ ಯಾವುದೇ ಒತ್ತಡ ಹಾಕಲಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಅವರ ಆಪ್ತರು ತಿಳಿಸಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ಖರ್ಗೆ ಗೆಲುವು ಸಾಧಿಸಬೇಕಾದರೆ ನನಗೆ ಸಚಿವ ಸ್ಥಾನ ಕೊಡಿಸಲೇಬೇಕು. ಬಂಜಾರಾ ಸಮಾಜದ ಮತಗಳು ಕಾಂಗ್ರೆಸ್‌ಗೆ ಅತ್ಯವಶ್ಯಕವಾಗಿವೆ ಎನ್ನುವ ಅಭಿಪ್ರಾಯವನ್ನು ಕಾರ್ಯಕರ್ತರೆದುರು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಕೆಲಸಗಳು ಆಗುತ್ತಿಲ್ಲ. ಮಹತ್ವದ ಹೈದ್ರಾಬಾದ್‌ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ ಕಳೆದ ಒಂದು ವರ್ಷದಿಂದ ಯಾವುದೇ ಸಭೆ ಆಗಿಲ್ಲ. ಜನರು ಕೆಲಸ ಕೇಳುತ್ತಿದ್ದಾರೆ. ಯಾವ ಕೆಲಸವೂ ಸರ್ಕಾರಿ ಮಟ್ಟದಲ್ಲಿ ಆಗುತ್ತಿಲ್ಲ. ಅಸಮಾಧಾನವಿದೆ. ಸಹೋದರ ಡಾ.ಉಮೇಶ ಜಾಧವ ಅವರು ಕಾಂಗ್ರೆಸ್‌ ಬಿಡುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ. ಅವರು ಬೆಂಗಳೂರಿನಲ್ಲಿದ್ದಾರೆ. 
 ರಾಮಚಂದ್ರ ಜಾಧವ, ಶಾಸಕ ಡಾ| ಉಮೇಶ ಜಾಧವ ಸಹೋದರ, ಕಾಂಗ್ರೆಸ್‌ ಮುಖಂಡ

Advertisement

Udayavani is now on Telegram. Click here to join our channel and stay updated with the latest news.

Next